ಬೆಂಗಳೂರು: ನಗರ ಸ್ಥಳೀಯ ಸಂಸ್ಥೆ ನೌಕರರಿಗೆ ಜ್ಯೋತಿ ಸಂಜಿವಿನಿ ಆರೋಗ್ಯ ಸುರಕ್ಷಾ ಯೋಜನೆ ವಿಸ್ತರಿಸಬೇಕು ಎಂದು ಸಚಿವ ಡಾ| ನಾರಾಯಣ ಗೌಡ ಸೂಚನೆ ನೀಡದರು.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಇದರೊಂದಿಗೆ ಸಚಿವರು ಜ್ಯೋತಿ ಸಂಜೀವಿನಿ ಯೋಜನೆ ವಿಸ್ತರಿಸುವ ಮೂಲಕ ಪೌರಕಾರ್ಮಿಕರ ಮೊಗದಲ್ಲಿ ನಗು ಅರಳುವಂತೆ ಮಾಡಿದ್ದಾರೆ. ಅಲ್ಲದೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಕೆ.ಜಿ.ಐ.ಡಿ. ಮತ್ತು ಜಿ.ಪಿ.ಎಫ್. ಸೌಲಭ್ಯ ಅಳವಡಿಸಲು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಲು 15 ದಿನಗಳ ಒಳಗೆ ವರದಿ ನೀಡಲು ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿದರು. ನೌಕರರ ಖಾಯಂಮಾತಿ ಬಗ್ಗೆ 2017 ರ ಹಿಂದಿನ ಅರ್ಹತೆಗೆ ಅನುಗುಣವಾಗಿ ಸಕ್ರಮ ಮಾಡಬೇಕು ಇಲ್ಲವೇ ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮಕ್ಕೆ ತಿದ್ದುಪಡಿ ತಂದು DPAR, DPAL ಮತ್ತು ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ಒಂದು ತಿಂಗಳ ಒಳಗಾಗಿ ಕರಡು ರಚಿಸಿ ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಇದನ್ನೂ ಓದಿ:ಅಕ್ರಮ ದಂಧೆಗಳಿಗೆ ಕಡಿವಾಣ ಎಂದು?ಮಟ್ಕಾ, ಅಕ್ರಮ ಮದ್ಯ-ಪೆಟ್ರೋಲ್ ಮಾರಾಟ
ಸ್ಥಳೀಯ ಸಂಸ್ಥೆಗಳಲ್ಲಿನ ಪೌರಕಾರ್ಮಿಕರಿಗೆ ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ 3,500 ರೂ. ವಿಶೇಷ ಭತ್ಯೆ ನೀಡುತ್ತಿದ್ದು, ಅದನ್ನ 7 ಸಾವಿರ ರೂ. ಗೆ ಏರಿಕೆ ಮಾಡುವಂತೆಯೂ ಸಚಿವ ಡಾ| ನಾರಾಯಣ ಗೌಡ ಆದೇಶಿಸಿದ್ದಾರೆ. ಕೋವಿಡ್-19 ನಿಂದ ಮೃತಪಟ್ಟ ಸ್ಥಳೀಯ ಸಂಸ್ಥೆ ನೌಕರರಿಗೆ 30 ಲಕ್ಷ ರೂ. ಪರಿಹಾರ ನೀಡುತ್ತಿದ್ದು, ಇತರೆ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರಿಗೂ ಈ ಸೌಲಭ್ಯ ವಿಸ್ತರಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು. ಪೌರಸೇವಾ ವೃಂದದ ನೌಕರರು ಸೇವೆಯಲ್ಲಿರುವಾಗ ಮೃತಪಟ್ಟಲ್ಲಿ ಶವಸಂಸ್ಕಾರಕ್ಕೆ ನೀಡುತ್ತಿರುವ 7,500 ರೂ. ಸಹಾಯಧನವನ್ನು ದ್ವಿಗುಣಗೊಳಿಸಲು ಪರಿಶೀಲಿಸಲಾಗುವುದು ಎಂದು ಸಚಿವ ಡಾ| ನಾರಾಯಣ ಗೌಡ ತಿಳಿಸಿದರು.
ಸಭೆಯಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದವರು ಉಪಸ್ಥಿತರಿದ್ದರು.