Advertisement

ಜ್ಯೋತಿ ನಿಲ್ದಾಣ ಪ್ರದೇಶ: ಅವ್ಯವಸ್ಥೆಯ ಆಗರ

11:22 PM Feb 17, 2020 | mahesh |

ಮಹಾನಗರ: ನಗರದ ಕೇಂದ್ರಭಾಗವೆನಿಸಿದ ಜ್ಯೋತಿ ಜಂಕ್ಷನ್‌ನಿಂದ (ಬಂಟ್ಸ್‌ ಹಾಸ್ಟೆಲ್‌-ಹಂಪನಕಟ್ಟೆ ಮಾರ್ಗ) ಹಂಪನ್‌ಕಟ್ಟೆ ಕಡೆಗೆ ಹಾಗೂ ಬಂಟ್ಸ್‌ಹಾಸ್ಟೆಲ್‌ ಕಡೆಗೆ ಹೋಗುವಲ್ಲಿ ಬಸ್‌ಗಳು ನಿಲುಗಡೆಯಾಗುವ ಸ್ಥಳ ಭಾರೀ ಇಕ್ಕಟ್ಟಿನಿಂದ ಕೂಡಿದ್ದು ಪ್ರಯಾಣಿಕರು, ವಾಹನ ಸವಾರರು/ಚಾಲಕರು ತೀವ್ರ ತೊಂದರೆ ಪಡುತ್ತಿದ್ದಾರೆ. ಈ ಪ್ರದೇಶ ಈಗ ಅವ್ಯವಸ್ಥೆಯ ಆಗರವಾಗಿ ಪರಿಣಮಿಸುತ್ತಿದೆ.

Advertisement

ಜನ ಮತ್ತು ವಾಹನ ದಟ್ಟಣೆಯಿಂದ ಕೂಡಿದ ಈ ಪ್ರದೇಶದಲ್ಲಿ ಸಂಚಾರ ಸಂಕಷ್ಟವಾಗಿದೆ. ಬಂಟ್ಸ್‌ ಹಾಸ್ಟೆಲ್‌ ಸರ್ಕಲ್‌ ಮೂಲಕ ಜ್ಯೋತಿ ಜಂಕ್ಷನ್‌ ಆಗಿ ಹಂಪನಕಟ್ಟೆಗೆ ತೆರಳುವ, ಕಂಕನಾಡಿ ಕಡೆಗೆ ಹೋಗುವ ವಾಹನಗಳು ಈ ಮಾರ್ಗವನ್ನೇ ಅವಲಂಬಿಸಿವೆ. ಕೆಲವು ವಾಹನಗಳು ಮಾತ್ರ ಬ್ರಿಡ್ಜ್ ರಸ್ತೆಯ ಮೂಲಕ ಬಲ್ಮಠ ಮಾರ್ಗವಾಗಿ ಹೋಗುತ್ತವೆ. ಪ್ರಸ್ತುತ ಬಿಡ್ಜ್ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಬಂಟ್ಸ್‌ ಹಾಸ್ಟೆಲ್‌ ಕಡೆಯಿಂದ ಹಂಪನಕಟ್ಟೆ-ಸ್ಟೇಟ್‌ಬ್ಯಾಂಕ್‌ ಕಡೆಗೆ ತೆರಳುವ ಬಸ್‌ಗಳನ್ನು ನಿಲುಗಡೆ ಮಾಡುವ ತಾಣ ಒಂದು ಬದಿಯಲ್ಲಿದೆ. ಇನ್ನೊಂದು ಬದಿಯಲ್ಲಿ ಸ್ಟೇಟ್‌ಬ್ಯಾಂಕ್‌-ಹಂಪನಕಟ್ಟೆಯಿಂದ ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಹೋಗುವ ಬಸ್‌ಗಳು ನಿಲುಗಡೆಯಾಗುತ್ತವೆ. ಆದರೆ ಈ ಎರಡೂ “ನಿಲ್ದಾಣಗಳು’ ಕೂಡ ಭಾರೀ ಅವ್ಯವಸ್ಥೆಯಿಂದ ಕೂಡಿವೆ.

ತಂಗುದಾಣವಿಲ್ಲದೆ ಪರದಾಟ
ಹಂಪನಕಟ್ಟೆ ಕಡೆಗೆ ತೆರಳುವ ಬಸ್‌ಗಳು ನಿಲುಗಡೆಯಾಗುವ ಸ್ಥಳ(ಬಿಎಡ್‌ ಕಾಲೇಜು, ಪ್ರೌಢಶಾಲೆ ಪಕ್ಕ) ಮತ್ತು ಅದರ ಎದುರು ಭಾಗದಲ್ಲಿ ಹಂಪನಕಟ್ಟೆಯಿಂದ ಬರುವ ಬಸ್‌ಗಳು ನಿಲ್ಲುವ ಸ್ಥಳದಲ್ಲಿ ನಿತ್ಯ ನೂರಾರು ಮಂದಿ ಬಸ್‌ಗಾಗಿ ಕಾಯುತ್ತಾರೆ, ಬಸ್‌ನಿಂದ ಇಳಿದು ಹೋಗುತ್ತಾರೆ. ಆದರೆ ಇಲ್ಲಿ ಬಸ್‌ಗಾಗಿ ಕಾಯುವಾಗ ನಿಲ್ಲುವುದಕ್ಕೂ ಸ್ಥಳವಿಲ್ಲ, ಬಿಸಿಲು, ಮಳೆಯಿಂದ ರಕ್ಷಿಸಿಕೊಳ್ಳಲು ಸೂರು ಕೂಡ ಇಲ್ಲ. ಪಕ್ಕದ ಕಟ್ಟಡದೊಳಗೆ ನುಗ್ಗಿ ಬಸ್‌ ಬಂದಾಗ ಎದ್ದು ಬಿದ್ದು ಓಡಬೇಕಾದ ಸ್ಥಿತಿಯಿದೆ. ಇಲ್ಲಿ ಹೆಚ್ಚಿನವರು ರಸ್ತೆಯಲ್ಲಿ, ರಸ್ತೆಯ ಅಂಚಿನಲ್ಲಿ ಅಪಾಯಕಾರಿಯಾಗಿ ನಿಲ್ಲುತ್ತಾರೆ. ಮಳೆಗಾಲದಲ್ಲಿ ಬಸ್‌ಗಾಗಿ ಇಲ್ಲಿ ಕಾಯುವುದು ಭಯಾನಕ ಅನುಭವ ನೀಡುತ್ತದೆ. ಕೊಡೆ ಹಿಡಿದು ನಿಲ್ಲುವುದಕ್ಕೆ ಜಾಗವೂ ಇರುವುದಿಲ್ಲ. ಇದು ಅತ್ಯಂತ ಜನ, ವಾಹನ ನಿಬಿಡಪ್ರದೇಶ. ಇಲ್ಲಿ ಫ‌ುಟ್‌ಪಾತ್‌ ಕೂಡ ಇಲ್ಲ. ರಸ್ತೆ ಮೇಲೆಯೇ ನಡೆಯಬೇಕಿದೆ. ರಸ್ತೆ ದಾಟುವುದು ಕೂಡ ದೊಡ್ಡ ಸವಾಲು.

ಜಾಗದ ಕೊರತೆ; ಕಾಮಗಾರಿ ವಿಳಂಬ
ಸದ್ಯ ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಬಿಎಡ್‌ ಕಾಲೇಜು ಪಕ್ಕದಲ್ಲಿ ಆವರಣ ಗೋಡೆಯನ್ನು ಕಿರಿದುಗೊಳಿಸಿ ರಸ್ತೆಯನ್ನು ಅಗಲಗೊಳಿಸುವ ಕಾರ್ಯ ಆರಂಭಿಸಲಾಗಿದೆ. ಆದರೆ ಕೆಲಸ ಭಾರೀ ನಿಧಾನವಾಗಿದೆ. ಕಲ್ಲುಗಳನ್ನು ರಸ್ತೆಯ ಅಂಚಿನಲ್ಲಿಯೇ ತಂದು ರಾಶಿ ಹಾಕಿಡಲಾಗಿದೆ. ಇದು ಮತ್ತಷ್ಟು ಇಕ್ಕಟ್ಟು ಸೃಷ್ಟಿಸಿದೆ. “ಇಲ್ಲಿ ರಸ್ತೆಯನ್ನು ಅಗಲಗೊಳಿಸುವ ಯೋಜನೆ ಇದೆ. ಆದರೆ ಸದ್ಯಕ್ಕೆ ಬಸ್‌ ನಿಲ್ದಾಣ ನಿರ್ಮಿಸುವ ಯೋಜನೆ ಇಲ್ಲ’ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ಕಲ್‌, ರಸ್ತೆ ವಿಸ್ತರಣೆ ಶೀಘ್ರ
ಅಂಬೇಡ್ಕರ್‌ ವೃತ್ತ(ಜ್ಯೋತಿ ವೃತ್ತ) ಸಹಿತ ಈ ಪ್ರದೇಶ ವಿಸ್ತರಣೆಗೊಂಡು ಮುಕ್ತ ವಾಹನ ಸಂಚಾರಕ್ಕೆ ಅವಕಾಶವಾಗಲಿದೆ. ಅಲ್ಲದೆ ಜ್ಯೋತಿ ಬಸ್‌ ನಿಲ್ದಾಣಗಳು (ಬಿಎಡ್‌ ಕಾಲೇಜು ಪಕ್ಕ ಹಾಗೂ ಅದರ ಎದುರುಗಡೆಯ ನಿಲುಗಡೆಯ ತಾಣ) ಇರುವ ರಸ್ತೆಗಳು ಕೂಡ ವಿಸ್ತಾರಗೊಳ್ಳಲಿವೆ. ಇಲ್ಲಿನ ರಸ್ತೆ ವಿಸ್ತರಿಸುವ ಕಾಮಗಾರಿ ಪೂರ್ಣಗೊಂಡ ಅನಂತರ ಬಸ್‌ ನಿಲ್ದಾಣ ನಿರ್ಮಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು.
– ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಆಯುಕ್ತರು, ಮಹಾನಗರ ಪಾಲಿಕೆ

Advertisement

ಬಿಸಿಲು, ಮಳೆಗೆ ರಕ್ಷಣೆಗೆ ವ್ಯವಸ್ಥೆ ಮಾಡಿ
ಹಂಪನಕಟ್ಟೆ ಕಡೆಯಿಂದ ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಸಹಿತ ಉಡುಪಿ, ಕುಂದಾಪುರ, ಮಣಿಪಾಲ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಮೊದಲಾದೆಡೆ ತೆರಳುವ ನೂರಾರು ಬಸ್‌ಗಳಿಗೆ ಇಲ್ಲಿ ನಿಲುಗಡೆಯಿದೆ. ಆದರೆ ಬಸ್‌ಗಾಗಿ ಇಲ್ಲಿ ಕಾಯುವುದು ದೊಡ್ಡ ಸಮಸ್ಯೆ. ಬಿಸಿಲು, ಮಳೆಗೆ ರಕ್ಷಣೆ ಪಡೆಯುವುದಕ್ಕೂ ಸಾಧ್ಯವಾಗುವುದಿಲ್ಲ.
 - ಯಶವಂತ್‌, ನಿತ್ಯ ಪ್ರಯಾಣಿಕರು

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next