Advertisement

ಸೋತ ಪಂದ್ಯದಲ್ಲೂ ದಾಖಲೆ ಬರೆದ ಕನ್ನಡಿಗ ರಾಹುಲ್

10:04 AM Apr 26, 2019 | Team Udayavani |

ಬೆಂಗಳೂರು: ಎರಡು ವರ್ಷಗಳ ಹಿಂದೆ ಟೆಸ್ಟ್ ಬ್ಯಾಟ್ಸ್ ಮನ್ ಎಂದು ಗುರುತಿಸಲ್ಪಡುತ್ತಿದ್ದ ಕನ್ನಡಿಗ ಕೆ.ಎಲ್. ರಾಹುಲ್ ನಂತರ ಹೊಡಿಬಡಿ ಆಟಗಾರನಾಗಿ ರೂಪುಗೊಂಡು ಸದ್ಯ ಐಪಿಎಲ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಇದೀಗ ಟಿ ಟ್ವೆಂಟಿ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ ಮೂರು ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಮತ್ತು ವಿಶ್ವದ ಐದನೇ ಆಟಗಾರನೆಂಬ ಖ್ಯಾತಿಗೆ ರಾಹುಲ್ ಪಾತ್ರರಾಗಿದ್ದಾರೆ.

Advertisement

ಬುಧವಾರ ರಾತ್ರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಹುಲ್ ಈ ಸಾಧನೆ ಮಾಡಿದರು. ಬೆಂಗಳೂರು ವಿರುದ್ಧ ಭರ್ಜರಿಯಾಗಿಯೇ ಆಡಿದ ರಾಹುಲ್ 27 ಎಸೆತಗಳಿಂದ 42 ರನ್ ಗಳಿಸಿದರು.

ರಾಹುಲ್ 3000 ರನ್ ಗಡಿ ದಾಟಲು 93 ಟಿ ಟ್ವೆಂಟಿ ಇನ್ನಿಂಗ್ಸ್ ಗಳನ್ನು ಆಡಿದರು. ಆಸೀಸ್ ಆಟಗಾರ ಶಾನ್ ಮಾರ್ಶ್ 85 ಇನ್ನಿಂಗ್ಸ್ ಗಳಲ್ಲಿ 3000 ರನ್ ಗಳಿಸಿ ವಿಶ್ವ ಮಟ್ಟದಲ್ಲಿ ಪ್ರಥಮ ಸ್ಥಾನದಲ್ಲಿದ್ದಾರೆ.

2019ರ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಆಡುತ್ತಿರುವ ಕೆ.ಎಲ್.ರಾಹುಲ್ 55.12 ಸರಾಸರಿಯಲ್ಲಿ441 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಆಕರ್ಷಕ ಶತಕವೂ ಸೇರಿದೆ. ವಿಶ್ವಕಪ್ ಗೆ ಆಯ್ಕೆಯಾಗಿರುವ ರಾಹುಲ್ ಈ ಐಪಿಎಲ್ ಹೆಚ್ಚು ರನ್ ಗಳಿಸಿರುವವರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಬುಧವಾರ ರಾತ್ರಿ ನಡೆದ ಬೆಂಗಳೂರು ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮೇಲಾಟವೇ ನಡೆದಿತ್ತು. ಎಬಿ ಡಿ’ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್ ಸಹಾಯದಿಂದ ಆರ್ ಸಿಬಿ ಇನ್ನೂರರ ಗಡಿ ದಾಟಿ ವಿಜಯಿಯಾಗಿತ್ತು. ಗೇಲ್, ರಾಹುಲ್, ಮಯಾಂಕ್ ಉತ್ತಮವಾಗಿ ಆಡಿದರೂ ಪಂಜಾಬ್ 185 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಜಯದೊಂದಿಗೆ ಆರ್ ಸಿಬಿ ರಾಜಸ್ಥಾನವನ್ನು ಹಿಂದಿಕ್ಕಿ ಏಳನೇ ಸ್ಥಾನಕ್ಕೇರಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next