ಸಾಗರ: ಮಂಗಳವಾರ ರಾತ್ರಿ ಜೋಗ ಜಲಪಾತದ ಕಲ್ಲುಬಂಡೆಗಳ ನಡುವೆ ಕಣ್ಮರೆಯಾಗಿದ್ದ ಸಾಹಸಿ ಜ್ಯೋತಿರಾಜ್ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದು ಸುರಕ್ಷಿತವಾಗಿದ್ದಾರೆ. ಬರಿಗೈಯಲ್ಲಿ ಬಂಡೆ ಏರುವ ಸಾಹಸಿ ಕೋತಿರಾಜ್ ಎಂದೇ ಕರೆಸಿಕೊಳ್ಳುವ ಜ್ಯೋತಿರಾಜ್ ಮಂಗಳವಾರ ಮಧ್ಯಾಹ್ನದಿಂದ ಕಣ್ಮರೆಯಾಗಿದ್ದರು.
ಸಂಜೆಯಾದರೂ ಜ್ಯೋತಿರಾಜ್ ಕಾಣದ್ದರಿಂದ ತೀವ್ರ ಆತಂಕ ಸೃಷ್ಟಿಯಾಗಿತ್ತು. ಆದರೆ ಬುಧವಾರ ಬೆಳಗ್ಗೆ ಜ್ಯೋತಿರಾಜ್ ಜಲಪಾತದ ವರ್ತುಲದಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ಶವ ಹುಡುಕಾಟಕ್ಕಾಗಿ ಜಲಪಾತಕ್ಕಿಳಿದಿದ್ದ ಜ್ಯೋತಿರಾಜ್ ತೀರಾ ನಿತ್ರಾಣಗೊಂಡ ಹಿನ್ನೆಲೆಯಲ್ಲಿ ರಾಜಾಫಾಲ್ಸ್‌ನ ಬಂಡೆಯ ಮೇಲೆ ವಿಶ್ರಾಂತಿ ಪಡೆದಿದ್ದರು.
ಈ ನಡುವೆ ಸ್ಥಳೀಯ ಸುಮಂತ ಶರ್ಮ, ರಾಜ್, ಶಂಕರ್ ತಾಳಗುಪ್ಪ ಅವರ ತಂಡದ ಡ್ರೋಣ್‌ಗೂ ಜ್ಯೋತಿರಾಜ್‌ರ ಸುಳಿವು ಸಿಕ್ಕಿದೆ. ನಂತರ ಅಗ್ನಿ ಶಾಮಕ ದಳದ ಕಾರ್ಯಾಚರಣೆ ಪಡೆ ಅವರನ್ನು ಸುರಕ್ಷಿತವಾಗಿ ಕರೆ ತಂದಿದೆ. ಜೋಗ ಜಲಪಾತದಲ್ಲಿ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವವರ ಶವ ಪತ್ತೆಗೆ ಕಾರ್ಯಾಚರಣೆ ನಡೆಸುವ ಜ್ಯೋತಿರಾಜ್ ತನ್ನ ಸ್ನೇಹಿತ ಬಸವರಾಜು ಸಹಿತ ಮಂಗಳವಾರ ಜೋಗಕ್ಕೆ ಬಂದು ಕಾಣೆಯಾಗಿದ್ದಾರೆ ಎನ್ನಲಾದ ಬೆಂಗಳೂರಿನ ಮಂಜುನಾಥ್ ಅವರನ್ನು ಹುಡುಕಲು ತೊಡಗಿದ್ದರು. ಮಂಗಳವಾರ ಬೆಳಗಿನಿಂದಲೇ ಹುಡುಕಾಟ ನಡೆಸಿದ್ದರೂ ಯಾವುದೇ ಶವ ಪತ್ತೆಯಾಗಿರಲಿಲ್ಲ.
ಫೇಸ್‌ಬುಕ್ ಲೈವ್: ಜಲಪಾತಕ್ಕೆ ತೆರಳುವ ಮುನ್ನ ಫೇಸ್ ಬುಕ್ ಲೈವ್‌ಗೆ ಬಂದಿದ್ದ ಜ್ಯೋತಿರಾಜ್, ಜೀವನವನ್ನು
ನಾವು ರೂಪಿಸಿಕೊಳ್ಳಬೇಕು. ಹತಾಶೆಯಿಂದ ಆತ್ಮಹತ್ಯೆಗೆ ಈಡಾಗಬಾರದು. ನಾನು ಸಹಾಯ ಮಾಡಲು ತೆರಳುತ್ತಿದ್ದೇನೆ. ಆದರೆ ಏಕೋ ನನ್ನ ಸಾಹಸದಲ್ಲಿ ವಾಪಾಸು ಬರುವ ಖಚಿತತೆ ಇಲ್ಲ ಎಂಬರ್ಥದ ಮಾತು ಆತಂಕ ಸೃಷ್ಟಿಸಿತ್ತು.