ಬಂಟ್ವಾಳ: ಕೇಂದ್ರ ಸರಕಾರದ ಜಲಜೀವನ್ ಯೋಜನೆಯನ್ನು ಮನೆ ಮನೆಗೆ ಗಂಗೆ ಹೆಸರಿನಲ್ಲಿ ಪ್ರತಿ ಮನೆಗೂ ನಲ್ಲಿ ನೀರು ಪೂರೈಕೆ ಮಾಡಿ ಕರ್ನಾಟಕದಲ್ಲಿ ಮೂರೇ ವರ್ಷದಲ್ಲಿ ಪೂರ್ಣ ಅನುಷ್ಠಾನದ ಗುರಿ ಹೊಂದಲಾಗಿದೆ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ರವಿವಾರ ಬಿ.ಸಿ.ರೋಡಿನಲ್ಲಿ ಬಂಟ್ವಾಳ ಕ್ಷೇತ್ರದ ನರಿಕೊಂಬು ಹಾಗೂ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಉದ್ಘಾಟಿಸಿದರು.
ಪ್ರಸ್ತುತ ಬಂಟ್ವಾಳ 2 ಯೋಜನೆಯನ್ನು ಉದ್ಘಾಟಿಸಲಾಗಿದ್ದು, ಉಳಿದಿರುವ ಗ್ರಾಮಗಳಿಗೆ ಸಂಬಂಧಿಸಿ ಬಂಟ್ವಾಳಕ್ಕೆ 60 ಕೋ.ರೂ. ಹಾಗೂ ಮಂಗಳೂರು ಉತ್ತರಕ್ಕೆ 140 ಕೋ.ರೂ. ಸೇರಿ 200 ಕೋ.ರೂ.ಗಳಿಗೆ ಸಚಿವ ಸಂಪುಟದ ಅನುಮತಿ ಪಡೆಯಲಾಗುವುದು ಎಂದರು.
ಇದನ್ನೂ ಓದಿ:ನುಕ್ಯಾಡಿ ಉದ್ಭವ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಸಚಿವ ಈಶ್ವರಪ್ಪ ಭೇಟಿ
ಬಂಟ್ವಾಳ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ತೊಂದರೆ ನೀಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಸಿದ್ದರಾಮಯ್ಯ ಹಾಗೂ ಅವರು ಯಾವಾಗಲೂ ನಿದ್ದೆ ಮಾಡುತ್ತಿದ್ದು, ನಿದ್ರೆಯಿಂದ ಎದ್ದರೆ ಏನಾದರೂ ತೊಂದರೆ ನೀಡುತ್ತಾರೆ. ನಿಮ್ಮನ್ನು ಜನ ಸೋಲಿಸಿ ಮನೆಗೆ ಕಳುಹಿಸಿದ್ದು, ಅಭಿವೃದ್ಧಿ ಕಾರ್ಯಕ್ಕೆ ತೊಂದರೆ ನೀಡಿದರೆ ಮುಂದಿನ ಚುನಾವಣೆಯಲ್ಲಿ ಡಿಪಾಸಿಟ್ ಕಳೆದುಕೊಳ್ಳುತ್ತೀರಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ, ರಾಜೇಶ್ ನಾಯ್ಕ್ ಅವರ ರಾಜಧರ್ಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಜಿ.ಪಂ.ಅಧ್ಯಕ್ಷತೆ ಮೀನಾಕ್ಷಿ ಶಾಂತಿಗೋಡು, ಸದಸ್ಯರಾದ ತುಂಗಪ್ಪ ಬಂಗೇರ, ರವೀಂದ್ರ ಕಂಬಳಿ, ಮಂಜುಳಾ ಮಾವೆ, ಕಮಲಾಕ್ಷಿ ಪೂಜಾರಿ, ಸಿಇಓ ಡಾ. ಸೆಲ್ವಮಣಿ, ಕಾರ್ಯಪಾಲಕ ಎಂಜಿನಿಯರ್ ನರೇಂದ್ರಬಾಬು ಉಪಸ್ಥಿತರಿದ್ದರು.
ತಾ.ಪಂ.ಇಒ ರಾಜಣ್ಣ ಸ್ವಾಗತಿಸಿದರು. ಎಇಇ ತಾರಾನಾಥ ಸಾಲ್ಯಾನ್ ವಂದಿಸಿದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.