ಶಿವಮೊಗ್ಗ: ಇಲ್ಲಿನ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ಕಮಲದ ಮಾದರಿ ಎಂದು ಕಾಂಗ್ರೆಸ್ ವಿರೋಧದ ವಿಚಾರಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದ್ದಾರೆ. ಕಮಲ ಎನ್ನುವುದು ಮಹಾಲಕ್ಷ್ಮಿಯ ಸಂಕೇತ. ಅದು ಕೇವಲ ಬಿಜೆಪಿ ಪಕ್ಷದ ಸ್ವತ್ತಲ್ಲ. ಟೀಕೆ ಮಾಡಲೆಂದೇ ಕಾಂಗ್ರೆಸ್ ಪಕ್ಷ ಇದೆ ಎನ್ನುವಂತಾಗಿದೆ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ವಿಚಾರಗಳಲ್ಲಿ ಸರ್ಕಾರ ಹಲವು ಯೋಚನೆಗಳನ್ನು ಮಾಡುತ್ತದೆ. ಹಲವು ರಾಜ್ಯಗಳಲ್ಲಿ ಅನೇಕ ಕಡೆ ಮಹಾಪುರುಷರ ಹೆಸರುಗಳನ್ನು ಇಡಲಾಗಿದೆ. ಇಂದಿರಾ ಗಾಂಧಿ, ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ ಹೆಸರನ್ನು ಇಟ್ಟಿದ್ದಾರೆ. ಆ ಸಂದರ್ಭದಲ್ಲೂ ಸಹ ಹಲವರು ವಿರೋಧ ಮಾಡಿದ್ದರು ಎಂದರು.
ಇಲ್ಲಿ ವಿಷಯ ಇರುವುದು ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಬೇಕಾಗಿರುವುದು. ಇದು ಶಿವಮೊಗ್ಗ ಮಾತ್ರವಲ್ಲದೇ ಸುತ್ತಮುತ್ತಲ ಜಿಲ್ಲೆಗಳ ಜನರ ಅಪೇಕ್ಷೆಯಾಗಿದೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕೂಡಲೇ ಅದಕ್ಕೆ ಎಲ್ಲಾ ವ್ಯವಸ್ಥೆ ಮಾಡಿದ್ದಾರೆ. ಅದರೆ ಕಮಲದ ಮಾದರಿ ಇದೆ ಎಂದು ಕಾಂಗ್ರೆಸ್ಸಿಗರು ವಿರೋಧ ಮಾಡುತ್ತಿದ್ದಾರೆ. ಕಮಲವನ್ನು ಏನು ಬಿಜೆಪಿಗೆ ಏನು ಗುತ್ತಿಗೆ ಕೊಟ್ಟಿದ್ದಾರೆಯೇ ಎಂದು ಕಿಡಿಕಾರಿದರು.
ಇದನ್ನೂ ಓದಿ:ನಕಲಿ ಲಸಿಕೆ ಕೇಂದ್ರದಲ್ಲಿ ಕೋವಿಡ್ ಲಸಿಕೆ ಪಡೆದ ನಟಿ, ಸಂಸದೆ ಮಿಮಿ ಚಕ್ರವರ್ತಿ! ಓರ್ವನ ಬಂಧನ
ಕಮಲ ಮಹಾಲಕ್ಷ್ಮಿಯ ಒಂದು ಸಂಕೇತ. ಇದನ್ನೂ ಕೂಡ ಕಾಂಗ್ರೆಸ್ಸಿಗರು ವಿರೋಧ ಮಾಡುತ್ತಿದ್ದಾರೆ. ಇದಕ್ಕೆ ಅರ್ಥವೇ ಇಲ್ಲ. ಅಭಿವೃದ್ಧಿಯ ಕೆಲಸಗಳು ಅಗುವ ಸಮಯದಲ್ಲಿ ಸಹಕಾರ ಕೊಡಬೇಕು. ಅದನ್ನು ಬಿಟ್ಟು ಎಲ್ಲವನ್ನೂ ಟೀಕಿಸುವುದಲ್ಲ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ನ ವಿರೋಧವನ್ನು ನೋಡುತ್ತಿದ್ದೇವೆ. ರೇಶನ್, ವ್ಯಾಕ್ಸಿನ್ ಎಲ್ಲವನ್ನು ಟೀಕಿಸಿದ್ದಾರೆ. ಟೀಕೆ ಮಾಡೋಕೆ ಕಾಂಗ್ರೆಸ್ ಪಕ್ಷ ಇದೆ ಎನ್ನುವಂತಾಗಿದೆ ಎಂದು ಈಶ್ವರಪ್ಪ ಟೀಕಿಸಿದರು.
ಕಮಲದ ಚಿಹ್ನೆ ಬಿಜೆಪಿ ಪಕ್ಷದ ಸ್ವತ್ತೇ? ಕಾಂಗ್ರೆಸ್ಸಿಗರ ಮನೆಯಲ್ಲಿ ಪೂಜೆ ಮಾಡುವವುರು ದೇವರ ಮನೆಯಿಂದ ಕಮಲದ ಹೂವು ತೆಗೆಯುತ್ತಾರೆಯೋ ಎಂದು ಅವರ ತಾಯಿಗೋ, ತಂಗಿಗೋ, ಹೆಂಡತಿಗೋ ಕೇಳಲಿ. ಕಮಲದ ಯಾರದ್ದು ಅಲ್ಲ, ಹಸ್ತ ಕಾಂಗ್ರೆಸ್ ನ ಗುರುತು ಎಂದು ಕೈ ಮಾಡಲಾಗುತ್ತದೆಯೇ ಎಂದರು.
ದೆಹಲಿಯಲ್ಲಿ ಅವರೇ ಕಟ್ಟಿಸಿದ ಲೋಟಸ್ ಮಹಲ್ ಇದೆ. ಹಾಗೆಂದು ಅದನ್ನು ಒಡೆದು ಹಾಕಲು ಅಗುತ್ತದೆಯೇ? ಪ್ರತಿಯೊಂದಕ್ಕೂ ವಿರೋಧ ಮಾಡು ಸರಿಯಲ್ಲ. ಇಂತಹ ಟೀಕೆ ಮಾಡುವವರಿಗೆ ಕಾಂಗ್ರೆಸ್ ನಾಯಕರೇ ಬುದ್ದಿ ಹೇಳಬೇಕು ಎಂದ ಈಶ್ವರಪ್ಪ ಹೇಳಿದರು.