ಹೊಸದಿಲ್ಲಿ: ಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅಷ್ಟು ಬೇಗ ಬಿಜೆಪಿ ಬಾಗಿಲು ತೆರೆದದ್ದು ಹೇಗೆ? ಸಾಮಾನ್ಯವಾಗಿ ಬಿಜೆಪಿ ಬೇರೆ ಪಕ್ಷಗಳಿಂದ ಬರುವ ನಾಯಕರ ಸಂಪೂರ್ಣ ಮೌಲ್ಯಮಾಪನ ಮಾಡದೆ ಸೇರಿಸಿಕೊಳ್ಳುವುದಿಲ್ಲ. ಲಾಭವಾಗುವುದಾದರೆ ಮಾತ್ರ ಹೀಗೆ ಹೊರಗಿನಿಂದ ಬರುವ ನಾಯಕರಿಗೆ ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನ ಸಿಗುತ್ತದೆ. ಆದರೆ ಸಿಂಧಿಯಾ ಕಾಂಗ್ರೆಸ್‌ನಿಂದ ಹೊರಬಂದ ಮರುದಿನವೇ ಬಿಜೆಪಿ ಸದಸ್ಯರಾಗಿದ್ದಾರೆ ಮಾತ್ರವಲ್ಲದೆ ಅವರಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್ ಕೂಡ ಸಿಕ್ಕಿದೆ.
ಗೆದ್ದು ಹೋದ ಬಳಿಕ ಅವರು ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಬಿಜೆಪಿಯ ಸಿಂಧಿಯಾ ನಡೆ ಇಷ್ಟು ಸಲೀಸಾದದ್ದು ಹೇಗೆ ಎನ್ನುವ ಪ್ರಶ್ನೆ ಈಗ ಕಾಡುತ್ತದೆ. ಇದರ ಮೂಲವನ್ನು ಕೆದುಕುತ್ತಾ ಹೋದರೆ ತಲುಪುವುದು ಸಿಂಧಿಯಾ ಬೀಗರ ಪರಿವಾರಕ್ಕೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರ ಪತ್ನಿ ಪ್ರಿಯದರ್ಶಿನಿ ರಾಜೆ ಗಾಯಕ್‌ವಾಡ್ ಬರೋಡದ ಪ್ರಸಿದ್ಧ ಗಾಯಕ್‌ವಾಡ್ ರಾಜಮನೆತನದ ಕುಡಿ. ಈ ರಾಜಮನೆತನದ ಹಿರಿಯ ಸದಸ್ಯೆ ಶುಭಾಂಗಿನಿ ರಾಜೆ ಮೇಲೆ ಪ್ರಧಾನಿ ನರೇಂದ್ರ ಮೋದಿಗೆ ಅಪಾರವಾದ ಗೌರವವಿದೆ. ಈ ಒಂದು ಸಂಪರ್ಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಸೇರ್ಪಡೆಯನ್ನು ಸುಲಭಗೊಳಿಸಿದೆ.
2014ರಲ್ಲಿ ಮೋದಿ ವಡೋದರದಿಂದ ಲೋಕಸಭೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದಾಗ ಸೂಚಕರಾಗಿದ್ದದ್ದು ಮಹಾರಾಣಿ ಶುಭಾಂಗಿನಿ ಗಾಯಕ್‌ವಾಡ್. ಮಹಾರಾಣಿಗೆ ಮೋದಿ ಮಾತ್ರವಲ್ಲದೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಇನ್ನೂ ಅನೇಕ ಆತ್ಮೀಯ ಸ್ನೇಹಿತರಿದ್ದಾರೆ. ಈ ಸಂಬಂಧವನ್ನು ಬಳಸಿಕೊಂಡು ಸಿಂಧಿಯಾ ಮತ್ತು ಬಿಜೆಪಿ ನಡುವೆ ಮಾತುಕತೆಗೆ ಶುಭಾಂಗಿನಿ ಗಾಯಕವಾಡ್ ಸೇತುವೆಯಾದರು.
ಕಾಂಗ್ರೆಸ್‌ನಲ್ಲಿ ಮೂಲೆಗುಂಪಾದ ಕಾರಣ ಜ್ಯೋತಿರಾದಿತ್ಯ ಸಿಂಧಿಯಾ ತನ್ನ ಹಾದಿಯನ್ನು ಕಂಡುಕೊಳ್ಳಲು ತೀರ್ಮಾನಿಸಿದ್ದರು. ಆದರೂ ಕೊನೆಯ ಕ್ಷಣದವರೆಗೂ ಅವರು ಕಾಂಗ್ರೆಸ್ ಹೈಕಮಾಂಡ್ ಮೇಲೆ ಕ್ಷೀಣವಾದ ಒಂದು ಭರವಸೆಯನ್ನು ಇಟ್ಟುಕೊಂಡಿದ್ದರು.
ರವಿವಾರವೂ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಆದರೆ ಸೋನಿಯಾ ಭೇಟಿ ನಿರಾಕರಿಸಿದರು. ಒಂದು ವೇಳೆ ಭೇಟಿಗೆ ಅವಕಾಶ ಕೊಡುತ್ತಿದ್ದರೆ ಮಧ್ಯಪ್ರದೇಶದ ಕಾಂಗ್ರೆಸ್ ಸರಕಾರಕ್ಕೆ ಈ ಗತಿ ಬರುತ್ತಿರಲಿಲ್ಲವೇನೊ.