ಶಿವಮೊಗ್ಗ: ತಾಳ್ಮೆಗೂ ಒಂದು ಮಿತಿ ಇರುತ್ತದೆ. ತಾಳ್ಮೆ ಮೀರಿದರೆ ಪರಿಸ್ಥಿತಿ ಕಷ್ಟವಾಗುತ್ತದೆ. ಮುಸಲ್ಮಾನ್ ಗೂಂಡಾಗಿರಿಯಿಂದ ಶಿವಮೊಗ್ಗದಲ್ಲಿ ವ್ಯಾಪಾರ ನಷ್ಟವಾಗುತ್ತಿದೆ. ಮುಸಲ್ಮಾನ್ ಗೂಂಡಾಗಿರಿ ಶಿವಮೊಗ್ಗದಲ್ಲಿ ನಡೆಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ದಾಳಿಗೊಳಗಾದ ಯುವಕನ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ಮುಸಲ್ಮಾನ್ ಕುತಂತ್ರಿಗಳು ಗಲಭೆ ಉಂಟುಮಾಡುವ ಪ್ರಯತ್ನ ಮಾಡಿಕೊಂಡು ಬಂದಿದ್ದಾರೆ. ಹಿಂದೂ ಸಮಾಜದ ಯುವಕರನ್ನು ನಾವು ಸಮಾಧಾನ ಮಾಡುತ್ತಲೇ ಬಂದಿದ್ದೇವೆ. ಹಿಂದು ಯುವಕರು ಶಾಂತಿಯಿಂದಲೇ ಇದ್ದರು. ಆದರೆ ಇದೀಗ ಬಜರಂಗದಳದ ಸಹಸಂಚಾಲಕ ನಾಗೇಶ್ ಮೇಲೆ ಪೂರ್ವಯೋಜನೆ ಮಾಡಿ ಹಲ್ಲೆ ನಡೆಸಿದ್ದಾರೆ. ನಾಲ್ವರು ಮುಸಲ್ಮಾನ್ ಗುಂಡಾಗಳು ನಾಗೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಹೇಡಿಗಳ ರೀತಿ ಒಬ್ಬನ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಹಿಂದೂ ಸಮಾಜ ಎಷ್ಟು ತಡೆದುಕೊಳ್ಳಬೇಕೋ ಅಷ್ಟು ತಡೆದುಕೊಳ್ಳುತ್ತದೆ. ಮುಸ್ಲಿಂ ಸಮಾಜದ ದುಷ್ಟ ಶಕ್ತಿಗಳು ಹಾಗೂ ಹೊರಗಿನಿಂದ ಬಂದ ದುಷ್ಟ ಶಕ್ತಿಗಳಿಗೆ ಶಿವಮೊಗ್ಗ ಶಾಂತವಾಗಿರುವುದು ಬೇಕಾಗಿಲ್ಲ. ಈ ಘಟನೆಗೆ ಕಾರಣವಾಗಿರುವ ಗೂಂಡಾಗಳನ್ನು ನಮ್ಮ ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದರು.
ಇದನ್ನೂ ಓದಿ:ಬೂದಿ ಮುಚ್ಚಿದ ಕೆಂಡದಂತಿರುವ ಶಿವಮೊಗ್ಗ ನಗರ: ಅಂಗಡಿ ಮುಂಗಟ್ಟುಗಳು ಬಂದ್, ಪೊಲೀಸ್ ಬಂದೋಬಸ್ತ್
ಮುಸ್ಲಿಂ ಗೂಂಡಾಗಳಿಗೆ ಆ ಸಮುದಾಯದ ಮುಖಂಡರು ಬುದ್ದಿ ಹೇಳಿ ಶಿಕ್ಷೆ ಕೊಡಬೇಕು. ನೀವು ಬುದ್ದಿ ಹೇಳಿ ಶಿಕ್ಷೆ ಕೊಡದಿದ್ದರೆ ಸರ್ಕಾರ ಮುಸ್ಲಿಂ ಗೂಂಡಾಗಳಿಗೆ ಬುದ್ದಿಯನ್ನು ಹೇಳುತ್ತೇವೆ, ಶಿಕ್ಷೆಯನ್ನು ನೀಡುತ್ತೇವೆ ಎಂದು ಖಾರವಾಗಿ ಮಾತನಾಡಿದರು.
ಮುಸ್ಲಿಂ ಯುವಕರಿಗೂ ಪೆಟ್ಟಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಇಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಆಗಿದೆ ಅಷ್ಟೇ. ಗೂಂಡಾಗಿರಿಗೆ ಪ್ರತಿಯಾಗಿ ಗೂಂಡಾಗಿರಿ ನಡೆದಿದೆ. ಈ ಘಟನೆ ಪೂರ್ವನಿಯೋಜಿತ. ಗೋಪಾಳದಲ್ಲಿ ಮೂವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರ ಬಂಧನವಾಗಿದೆ. ಗೋ ಹತ್ಯೆ ತಡೆಯುತ್ತಾನೆ ಎಂಬ ಕಾರಣಕ್ಕೆ ನಾಗೇಶ್ ಮೇಲೆ ಹಲ್ಲೆ ನಡೆದಿದೆ ಎಂದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಮುಂದುವರಿದ ಗಲಾಟೆ: ಹಲವೆಡೆ ವಾಹನಗಳು ಜಖಂ! ಸ್ಥಳಕ್ಕೆ ಐಜಿಪಿ ಭೇಟಿ
ತಹಶೀಲ್ದಾರ್ ಎರಡು ಕೋಮಿನ ಮಧ್ಯೆ ಗಲಭೆಯಾಗಿದೆ ಎಂದಿದ್ದಾರೆ. ಅವರಿಗೆ ಗೆ ತಲೆ ಸರಿಯಿಲ್ಲ. ಇಲ್ಲಿ ಒಬ್ಬ ಹೋಗುವಾಗ ನಾಲ್ಕು ಜನ ಬಂದು ಹೊಡೆದಿದ್ದಾರೆ, ಅದು ಮುಸಲ್ಮಾನ್ ಗೂಂಡಾಗಿರಿ. ಅದನ್ನು ಮೊದಲು ತಹಶೀಲ್ದಾರ್ ತಿಳಿದುಕೊಳ್ಳಬೇಕು ಎಂದ ಅವರು ಈ ಘಟನೆಯಲ್ಲಿ ಹಿಂದೂ ಯುವಕರ ತಪ್ಪೇನಿದೆ ಎಂದು ಈಶ್ವರಪ್ಪ ಪ್ರಶ್ನಿಸಿದರು.