ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಶುಭಾರಂಭ ಮಾಡಿದೆ. ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್ ನೆರವಿನಿಂದ ಮೊದಲ ದಿನದ ಗೌರವ ಸಂಪಾದಿಸಿದೆ.
ಮೊದಲ ಪಂದ್ಯದಲ್ಲಿ ಶತಕದಂಚಿನಲ್ಲಿ ಎಡವಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಲಾರ್ಡ್ಸ್ ನಲ್ಲಿ ಶತಕ ಬಾರಿಸಿ ಮಿಂಚಿದರು. ಟೆಸ್ಟ್ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡುತ್ತಿರುವ ರಾಹುಲ್ ತನಗೆ ಸಿಕ್ಕ ಅವಕಾಶವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಂಡರು.
ಲಾರ್ಡ್ಸ್ ಟೆಸ್ಟ್ ಮೊದಲ ದಿನ ಅಜೇಯ 127 ರನ್ ಗಳಿಸಿದ್ದಾರೆ. ಕಳೆದ ಮೂರು ವರ್ಷದಲ್ಲಿ ವಿದೇಶದಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಇದು ಕೆ.ಎಲ್. ರಾಹುಲ್ ರ ಆರನೇ ಟೆಸ್ಟ್ ಶತಕವಾಗಿದ್ದು, ಇದರಲ್ಲಿ ಐದು ಶತಕ ಭಾರತದಿಂದ ಹೊರಗೆ ಬಂದಿದೆ ಎನ್ನುವುದು ವಿಶೇಷ.
ಇದನ್ನೂ ಓದಿ:ವಿಶ್ವ ರ್‍ಯಾಂಕಿಂಗ್‌ನಲ್ಲಿ ಚೋಪ್ರಾ ನಂ.2
ಏಶ್ಯಾದಿಂದ ಹೊರಕ್ಕೆ ಹೆಚ್ಚು ಟೆಸ್ಟ್ ಶತಕ ಬಾರಿಸಿದವರ ಪಟ್ಟಿಯಲ್ಲಿ ರಾಹುಲ್ ಈಗ ಸೆಹವಾಗ್ ಜೊತೆ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದರು. ಸೆಹವಾಗ್ ಮತ್ತು ರಾಹುಲ್ ತಲಾ ನಾಲ್ಕು ಶತಕ ಬಾರಿಸಿದ್ದಾರೆ. ಸುನೀಲ್ ಗಾವಸ್ಕರ್ ಮೊದಲ ಸ್ಥಾನದಲ್ಲಿದ್ದು, ಅವರು 15 ಶತಕ ಗಳಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ಕೆ.ಎಲ್.ರಾಹುಲ್ ಮೊದಲ ವಿಕೆಟ್ ಗೆ ಶತಕದ ಜೊತೆಯಾಟ ನಡೆಸಿದರು. 2011ರ ಬಳಿಕ ಏಶ್ಯಾದಿಂದ ಹೊರಗೆ ಭಾರತೀಯ ಆರಂಭಿಕ ಜೋಡಿಯಿಂದ ಬಂದ ಮೊದಲ ಶತಕದ ಜೊತೆಯಾಟವಿದು. 2011ರ ಜನವರಿಯಲ್ಲಿ ವೀರೆಂದ್ರ ಸೆಹವಾಗ್ ಮತ್ತು ಗೌತಮ್ ಗಂಭೀರ್ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ವಿಕೆಟ್ ಗೆ 137 ರನ್ ಜೊತೆಯಾಟ ನಡೆಸಿದ್ದರು.