ಬಂಗಾರಪೇಟೆ: ಸತತ 7ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿದ್ದ ಕಾಂಗ್ರೆಸ್‌ನ ಹಿರಿಯ ರಾಜಕಾರಣಿ ಕೆ. ಎಚ್.ಮುನಿಯಪ್ಪ ಅವರನ್ನು 2019ರಲ್ಲಿ ಶತಾಯಗ ತಾಯ ಸೋಲಿಸಲು ಪ್ರಮುಖ ಕಾರಣರಾಗಿದ್ದ ಘಟಬಂಧನ್‌ನಲ್ಲಿ ಒಬ್ಬರಾಗಿದ್ದ ಹಾಲಿ ಶಾಸಕ ಎಸ್. ಎನ್.ನಾರಾಯಣಸ್ವಾಮಿ ಮತ್ತೆ ಕೆ.ಎಚ್.ಮುನಿಯಪ್ಪ ಅವರಲ್ಲಿ ಸಖ್ಯ ಬೆಳೆಸಲು ಮುಂದಾಗಿರುವುದು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದೆ.
2010ರ ಹಿಂದೆ ಎಸ್.ಎನ್.ನಾರಾಯಣಸ್ವಾಮಿ ಶಾಸಕರಾಗಬೇಕೆನ್ನುವುದು ಕನಸಿನಲ್ಲಿಯೂ ಅಂದು ಕೊಂಡಿರಲಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಎಂ.ನಾರಾಯಣಸ್ವಾಮಿ 2010ರಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಸೇರಿದ್ದರಿಂದ ಕೆ.ಎಚ್. ಮುನಿಯಪ್ಪ, ಕೆ.ಚಂದ್ರಾರೆಡ್ಡಿ ಸೇರಿ ಎಸ್.ಎನ್ .ನಾರಾಯಣಸ್ವಾಮಿ ಅವರನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿಸಿ ಗೆಲುವಿಗೆ ಶ್ರಮಿಸಿದರು. ಆದರೆ, ಕಡಿಮೆ ಅಂತರದಲ್ಲಿ ಎಸ್.ಎನ್ .ನಾರಾಯಣಸ್ವಾಮಿ ಸೋತರು.
7 ಬಾರಿ ಸಂಸದರು: ನಂತರ 2013ರ ಚುನಾವಣೆಗೆ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ಮಾಡುವುದಾಗಿ ಹೇಳಿದ ಕೆ. ಎಚ್.ಮುನಿಯಪ್ಪ ಭರವಸೆ ನೀಡಿ ಅಂದಿನಿಂದಲೇ ಚುನಾವಣಾ ಪ್ರಚಾರ ಮಾಡುವಂತೆ ಪ್ರೇರೇಪಿಸಿದ್ದರು. ನಂತರ ನಡೆದ 2013ರ ಚುನಾವಣೆಯಲ್ಲಿ ಎಸ್.ಎನ್ .ನಾರಾಯಣಸ್ವಾಮಿ ಮೊದಲ ಬಾರಿಗೆ ಶಾಸಕರಾದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಕೆ.ಎಚ್. ಮುನಿಯಪ್ಪ 7ನೇ ಬಾರಿಗೆ ಸಂಸದರಾಗಿ ಗೆದ್ದರು. ನಂತರ ಈ ಅವಧಿಯಲ್ಲಿ ಕೆ.ಎಚ್.ಮುನಿಯಪ್ಪ, ಶಾಸಕ ಎಸ್.ಎನ್.ನಾರಾಯಣಸ್ವಾಮಿ ರಾಜಕೀಯ ವೈರಿಗಳಾದರು. 2018ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಎಸ್.ಎನ್.ನಾರಾಯಣಸ್ವಾಮಿ ಪರ ಪ್ರಚಾರಕ್ಕೂ ಕೆ.ಎಚ್.ಮುನಿಯಪ್ಪ ಬಂದಿರಲಿಲ್ಲ. 2015ರಿಂದಲೂ ಕೆ.ಎಚ್.ಮುನಿಯಪ್ಪರೊಂದಿಗೆ ತೀವ್ರ ವಿರೋಧಿಯಾಗಿದ್ದರು.
ಚರ್ಚೆ: ಕೆ.ಎಚ್.ಮುನಿಯಪ್ಪ ಬಲಗೈ ಬಂಟನಾಗಿದ್ದ ಕೆ.ಚಂದ್ರಾರೆಡ್ಡಿ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿ ಬಿಜೆಪಿ ಸೇರಿ ಒಂದು ವರ್ಷವೇ ಆಗಿದೆ. ಇನ್ನೂ ಜಿಪಂ ಮಾಜಿ ಸದಸ್ಯ ರಾಮಚಂದ್ರಪ್ಪ ಅವರು, ಕೆ.ಎಚ್.ಮುನಿಯಪ್ಪ ಬೆಂಬಲಿಗರಾಗಿದ್ದುಕೊಂಡೆ ಕೆಲವು ಹಿಂಬಾಲಕರನ್ನು ಜೆಡಿಎಸ್‌ಗೆ ಕಳುಹಿಸಿದ್ದಾರೆ. ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಮಾಡುವ ವೇಳೆಗೆ ರಾಮಚಂದ್ರಪ್ಪ ಸಹ 2ನೇ ಬಾರಿಗೆ ಮತ್ತೆ ಜೆಡಿಎಸ್ ಸೇರ್ಪಡೆಯಾಗಲಿದ್ದಾರೆಂದು ಹೇಳಲಾಗುತ್ತಿದೆ. ರಾಮಚಂದ್ರಪ್ಪ ಕೆಲವು ಜೆಡಿಎಸ್ ಹಿರಿಯ ಮುಖಂಡರೊಂದಿಗೆ ಚರ್ಚೆ ಮಾಡುತ್ತಿದ್ದಾರೆಂಬುದು ಗುಟ್ಟಾಗಿ ಉಳಿದಿಲ್ಲ. ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಕಳೆದ 5 ವರ್ಷಗಳಿಂದ ಕೆ.ಎಚ್.ಮುನಿಯಪ್ಪರಿಂದ ದೂರವಿದ್ದು, 2023ರ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸತತ 3ನೇ ಬಾರಿಗೆ ಶಾಸಕರಾಗಿ ಆಯ್ಕೆ ಆಗಬೇಕೆಂದು ರಾಜಕೀಯ ವಿರೋಧಿಗಳನ್ನು ಭೇಟಿ ಮಾಡಿ ಸಂಧಾನ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಎಸ್.ಎನ್.ನಾರಾಯಣಸ್ವಾಮಿ ಇಡೀ ಕ್ಷೇತ್ರದಲ್ಲಿ ಯಾವ ಮೂಲೆಯಿಂದಾದರೂ ಕರೆಯೋಲೆ ಬಂದರೂ ಓಗೊಟ್ಟು ಓಡಾಡುತ್ತಿದ್ದಾರೆ. ಈಗಾಗಲೇ ಕ್ಷೇತ್ರದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಮತದಾರರನ್ನು ಗಟ್ಟಿ ಮಾಡಿಕೊಳ್ಳಲು ಶಕ್ತಿಮೀರಿ ಪ್ರಚಾರದಲ್ಲಿ ತೊಡಗಿದ್ದಾರೆ.
ಘಟಬಂಧನ್ ಸಮೂಹ ರಚನೆ ಆಗಿತ್ತು : 2019ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್‌ಕುಮಾರ್‌ರ ನೇತೃತ್ವದಲ್ಲಿ ಕೋಲಾರ ಲೋಕಸಭೆ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಕೆ.ಎಚ್.ಮುನಿಯಪ್ಪ ವಿರೋಧಿಗಳನ್ನು ಕೂಡಿಹಾಕಿ ಘಟಬಂಧನ್ ಸಮೂಹ ರಚನೆ ಮಾಡಿ ಕೆ.ಎಚ್.ಮುನಿಯಪ್ಪರನ್ನು ಸೋಲಿಸಲು ಹಾಲಿ ಸಂಸದ ಎಸ್.ಮುನಿಸ್ವಾಮಿ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಿದ್ದೇ ಈ ಘಟಬಂಧನ್ ಎಂದೆಲ್ಲಾ ಪ್ರಚಾರವಾಗಿತ್ತು. ಅಂದಿನಿಂದ ಇಂದಿನವರೆಗೂ ಕೆ.ಎಚ್.ಮುನಿಯಪ್ಪ ಘಟಬಂಧನ್ ವಿರುದ್ಧ ಸೇಡಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ವೇಳೆ ಹಾಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕೆ.ಎಚ್. ಮುನಿಯಪ್ಪರೊಂದಿಗೆ ಸಖ್ಯ ಬೆಳೆಸಲು ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್ .ನಾರಾಯಣಸ್ವಾಮಿ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಸಹಕಾರ ನೀಡಲಿದ್ದಾರೆ. –
ಪಿಚ್ಚಹಳ್ಳಿ ಗೋವಿಂದರಾಜುಲು, ನಿರ್ದೇಶಕರು, ಡಿಸಿಸಿ ಬ್ಯಾಂಕ್, ಬಂಗಾರಪೇಟೆ
-ಎಂ.ಸಿ.ಮಂಜುನಾಥ್