Advertisement

ಅಯೋಧ್ಯೆ ಪ್ರಕರಣದಲ್ಲಿ ಹಿಂದೂಗಳ ಪರ ವಾದ ಮಾಡಿದ್ದು 93 ವರ್ಷದ ಕೆ. ಪರಾಶರನ್

09:47 AM Nov 10, 2019 | Hari Prasad |

ಹೊಸದಿಲ್ಲಿ: ಸುದೀರ್ಘ ಸಮಯದಿಂದ ಇತ್ಯರ್ಥಗೊಳ್ಳದೇ ಉಳಿದಿದ್ದ ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಪ್ರಕಟವಾಗುವುದರ ಮೂಲಕ ಈ ಪ್ರಕರಣದಲ್ಲಿ ರಾಮ್ ಲಲ್ಲಾ ವಿರಾಜಮಾನ್ ಸಹಿತ ಹಿಂದೂ ಕಕ್ಷಿದಾರರ ಪರ ವಾದ ಮಾಡಿದ್ದ 93 ವರ್ಷದ ಹಿರಿಯ ವಕೀಲ ಕೆ. ಪರಾಶರಣ್‌ ಅವರ ಹೋರಾಟಕ್ಕೆ ಇದೀಗ ಅಲ್ಪವಿರಾಮ ಸಿಕ್ಕಿದಂತಾಗಿದೆ. ಕಳೆದ ಎಂಟು ತಿಂಗಳುಗಳಿಂದ ಪರಾಶರನ್ ಅವರು ಈ ಪ್ರಕರಣಕ್ಕಾಗಿ ಭಾರೀ ಸಿದ್ಧತೆಯನ್ನು ಮಾಡಿಕೊಂಡಿದ್ದರು.

Advertisement

ತಮ್ಮ ಈ ಇಳಿವಯಸ್ಸಿನಲ್ಲೂ ಅವರು ವಿಶ್ರಾಂತಿರಹಿತರಾಗಿ ಅಯೋಧ್ಯೆ ಪ್ರಕರಣದ ತೀರ್ಪು ತನ್ನ ಕಕ್ಷಿದಾರರ ಪರವಾಗಿ ಬರುವಂತೆ ಮಾಡುವಲ್ಲಿ ಪರಾಶರನ್ ಅವರು ನ್ಯಾಯಾಲಯದಲ್ಲಿ ಮಾಡಿದ ವಾದ ಸರಣಿ ಮತ್ತು ಅವರ ಕಾರ್ಯದಕ್ಷತೆಗೆ ಇದೀಗ ಸರ್ವತ್ರ ಪ್ರಶಂಸೆಗೆ ಪಾತ್ರವಾಗಿದೆ.

ಈ ಹಿರಿಯ ಜೀವ ತನ್ನ ಜೀವನದ ಬಹುಪಾಲು ಅವಧಿಯನ್ನು ಕೇವಲ ಕೋರ್ಟ್‌ ಕಲಾಪಗಳಿಗೆ ಮೀಸಲಿರಿಸಿದ್ದರು. ಇನ್ನೂ ವಿಶೇಷವೆಂದರೆ ಅವರು ತಮ್ಮ ಈ ಇಳಿವಯಸ್ಸಿನಲ್ಲೂ ಅಯೋಧ್ಯೆ ರಾಮ ಜನ್ಮಭೂಮಿ ಪ್ರಕರಣದಲ್ಲಿ ತಮ್ಮ ಕಕ್ಷಿದಾರರ ಪರವಾಗಿ ವಾದಿಸುವ ಮೂಲಕ ಪರಶರಣ್ ಅವರು ಇದೀಗ ಇಡೀ ದೇಶದ ಗಮನ ಸೆಳೆದಿದ್ದಾರೆ. 1927ರ ಅಕ್ಟೋಬರ್‌ 27ರಂದು ಜನಿಸಿದ ಪರಾಶರನ್ ಅವರು ಕಾನೂನಿನ ಮೇಲೆ ವಿಶೇಷ ಆಸಕ್ತಿ ಹೊಂದಿದ್ದರು. ದೀರ್ಘ‌ ಸಮಯ ಕಾನೂನಿನ ಹೋರಾಟದಲ್ಲಿ ಭಾಗಿಯಾದ ದೇಶದ ಮೊದಲ ವಕೀಲರೂ ಹೌದು.

ಇನ್ನು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಗೊಳ್ಳಲೇಬೇಕು ಎಂಬ ಉದ್ದೇಶದಿಂದ ಹಗಲಿರುಳು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದವರಲ್ಲಿ ಪರಾಶರನ್ ಅವರೂ ಒಬ್ಬರು. ಪ್ರತೀದಿನದ ಕೋರ್ಟ್‌ ಕಲಾಪಗಳಿಗೆ ಒಂದು ದಿನ ಮುಂಚಿತವಾಗಿಯೇ ಸಿದ್ಧಗೊಳ್ಳುವ ಪರಿಪಾಠವನ್ನು ಪರಾಶರನ್ ಅವರು ಅಳವಡಿಸಿಕೊಂಡಿದ್ದರು.

ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಸುದೀರ್ಘ ವಿಚಾರಣೆಗೊಳಗಾದ ಪ್ರಕರಣಗಳಲ್ಲಿ ಒಂದು ಎಂದೇ ಗುರುತಿಸಿಕೊಳ್ಳುತ್ತಿರುವ ರಾಮ ಜನ್ಮಭೂಮಿ ವಿವಾದ ಪ್ರಕರಣದಲ್ಲಿ ಶ್ರೀ ರಾಮಚಂದ್ರನ ವಿಚಾರದಲ್ಲಿ ಭಾವನಾತ್ಮಕ ಸಂಬಂಧವನ್ನು ಹೊಂದಿದ್ದ ಕಾರಣಕ್ಕಾಗಿಯೇ ಪರಾಶರನ್ ಅವರು ತಮ್ಮ ಯುವ ವಕೀಲರ ತಂಡದ ಸಹಾಯದೊಂದಿಗೆ ಈ ಪ್ರಕರಣದಲ್ಲಿ ವಾದಿಸಿ ತಮ್ಮ ಕಕ್ಷಿದಾರರಿಗೆ ಗೆಲುವನ್ನು ತಂದಿತ್ತಿದ್ದಾರೆ.

Advertisement

ಸುಪ್ರೀಂ ಕೋರ್ಟಿನ ಸಾಂವಿಧಾನಿಕ ಪೀಠದ ಎದುರು ಸತತ 40 ದಿನಗಳ ಕಾಲ ನಡೆದ ಈ ವಾದ ಸರಣಿಯ ಸಂದರ್ಭದಲ್ಲಿ ನ್ಯಾಯವಾದಿ ಪರಾಶರನ್ ಅವರು ಈ ಪ್ರಕರಣದ ಪ್ರತೀ ಅಂಶಗಳ ಕುರಿತಾಗಿಯೂ ನ್ಯಾಯಪೀಠದ ಗಮನ ಸೆಳೆಯುತ್ತಿದ್ದರು. ಪ್ರತೀದಿನ 10.30ಕ್ಕೆ ಪ್ರಾರಂಭವಾಗುತ್ತಿದ್ದ ಕೋರ್ಟ್ ಕಲಾಪ ಸಾಯಂಕಾಲ 4 ಅಥವಾ 5 ಗಂಟೆಗೆ ಮುಕ್ತಾಯಗೊಳ್ಳುತ್ತಿತ್ತು.

ಪಿ.ವಿ. ಯೋಗೇಶ್ವರನ್, ಅನಿರುದ್ ಶರ್ಮಾ, ಶ್ರೀಧರ್ ಪೊಟ್ಟರಾಜು ಮತ್ತು ಅದಿತಿ ದಾನಿ ಅವರಿದ್ದ ಯುವ ವಕೀಲ ಪಡೆ ಪರಾಶರನ್ ಅವರಿಗೆ ಸಹಾಯ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಹಲವಾರು ವಿಷಯಗಳು ಈ ಹಿರಿಯ ನ್ಯಾಯವಾದಿಯ ನಾಲಗೆ ತುದಿಯಲ್ಲೇ ಇರುತ್ತಿದ್ದುದು ಅವರ ಕುಂದದ ಜ್ಞಾಪಕ ಶಕ್ತಿಗೊಂದು ಉತ್ತಮ ಉದಾಹರಣೆಯಾಗಿತ್ತು ಮತ್ತಿದು ನ್ಯಾಯಾಲಯದಲ್ಲಿ ಎಲ್ಲರ ಅಚ್ಚರಿಗೂ ಕಾರಣವಾಗುತ್ತಿತ್ತು.

ಪರಾಶರನ್ ಅವರಿಗೆ ಪ್ರತಿವಾದಿಯಾಗಿದ್ದವರು ಮುಸ್ಲಿಂ ಅರ್ಜಿದಾರರ ಪರವಾಗಿ ವಾದಿಸುತ್ತಿದ್ದ ರಾಜೀವ್ ಧವನ್ ಅವರು. ಧವನ್ ಹೇಳಿಕೇಳಿ ನ್ಯಾಯಾಲಯದಲ್ಲಿ ಭಯಂಕರ ಪ್ರತಿವಾದಿಯಾಗಿದ್ದರು. ಎದುರಾಲಿ ಕಕ್ಷಿದಾರರಿಗೆ ಪ್ರಖರ ಪ್ರಶ್ನೆಗಳನ್ನು ಕೇಳುವುದು, ಪಾಯಿಂಟ್ ಗಳನ್ನು ಹಾಕುವುದರಲ್ಲಿ ಧವನ್ ಹೆಸರುವಾಸಿ.

ಆದರೆ 40 ದಿನಗಳ ವಿಚಾರಣೆಯ ಸಂದರ್ಭದಲ್ಲಿ ಪರಾಶರನ್ ಅವರು ಯಾವುದೇ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳದೇ ಇದ್ದಿದ್ದೂ ಒಂದು ವಿಶೇಷವೇ. ಕೆಲವು ಹಂತದಲ್ಲಂತೂ ಧವನ್ ಅವರು ಕೆಲವೊಂದು ಕಾಗದ ಪತ್ರಗಳನ್ನು ಹರಿದು ಹಾಕುತ್ತಿದ್ದರು ಮತ್ತು ಇನ್ನು ಕೆಲವು ಸಂದರ್ಭದಲ್ಲಿ, ‘ಹಿಂದೂ ಕಡೆಯ ವಕೀಲವರ ವಾದ ಮೂರ್ಖತನದಿಂದ ಕೂಡಿದ್ದು…’ ಎಂದು ಹೇಳಿದಾಗಲೂ ಪರಾಶರನ್ ಅವರಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿರಲಿಲ್ಲ.

ಅಕ್ಟೋಬರ್ 16ರಂದು ಜನ್ಮಭೂಮಿ ಪ್ರಕರಣದ ವಾದವೆಲ್ಲಾ ಮುಕ್ತಾಯಗೊಂಡ ಬಳಿಕ ಪರಾಶರನ್ ಅವರು ನ್ಯಾಯಾಲಯದ ಹೊರಭಾಗದಲ್ಲಿ 15 ನಿಮಿಷಗಳ ಕಾಲ ರಾಜೀವ್ ಧವನ್ ಅವರಿಗಾಗಿ ಕಾದು ಕುಳಿತಿದ್ದರು. ಈ ವಿಚಾರ ತಿಳಿದ ರಾಜೀವ್ ಧವನ್ ಅವರು ಹೊರಗೆ ಬಂದು ಪರಾಶರನ್ ಅವರನ್ನು ಭೇಟಿಯಾಗಿ ಅವರೊಂದಿಗೆ ಫೊಟೋ ಕ್ಲಿಕ್ಕಿಸಿಕೊಂಡಿದ್ದರು.

ಇದು ಇವರಿಬ್ಬರ ವೃತ್ತಿಪರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು. ಹೀಗೆ ದೇಶದ ಇತಿಹಾಸದಲ್ಲೇ ಸುದೀರ್ಘ ಪ್ರಕರಣವೊಂದನ್ನು ಇಬ್ಬರು ಹಿರಿಯ ನ್ಯಾಯವಾದಿಗಳು ವಾದಿಸಿ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಒದಗಿಸಿಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದು ಒಂದು ವಿಶೇಷವೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next