Advertisement

ಜಾತಿ ತೊಲಗಿಸಿ ಜ್ಯೋತಿ ಬೆಳಗಿಸಿ ಅಭಿಯಾನ

12:24 PM Feb 11, 2020 | Suhan S |

ಮುದ್ದೇಬಿಹಾಳ: ತಾಲೂಕಿನ ಸುಕ್ಷೇತ್ರ ಕುಂಟೋಜಿಯ ಸಂಸ್ಥಾನ ಹಿರೇಮಠದ ಚನ್ನವೀರ ಸ್ವಾಮೀಜಿ 30 ಹಳ್ಳಿಗಳಲ್ಲಿ 150 ದಿನಗಳವರೆಗೆ ಜಾತಿ ತೊಲಗಿಸಿ, ಜ್ಯೋತಿ ಬೆಳಗಿಸಿ ಅಭಿಯಾನ ಆರಂಭಿಸಿದ್ದಾರೆ. ಜನಜಾಗೃತಿ ಪ್ರವಚನ ನಡೆಸುವ ಮೂಲಕ ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.

Advertisement

ಏನಿದು ಅಭಿಯಾನ: ಇತ್ತೀಚಿಗೆ ಕೆಲ ರಾಜಕೀಯ ಬೆಳವಣಿಗೆಗಳು ಹಾಗೂ ಜಾತಿಯ ಪಿಡುಗು ಗ್ರಾಮೀಣ ಭಾಗಕ್ಕೂ ಲಗ್ಗೆ ಇಟ್ಟು ಜನರ ಮನಸ್ಸು ಕಲುಷಿತ ಗೊಳಿಸಿದೆ. ಇದನ್ನರಿತ ಚನ್ನವೀರ ಸ್ವಾಮೀಜಿ ಮೊದಲ ಹಂತದ ಪ್ರಾಯೋಗಿಕವಾಗಿ 30ಹಳ್ಳಿಗಳನ್ನು ಆಯ್ಕೆ ಮಾಡಿಕೊಂಡು ಪ್ರತಿ ಹಳ್ಳಿಯಲ್ಲಿ 5 ದಿನಗಳಂತೆ 150 ದಿನಗಳವರೆಗೆ “ಜಾತಿ ತೊಲಗಿಸಿ, ಜ್ಯೋತಿ ಬೆಳಗಿಸಿ’ ಜನಜಾಗೃತಿ ಪ್ರವಚನ ಯಾತ್ರೆ ಆರಂಭಿಸಿದ್ದಾರೆ.

ಹೇಗೆ ನಡೆಯುತ್ತದೆ ಅಭಿಯಾನ: ಮೊದಲ ಗ್ರಾಮದಲ್ಲಿ 5 ದಿನಗಳ ಪ್ರವಚನ ಪೂರ್ಣಗೊಳ್ಳುವ ಹೊತ್ತಿಗೆ ಮುಂದಿನ ಗ್ರಾಮದ ಪ್ರವಚನಕ್ಕೆ ಯೋಜನೆ ರೂಪಿಸಲಾಗುತ್ತೆ. ಮೊದಲ ದಿನ ಮತ್ತು ಕೊನೆ ದಿನ ಚನ್ನವೀರ ಸ್ವಾಮೀಜಿ ಅನುಭಾವ ನಡೆಸಿಕೊಟ್ಟರೆ ಉಳಿದ ದಿನ ಪ್ರವಚನಕಾರರು ನಿರ್ದಿಷ್ಟ ವಿಷಯ ಆಯ್ದುಕೊಂಡು ನಿತ್ಯ ಸಂಜೆ ಪ್ರವಚನ ನಡೆಸಿಕೊಡುತ್ತಾರೆ. ಪ್ರತಿ 5 ಗ್ರಾಮಗಳಲ್ಲಿ ಅಭಿಯಾನ ಮುಕ್ತಾಯಗೊಂಡ ಕೂಡಲೇ 6 ಗ್ರಾಮದಲ್ಲಿ ಹಿಂದಿನ ಅಭಿಯಾನದಲ್ಲಿ ಪಾಲ್ಗೊಂಡ ಗ್ರಾಮಗಳ ಪ್ರಮುಖರನ್ನು ಸೇರಿಸಿ ಅನುಭವ ಹಂಚಿಕೊಂಡು ಮುಂದಿನ ನಡೆ ಯೋಜಿಸಲಾಗುತ್ತದೆ.

ಪ್ರವಚನದ ವಿಷಯಗಳು: ಜಾತೀಯತೆ-ಜಾತ್ಯತೀತತೆ, ಗುರು-ಲಿಂಗ-ಜಂಗಮ, ದೇವರು-ದೆವ್ವ, ನಂಬಿಕೆ-ಅಪನಂಬಿಕೆ, ಆಚಾರ-ವಿಚಾರ, ಧರ್ಮ-ಸಂಪ್ರದಾಯ, ದಾನ-ಧರ್ಮ, ಕಾಯಕ-ನಿಷ್ಠೆ, ನಿಂದನೆ, ಒಳಿತು-ಕೆಡಕು ಹೀಗೆ ಹತ್ತು ಹಲವು ವಿಷಯಗಳು ಪ್ರವಚನದ ವಿಷಯ ವಸ್ತುವಾಗಿರುತ್ತವೆ.

ಜಾತಿ ವ್ಯವಸ್ಥೆ ಹದಗೆಡುತ್ತಿದ್ದು ಅಸಹನೀಯ ವಾತಾವರಣಕ್ಕೆ ದಾರಿ ಮಾಡಿಕೊಡುತ್ತಿದೆ. ಜನರ ನಡುವೆ ಪರಸ್ಪರ ವಿಶ್ವಾಸ, ನಂಬಿಕೆ ಕಡಿಮೆ ಆಗಿ ಬದುಕು ದುರ್ಬರವಾಗತೊಡಗಿದೆ. ಸರ್ವಜನಾಂಗದ ಶಾಂತಿಯ ತೋಟ ಎನ್ನುವ ಭಾವೈಕ್ಯ ಸಂದೇಶ ಜತೆಗೆ ಕೂಡಿ ಬಾಳಿದರೆ ಸ್ವರ್ಗ ಸುಖದ ಅರಿವು ಮೂಡಿಸುವುದು ಅಭಿಯಾನದ ಉದ್ದೇಶ. -ಚನ್ನವೀರ ಸ್ವಾಮೀಜಿ, ಅಭಿಯಾನದ ರೂವಾರಿ

Advertisement

 

-ಡಿ.ಬಿ.ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next