ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಈಗ “ಪಡ್ಡೆಹುಲಿ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಅಡಿಯಿಡಲು ತೆರೆಮರೆಯಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಅಂತಿಮ ಹಂತದ ಕೆಲಸಗಳಲ್ಲಿ ನಿರತವಾಗಿರುವ “ಪಡ್ಡೆಹುಲಿ’ ಹಾಡೊಂದು ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇನ್ನು ಚಿತ್ರದಲ್ಲಿ ನಾಯಕ ಶ್ರೇಯಸ್ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಫಾಲೋ ಮಾಡುವ ಅವರ ಅಪ್ಪಟ ಅಭಿಮಾನಿ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ “ಪಡ್ಡೆಹುಲಿ’ ಚಿತ್ರದ ಹಾಡನ್ನು ಮೊದಲಿಗೆ ವಿಷ್ಣುವರ್ಧನ್ ಅಭಿಮಾನಿಗಳಿಗೆ ಹಾಗೂ ಆತ್ಮೀಯರಿಗೆ ತೋರಿಸಲಾಯಿತು. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ನಟ ದ್ವಾರಕೀಶ್, ಶಿವರಾಮ್, ನಿರ್ದೇಶಕ ನಾಗಣ್ಣ, ರವಿ ಶ್ರೀವತ್ಸ, ಗೀತ ಸಾಹಿತಿ ಕೆ. ಕಲ್ಯಾಣ್, ಡಾ. ವಿ. ನಾಗೇಂದ್ರ ಪ್ರಸಾದ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದು, ವಿಷ್ಣು ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ “ಪಡ್ಡೆಹುಲಿ’ಯ ಹಾಡನ್ನು ವೀಕ್ಷಿಸಿದರು.
ಇದೇ ವೇಳೆ ಮಾತನಾಡಿದ ದ್ವಾರಕೀಶ್, “ನಾನು ವಿಷ್ಣುವನ್ನು ನೆನೆಯದ ದಿನವೇ ಇಲ್ಲ. ಆಗಾಗ್ಗೆ ಕನಸಿನಲ್ಲಿ ಬರುತ್ತಾನೆ. ಕನಸಿನಲ್ಲೂ ಸಿನಿಮಾ ಬಗ್ಗೆಯೇ ಚರ್ಚಿಸುತ್ತಾನೆ. ವಿಷ್ಣು ಕನ್ನಡ ಚಿತ್ರರಂಗ ಕಂಡ ಅತ್ಯಂತ ಸುಂದರ ನಟ. ಈ ದ್ವಾರಕೀಶ್ ಸಾಧನೆಗೆ ಅವನೇ ಕಾರಣ. ವಿಷ್ಣು ಜೊತೆ 19 ಸಿನಿಮಾ ಮಾಡಿದ್ದೇನೆ. ಮದ್ರಾಸಿನಲ್ಲಿ “ನಾಗರಹಾವು’ ಸಿನಿಮಾದ ಮೊದಲ ಶೋ ನೋಡಿದಾಗ ಪುಟ್ಟಣ್ಣ, ಎನ್. ವೀರಸ್ವಾಮಿ, ವಿಷ್ಣು ಕೂಡಾ ಜೊತೆಗಿದ್ದರು’ ಎಂದು ವಿಷ್ಣುವನ್ನು ನೆನೆದು ದ್ವಾರಕೀಶ್ ಭಾವುಕರಾದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟ ಶಿವರಾಮ್, “ನಾನು ವಿಷ್ಣು ಆಗಮನ ಹಾಗೂ ನಿರ್ಗಮನ ನೋಡಿರುವವನು. “ನಾಗರಹಾವು’ ಸಿನಿಮಾ ಸಮಯದಲ್ಲಿ ಅವರಿಗೆ ಸಂಭಾಷಣೆ ಹೇಳಿಕೊಟ್ಟಿ¨ªೆ. ನಂತರ ಅವರು ಯಾರೂ ಊಹಿಸದ ಮಟ್ಟಿಗೆ ದೊಡ್ಡ ನಟನಾಗಿ ಬೆಳೆದರು’ ಎಂದು ವಿಷ್ಣುವರ್ಧನ್ ಜೊತೆಗಿನ ಒಡನಾಟವನ್ನು ತೆರೆದಿಟ್ಟರು.
“ಪಡ್ಡೆಹುಲಿ’ ಚಿತ್ರದಲ್ಲಿ ಒಟ್ಟು ಚಿತ್ರದಲ್ಲಿ 9 ಹಾಡುಗಳಿದ್ದು, ಕಿರಿಕ್ ಪಾರ್ಟಿ ಖ್ಯಾತಿಯ ಅಜನೀಶ್ ಸಂಗೀತ ಸಂಯೋಜಿಸಿದ್ದಾರೆ. ಇನ್ನು ಚಿತ್ರದಲ್ಲಿ ಒಂದು ಹಾಡು ವಿಷ್ಣುವರ್ಧನ್ ಕುರಿತಾಗಿದ್ದು, ವಿಷ್ಣು ಚಿತ್ರದ ಟೈಟಲ…ಗಳೇ ಈ ಹಾಡಿನಲ್ಲಿ ಸಾಹಿತ್ಯವಾಗಿದೆ. ಮತ್ತೂಂದು ಹೀರೋ ಇಂಟ್ರೊಡಕ್ಷನ್ ಸಾಂಗ್ ಆಗಿದೆ. ಎರಡೂ ಹಾಡುಗಳಲ್ಲಿ ವಿಷ್ಣುದಾದ ತೆರೆ ಮೇಲೆ ಬಂದಿರುವುದು ವಿಶೇಷ. ಹೀರೋ ಇಂಟ್ರೊಡಕ್ಷನ್ ಹಾಡನ್ನು ಚಿತ್ರದುರ್ಗದಲ್ಲಿ ಚಿತ್ರೀಕರಿಸಲಾಗಿದ್ದು, ವಿಷ್ಣುವರ್ಧನ್ ಅಭಿನಯದ “ನಾಗರಹಾವು’ ಚಿತ್ರವನ್ನು ನೆನಪಿಸುವಂತಿದೆ. ಈ ಹಾಡನ್ನು ಡಾ. ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ.
ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು “ಪಡ್ಡೆಹುಲಿ’ ಚಿತ್ರದ ಬಗ್ಗೆ ಮಾತನಾಡಿರುವ ಚಿತ್ರತಂಡ, ಹೊಸ ನಾಯಕನನ್ನು ಪರಿಚಯಿಸಲು ಏನೆಲ್ಲಾ ಕಮರ್ಷಿಯಲ್ ಕಂಟೆಟ್ ಬೇಕೊ ಅವೆಲ್ಲವೂ ಇದೆ. ಜಿಲ್ಲೆಯೊಂದಕ್ಕೆ ಸಂಬಂಧಿಸಿದಂತೆ ನಡೆಯುವ ಕಥೆ ಇದಾಗಿದ್ದು ಬಹುತೇಕ ಚಿತ್ರದುರ್ಗದಲ್ಲಿ ಚಿತ್ರೀಕರಿಸಲಾಗಿದೆ ಎಂದಿದೆ. ಈ ಚಿತ್ರದಲ್ಲಿ ಶ್ರೇಯಸ್‌ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಜೋಡಿಯಾಗಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡದ ಪ್ಲ್ರಾನ್ ಪ್ರಕಾರ ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಮಾರ್ಚ್ ವೇಳೆಗೆ “ಪಡ್ಡೆಹುಲಿ’ ಥಿಯೇಟರ್‌ನಲ್ಲಿ ಘರ್ಜಿಸಲಿದೆ.