Advertisement

ಸಚಿವ ಸ್ಥಾನ ಕೊಟ್ಟಿಲ್ಲ- ಅಧಿವೇಶನಕ್ಕೆ ಹೋಗಲ್ಲ: ಸಿಎಂ ಬೊಮ್ಮಾಯಿ ವಿರುದ್ದ ಈಶ್ವರಪ್ಪ ಅಸಮಾಧಾನ

12:20 PM Dec 19, 2022 | Team Udayavani |

ಬಾಗಲಕೋಟೆ: ಸಚಿವ ಸ್ಥಾನ ಕೊಡದಿದ್ದಕ್ಕೆ ತೀವ್ರ ಬೇಸರ ಹೊರ ಹಾಕಿರುವ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಇದೀಗ ಸಿಎಂ ಬೊಮ್ಮಾಯಿ ವಿರುದ್ದವೂ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಳಗಾವಿಗೆ ಹೋಗುತ್ತೇನೆ. ಆದರೆ ಅಧಿವೇಶನಕ್ಕೆ ಹೋಗಲ್ಲ. ಬೆಳಗಾವಿಗೆ ಹೋಗುತ್ತಿರುವ ಉದ್ದೇಶ ಸಭಾಧ್ಯಕ್ಷರಿಗೆ ಈ ವಾರ ನಾನು ಸದನಕ್ಕೆ ಹಾಜರಾಗಲ್ಲ ಅಂತ ಅನುಮತಿ ಪಡೆಯಲು ಹೋಗುತ್ತಿದ್ದೇನೆ ಎಂದರು.

ಯಾಕೆ ಅಂತಾ ನೀವು ಪತ್ರಕರ್ತರು ಕೇಳುತ್ತೀರಿ? ಅದಕ್ಕೆ ಉತ್ತರವನ್ನು ನಾನೇ ಕೊಡುತ್ತೇನೆ. ಸ್ನೇಹಿತರೊಬ್ಬರು, ಅಪರಾಧದಿಂದ ಮುಕ್ತರಾದವರಿಗೆ ಯಾವ ಕಾರಣಕ್ಕೂ ಶಿಕ್ಷೆ ಆಗಲ್ಲ ಎಂದು ಹೇಳಿದ್ದರು. ನನ್ನ ವಿಚಾರದಲ್ಲಿ ತೀರ್ಪು ಬಂದಿದೆ. ಕ್ಲೀನ್ ಚೀಟ್ ಕೂಡಾ ಬಂದಿದೆ. ಇವತ್ತು, ನಾಳೆ ನಿಮ್ಮನ್ನು ಮಂತ್ರಿ ಮಾಡುತ್ತೇವೆ ಅಂತ ಸಿಎಂ ಬೊಮ್ಮಾಯಿ ತಿಳಿಸುತ್ತಾ ಬಂದಿದ್ದಾರೆ. ನಿಮ್ಮಂತವರು ಸಚಿವ ಸಂಪುಟದಲ್ಲಿ ಇರಬೇಕೆಂದು ಹೇಳುತ್ತಾನೆ ಇದ್ದಾರೆ. ಆದರೆ ಯಾಕೆ ಸಂಪುಟಕ್ಕೆ ತಗೆದುಕೊಳ್ಳಲಿಲ್ಲ ನನಗೆ ಗೊತ್ತಿಲ್ಲ ಎಂದು ಬೇಸರ ಹೊರ ಹಾಕಿದರು.

ಇಡೀ ಕರ್ನಾಟಕದಿಂದ ನನಗೆ ಫೋನ್ ಮಾಡುತ್ತಿದ್ದಾರೆ. ಯಾಕೆ ನಿಮ್ಮನ್ನು ಸಂಪುಟಕ್ಕೆ ತಗೊಂಡಿಲ್ಲ ಅಂತ ಪ್ರಶ್ನಿಸ್ತಿದಾರೆ. ನಮಗೆಲ್ಲ ತುಂಬಾ ನೋವಾಗಿದೆ ಅಂತಾ ಹೇಳುತ್ತಿರುವುದರಿಂದ‌ ನನಗೂ ನೋವಾಗ್ತಿದೆ. ಅಪಮಾನವಾಗುತ್ತಿದೆ. ಇದನ್ನು ಅರ್ಥ ಮಾಡಿಸಬೇಕು. ಒಂದೇ ಉದ್ದೇಶದಿಂದ ಇವತ್ತು ನಾನು ಒಂದು ರೀತಿಯ ಸೌಜನ್ಯ ಪ್ರತಿಭಟನೆ ಮಾಡ್ತಿದೀನಿ ಎಂದರು.

ಇದನ್ನೂ ಓದಿ:ವಿಶ್ವಕಪ್ ನೊಂದಿಗೆ ಅರ್ಜೆಂಟೀನಾ ಗೆದ್ದ ಹಣವೆಷ್ಟು ಗೊತ್ತಾ? ಫ್ರಾನ್ಸ್ ಗೆ ಸಿಕ್ತು 248 ಕೋಟಿ!

Advertisement

ನನ್ನನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಎನ್ನುವ ಪ್ರಶ್ನೆ ಬರಲ್ಲ. ನನಗೇನು ವಯಸ್ಸಾಗಿದೆಯಾ? ಇದನ್ನು ತೀರ್ಮಾನ ಮಾಡುವುದು ಸಿಎಂ ಅಲ್ಲ. ಟಿಕೆಟ್ ಕೊಡುವ ಸಂದರ್ಭದಲ್ಲಿ ಪಕ್ಷ ತೀರ್ಮಾನ ಮಾಡುವಂತದ್ದು. ಮೊನ್ನೆ ತನಕ ನಾನು ಸಂಪುಟದಲ್ಲಿ ಇದ್ದವನು. ನನ್ನ‌ ಮೇಲೆ ಆಪಾದನೆ ಬಂದ ಮೇಲೆ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಪ್ರಾರಂಭದಲ್ಲಿ ಬೇಡ ಅಂದರು. ನಾನು ಅವರನ್ನು ಒಪ್ಪಿಸಿ ರಾಜೀನಾಮೆ ಕೊಟ್ಟಿದ್ದೆ. ಕೆ.ಜೆ.ಚಾರ್ಜ್ ಅವರು ಆಪಾದನೆ ಹೊತ್ತಾಗ ರಾಜೀನಾಮೆ ಕೊಡಿ ಎಂದು ವಿಪಕ್ಷ ನಾಯಕನಾಗಿ ಒತ್ತಾಯಿಸಿದ್ದೆ. ಅವರು ರಾಜೀನಾಮೆ ಕೊಟ್ಟರು. ಕ್ಲೀನ್ ಚೀಟ್ ಬಂದ ತಕ್ಷಣ ಕಾಂಗ್ರೆಸ್ ನವರು ಅವರನ್ನ ಸಂಪುಟಕ್ಕೆ ಸೇರಿಸಿಕೊಂಡರು. ಈಗ ನನಗೆ ಕ್ಲೀನ್ ಚೀಟ್ ಸಿಕ್ಕಿದೆ. ಆದರೆ, ನಮ್ಮ ಸರ್ಕಾರದ ನಾಯಕ ಬೊಮ್ಮಾಯಿಗೆ ಏನು ತೊಂದರೆ. ನನಗೆ ಗೊತ್ತಿಲ್ಲ ಎಂದು ಹೇಳಿದರು.

ಯಾವುದೇ ವಿಚಾರದಲ್ಲಿ ಪಕ್ಷ ನನ್ನ ನಿರ್ಲಕ್ಷ್ಯ ಮಾಡಿಲ್ಲ. ಮೊನ್ನೆ ಪಕ್ಷದ ಕಚೇರಿ ಉದ್ಘಾಟನೆಗೆ ಬಾಗಲಕೋಟೆಗೆ ಕಳಿಸಿತ್ತು. ಕಲಬುರಗಿಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಕಳಿಸಿತ್ತು. ನಿರ್ಲಕ್ಷ್ಯ ಮಾಡಿದರೆ ನನ್ನೇಕೆ ಕಳಿಸುತ್ತಿತ್ತು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next