ರಾಣಿಬೆನ್ನೂರ: ರಾಜಕಾರಣದಿಂದ ಹಿಂದೆ ಸರಿಯುವ ಮಾತಿಲ್ಲ. ಜೀವನ ಪರ್ಯಂತ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತು ಬೆಳವಣಿಗೆಗೆ ಶ್ರಮಿಸುತ್ತೇನೆ. ಸುಮಾರು 50 ವರ್ಷಗಳಿಂದ ರಾಜಕಾರಣದಲ್ಲಿದ್ದು, ಈ ವೇಳೆ ಮಂತ್ರಿಯಾಗಿ, ವಿಧಾನಸಭಾ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ ಸಂತೃಪ್ತಿ ನನಗಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಪ್ರಸ್ತುತ ನನಗೆ ವಯಸ್ಸಾದ ಕಾರಣ ರಾಜ್ಯದ ವಿಧಾನಸಭಾ ಚುನಾವಣಾ ಕ್ಷೇತ್ರದಿಂದ ಹಿಂದೆ ಸರಿದು ನನ್ನ ಮಗ ಪ್ರಕಾಶ ಕೋಳಿವಾಡಗೆ ಟಿಕೆಟ್ ಕೊಡುವಂತೆ ಹೈಕಮಾಂಡ್‌ಗೆ ಕೇಳಿದ್ದೇನೆ. ಅವರೂ ಸಹ ಸಮ್ಮತಿಸಿದ್ದಾರೆ. ಅವರು ಅವಕಾಶ ನೀಡಿದರೆ ಖಂಡಿತ ಪ್ರಕಾಶ ಗೆಲ್ಲುತ್ತಾರೆ. ರಾಣಿಬೆನ್ನೂರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣವಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ನಿಷ್ಠಾವಂತ ಕಾರ್ಯಕರ್ತರು ವಿಧಾಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ನನಗೆ ಸ್ಪರ್ಧಿಸಲು ಸೂಚಿಸಿದರೆ ಅನಿವಾರ್ಯವಾಗುತ್ತದೆ. ನನಗೆ ಆಗಲಿ ಅಥವಾ ನನ್ನ ಮಗ ಪ್ರಕಾಶನಿಗಾಗಲಿ ಇಲ್ಲವೇ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಾಗಲಿ ಟಿಕೆಟ್ ನೀಡುವ ಅಧಿ ಕಾರ ಹೈಕಮಾಂಡ್‌ಗಿದೆ. ಅವರು ಯಾರಿಗೇ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇವೆ ಎಂದರು.
ಮುಂದೆ ಲೋಕಸಭೆ, ರಾಜ್ಯಸಭೆ ಚುನಾವಣೆ ಬಂದರೂ ಪಕ್ಷ ಹೇಳಿದರೆ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಪಕ್ಷ ಟಿಕೆಟ್ ಕೊಟ್ಟರೆ ನಾನು ನಿಲ್ಲುತ್ತೇನೆ. ಅವಕಾಶ ಬಂದರೆ ನಾನೂ ಕೇಳುತ್ತೇನೆ. ಅವರು ಕೊಟ್ಟರೆ ನಿಲ್ಲುತ್ತೇನೆ. ರಾಜ್ಯ ರಾಜಕಾರಣದಿಂದ ನಾನು ನಿವೃತ್ತಿ ಬಯಸಿದ್ದೇನೆ. ಆದರೆ, ಹೈಕಮಾಂಡ್‌ನವರು ಇದರ ತೀರ್ಮಾನ ಮಾಡುತ್ತಾರೆ. ಅವರು ಟಿಕೆಟ್ ಕೊಟ್ಟರೆ ಮುಂದಿನ ವಿಧಾನಸಭಾ ಚುನಾವಣೆಗಾಗಲಿ ಅಥವಾ ಲೋಕಸಭಾ ಚುನಾವಣೆಗಾಗಲಿ ಸ್ಪರ್ಧೆ ಮಾಡುತ್ತೇನೆ ಎಂದರು.
ನಾವು ನಮ್ಮ ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಪಕ್ಷವನ್ನು ಅಧಿ ಕಾರಕ್ಕೆ ತರುವ ಕೆಲಸ ಮಾಡಬೇಕು. ಪಕ್ಷಕ್ಕೆ ಬಹುಮತ ಬಂದ ಮೇಲೆ ಪಕ್ಷದ ಪದ್ಧತಿಯ ಪ್ರಕಾರ ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ಸಿಎಂ ಯಾರಾಗಬೇಕು ಎನ್ನುವುದನ್ನು ತೀರ್ಮಾನ ಮಾಡುತ್ತದೆ. ಇದನ್ನು ಪಕ್ಷದವರು ತಿಳಿದುಕೊಂಡು ನಾನು, ನಾನು ಅಂತಾ ಒಬ್ಬರಿಗೊಬ್ಬರು ಕಚ್ಚಾಡುವ ವಿಚಾರ ಕೈಬೀಡಬೇಕು ಎಂದರು.
ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಎಲ್ಲರಿಗೂ ಇದೆ. ಒಕ್ಕಲಿಗರ ಮತಗಳನ್ನು ಸೆಳೆಯಲು ಡಿ.ಕೆ. ಶಿವಕುಮಾರ ಹೇಳಿದ್ದಾರೆ. ನನಗೂ ಅವಕಾಶವಿದೆ. ಒಕ್ಕಲಿಗರೆಲ್ಲ ಕಾಂಗ್ರೆಸ್‌ಗೆ ಬನ್ನಿ ಎನ್ನುವ ವಿಚಾರವಿಟ್ಟುಕೊಂಡು ಕರೆ ಕೊಟ್ಟಿದ್ದಾರೆ. ಡಿಕೆಶಿಯವರ ಮೂಲ ಉದ್ದೇಶ ಜೆಡಿಎಸ್‌ನ್ನು ಬಿಟ್ಟು ಒಕ್ಕಲಿಗರೆಲ್ಲ ಕಾಂಗ್ರೆಸ್‌ಗೆ ಬನ್ನಿ ಎಂಬುದಾಗಿದೆ. ಸಿಎಂ ಆಗಬೇಕು ಎನ್ನುವ ಆಸೆ ಶಿವಕುಮಾರ, ಸಿದ್ದರಾಮಯ್ಯ, ಪರಮೇಶ್ವರಗೆ ಇದ್ದರೆ ತಪ್ಪಿಲ್ಲ. ಬಿಎಸ್‌ವೈ ಮಗನಿಗೆ ಎಂಎಲ್ಸಿ ಚುನಾವಣೆ ಟಿಕೆಟ್ ಕೊಡಬೇಕೆಂದು ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದರು. ಹೈಕಮಾಂಡ್ ಅದನ್ನು ತಿರಸ್ಕಾರ ಮಾಡಿತ್ತು. ಇದರಿಂದ ಅವರು ಪುತ್ರನಿಗೆ ಕ್ಷೇತ್ರ ಬಿಟ್ಟು ಕೊಟ್ಟಿದ್ದಾರೆ ಎಂದರು