ಶಿವಮೊಗ್ಗ: ನಗರದ ಸಿದ್ದಯ್ಯ ರಸ್ತೆ ಹಾಗೂ ಎಂಕೆಕೆ ರಸ್ತೆಯಲ್ಲಿ ಬುಧವಾರ ತಡರಾತ್ರಿ ನಡೆದ ಘಟನೆಯ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಹಾನಿಗೊಳಗಾದ ವಾಹನಗಳ ಪರಿಶೀಲಿಸಿ ಮಾತನಾಡಿದ ಸಚಿವ ಈಶ್ವರಪ್ಪ, ಶಿವಮೊಗ್ಗದಲ್ಲಿ ರಾತ್ರಿ ವಾಹನಗಳ ಜಖಂಗೊಳಿಸಿ, ಅಶಾಂತಿ ಸೃಷ್ಟಿಸುವ ಕೆಲಸ ಮಾಡಿದ್ದಾರೆ. ಈ ಹಿಂದೆ ಕೂಡ ಸಿಗೇಹಟ್ಟಿ ಭಾಗದಲ್ಲಿ ಘಟನೆ ನಡೆದಿತ್ತು. ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಪೊಲೀಸ್ ಇಲಾಖೆಯ ಪ್ರಕಾರ 17ಕ್ಕೂ ಹೆಚ್ಚು ವಾಹನಕ್ಕೆ ಹಾನಿಯಾಗಿದೆ. ಘಟನೆಯಲ್ಲಿ ಯಾರ ಕೈವಾಡ ಇದೆ ಎನ್ನುವುದು ತನಿಖೆಯ ಬಳಿಕ ತಿಳಿದುಬರುತ್ತದೆ ಎಂದರು.
ಶಿವಮೊಗ್ಗದಲ್ಲಿ ಮತ್ತೆ ಮತ್ತೆ ಈ ರೀತಿ ಘಟನೆ ನಡೆಯುತ್ತಿದ್ದು, ಪೊಲೀಸ್ ಇಲಾಖೆಗೆ ನಾನು ಎಚ್ಚರಿಕೆ ಕೊಡುತ್ತೆನೆ. ಸಮಾಜ ಘಾತುಕ ಶಕ್ತಿಗಳ ಬಗ್ಗೆ ಪೊಲೀಸ್ ಇಲಾಖೆ ನಿಗಾ ವಹಿಸಬೇಕು ಎಂದರು.
ಕೋವಿಡ್ ಸಮಯದಲ್ಲಿ ಪೊಲೀಸರು ಸೇರಿದಂತೆ ಎಲ್ಲರೂ ಕರ್ತವ್ಯದಲ್ಲಿ ನಿರತರಾಗಿದ್ದಾರೆ. ಇಂಥ ಸಂಕಷ್ಟದ ಸಮಯದಲ್ಲಿ ದ್ರೋಹಿಗಳು ಆಶಾಂತಿ ಸೃಷ್ಟಿಸಲು ಹೊರಟಿದ್ದಾರೆ. ಯಾರು ಈ ರೀತಿ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕಾಗಿ ಮಾಡುತ್ತಿದ್ದಾರೆ ಎನ್ನುವುದು ತನಿಖೆಯಲ್ಲಿ ತಿಳಿಯುತ್ತದೆ ಎಂದು ಅವರು ಹೇಳಿದರು.
ಈ ಹಿಂದೆ ಘಟನೆ ನಡೆದಾಗಲು ಮುಸ್ಲಿಂ ಯುವಕರು ಭಾಗಿಯಾಗಿದ್ದರು. ಈಗ ಕೂಡ ಇಬ್ಬರು ಮುಸ್ಲಿಂ ಯುವಕರೇ ಸಿಕ್ಕಿದ್ದಾರೆ. ಘಟನೆ ಹಿಂದಿನ ಕುತಂತ್ರ ತಿಳಿದ ಬಳಿಕ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿದರು.