ಹುಬ್ಬಳ್ಳಿ: ಪೋಲಿಯೋ ಶಾಪ, ನನ್ನಿಂದೇನೂ ಮಾಡಲಾಗದು ಎಂದು ಕುಳಿತಿದ್ದರೆ ನನಗೆ ಚಿನ್ನದ ಪದಕ ಗೆಲ್ಲಲಾಗುತ್ತಿರಲಿಲ್ಲ.
ಇದು ರಾಷ್ಟ್ರೀಯ ಶೂಟಿಂಗ್‌ನಲ್ಲಿ 4 ಚಿನ್ನ, 1 ಬೆಳ್ಳಿ ಪದಕ ಪಡೆದಿರುವ ಜ್ಯೋತಿ ಹನುಮಂತಪ್ಪ ಸಣ್ಣಕ್ಕಿ ಮಾತು.
ಪೋಲಿಯೋ ಪೀಡಿತಳಾದರೂ ಎದೆಗುಂದದೆ ಕಷ್ಟದಾಯಕ ಶೂಟಿಂಗ್ ತರಬೇತಿಯನ್ನು ಕರಗತ ಮಾಡಿಕೊಂಡು ಇದುವರೆಗೆ
ಒಟ್ಟು 4 ಚಿನ್ನಕ್ಕೆ ಗುರಿಯಿಟ್ಟು ಯಶಸ್ವಿಯಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಕನಸು ಹೊತ್ತಿದ್ದು, ಅದಕ್ಕಾಗಿ ತರಬೇತಿಯಲ್ಲಿ ತೊಡಗಿದ್ದಾರೆ.
ಬಡ ಕುಟುಂಬದ ಜ್ಯೋತಿ ಸಣ್ಣಕ್ಕಿ ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿಯಾಗಿದ್ದಾರೆ. ಬಾಲ್ಯದಲ್ಲಿ ಕರಾಟೆ ಕಲೆಯಬೇಕು ಎಂದು ಆಸೆ ಹೊಂದಿದ್ದರಾದರೂ ಅಂಗವಿಕಲತೆ ಅಡ್ಡಿಯಾಗಿತ್ತು. ಶೂಟಿಂಗ್ ಕಲಿಯಬೇಕೆಂಬ ಬಯಕೆಯೊಂದಿಗೆ ತರಬೇತಿಯ ಚಿಂತನೆಯಲ್ಲಿ ತೊಡಗಿದ್ದಾರೆ. ಪ್ರೌಢಶಾಲೆಯಲ್ಲಿ ಕಲಿಯುವ ವೇಳೆ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಶೂಟಿಂಗ್ ತರಬೇತಿ ನೀಡುತ್ತಿರುವುದುನ್ನು ನೋಡುತ್ತಿದ್ದರು, ಟಿವಿಗಳಲ್ಲಿ ಬರುತ್ತಿದ್ದ ಪ್ರಕಾಶ ನಂಜಪ್ಪ, ಅಭಿನವ ಬಿಂದ್ರಾ ಅವರ ಶೂಟಿಂಗ್ ಪ್ರಭಾವಕ್ಕೆ ಒಳಗಾಗಿ, ಹುಬ್ಬಳ್ಳಿ ಶೂಟಿಂಗ್ ಅಕಾಡೆಮಿಗೆ ಸೇರಿದ್ದರು.
ಅಕಾಡೆಮಿಯ ರವಿಚಂದ್ರ ಬಾಲೆಹೊಸೂರ ಅವರ ಮಾರ್ಗದರ್ಶನದಲ್ಲಿ ಶೂಟಿಂಗ್ ಕರಗತ ಮಾಡಿಕೊಂಡು, ನಾಲ್ಕು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕ ಪಡೆಯುವಲ್ಲಿ ಹಾಗೂ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ವಿವಿಧ ಸ್ಪರ್ಧೆಗಳಲ್ಲಿ ಭಾಗಿ: ಜ್ಯೋತಿ ಸಣ್ಣಕ್ಕಿ ಕಳೆದ 9 ತಿಂಗಳಿಂದ ದೇಶದ ವಿವಿಧ ಕಡೆ ನಡೆದ ಶೂಟಿಂಗ್ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ತೋರಿದ್ದಾರೆ. ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್ ಸ್ಪರ್ಧೆಯಲ್ಲಿ ಚಿನ್ನ, ನವದೆಹಲಿಯಲ್ಲಿ ನಡೆದ ಜಿ.ವಿ.ಮೌಲಾಂಕರ್ ಪ್ಯಾರಾ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಪಡೆದಿದ್ದಾರೆ.
ಸ್ವಂತದ್ದಾದ ಗನ್ ಬೇಕು, ಶೂಟಿಂಗ್ ಟೇಬಲ್ ಬೇಕು, ಆದರೆ ಇವೆರಡು ನನ್ನ ಬಳಿ ಇಲ್ಲದಿರುವುದರಿಂದ ಹೆಚ್ಚಿನ ತರಬೇತಿ ಹಾಗೂ ಸ್ಪರ್ಧೆಯಲ್ಲಿ ಹಿನ್ನಡೆಯಾಗುತ್ತಿದೆ. ಗನ್ ಖರೀದಿಸಲು ಸುಮಾರು 3 ಲಕ್ಷ ರೂ. ಬೇಕಾಗುತ್ತದೆ.
– ಜ್ಯೋತಿ ಹನುಮಂತಪ್ಪ ಸಣ್ಣಕ್ಕಿ, ರಾಜ್ಯ ಶೂಟರ್
– ಬಸವರಾಜ ಹೂಗಾರ