Advertisement

ಗೋಪಿಚಂದ್‌ ವಿರುದ್ಧ ಸ್ವಹಿತಾಸಕ್ತಿ ಆರೋಪ

10:05 AM Dec 12, 2019 | Sriram |

ನವದೆಹಲಿ: ಭಾರತ ಬ್ಯಾಡ್ಮಿಂಟನ್‌ ತಂಡದ ಮಾಜಿ ಡಬಲ್ಸ್‌ ಆಟಗಾರ್ತಿ ಜ್ವಾಲಾ ಗುಟ್ಟಾ, ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್‌ ಅಕಾಡೆಮಿ ಆರಂಭಿಸಿದ್ದಾರೆ. ತಮ್ಮ ಅಕಾಡೆಮಿ ಆರಂಭವಾಗಿರುವುದನ್ನು ಘೋಷಿಸಿದ ಅವರು, ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯ ಮುಖ್ಯ ತರಬೇತುದಾರ ಗೋಪಿಚಂದ್‌ ಮೇಲೆ ತೀವ್ರವಾಗಿ ಹರಿಹಾಯ್ದರು. ಭಾರತ ಬ್ಯಾಡ್ಮಿಂಟನ್‌ ಮುಖ್ಯ ತರಬೇತುದಾರರಾಗಿರುವ ಗೋಪಿಚಂದ್‌, ಆಯ್ಕೆಸಮಿತಿಯ ಮುಖ್ಯಸ್ಥರೂ ಹೌದು. ಹಾಗೆಯೇ ಹೈದರಾಬಾದ್‌ನಲ್ಲಿ ತಮ್ಮದೇ ಅಕಾಡೆಮಿ ಹೊಂದಿದ್ದಾರೆ. ಇದು ಸ್ವಹಿತಾಸಕ್ತಿಯಲ್ಲವೇ? ಇದನ್ನು ತನಿಖೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

Advertisement

ಅಲ್ಲದೇ ಗೋಪಿಚಂದ್‌ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ ಅಧ್ಯಕ್ಷ, ತೆಲಂಗಾಣ ಸಂಸ್ಥೆಯ ಕಾರ್ಯದರ್ಶಿ, ಖೇಲೋ ಇಂಡಿಯಾದಲ್ಲಿ ಜವಾಬ್ದಾರಿ ಹೊಂದಿದ್ದಾರೆ. ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನಲ್ಲೂ ಹೊಣೆಗಾರಿಕೆಯಿದೆ. ಗೋನ್ಪೋರ್ಟ್ಸ್ನಲ್ಲೂ ಪಾತ್ರವಿದೆ. ಇವೆಲ್ಲ ನನ್ನ ಕಲ್ಪನೆಯಲ್ಲ, ಅಧಿಕೃತವಾಗಿ ದಾಖಲೆಗಳಿವೆ. ಇಷ್ಟೆಲ್ಲ ಹೊಂದಿರುವುದು ಸ್ವಹಿತಾಸಕ್ತಿಯಲ್ಲವೇ ಎಂದು ಜ್ವಾಲಾ ಖಾರವಾಗಿ ಪ್ರಶ್ನಿಸಿದರು. 2016ರ ನಂತರ ಜ್ವಾಲಾ ಬ್ಯಾಡ್ಮಿಂಟನ್‌ ಆಡಿಲ್ಲ. ಹಾಗಂತ ಅವರು ನಿವೃತ್ತಿಯನ್ನೂ ಘೋಷಿಸಿಲ್ಲ ಎನ್ನುವುದು ಗಮನಾರ್ಹ.

ಭಾರತೀಯ ಬ್ಯಾಡ್ಮಿಂಟನ್‌ ತಂಡದ ಶಿಬಿರಗಳೆಲ್ಲ ಈಗ ಹೈದರಾಬಾದ್‌ನಲ್ಲೇ ನಡೆಯುತ್ತಿವೆ. ದೇಶದ ಬೇರೆ ಭಾಗಗಳಲ್ಲಿ ಯಾಕೆ ನಡೆಯುತ್ತಿಲ್ಲ? ಭಾರತ ತಂಡದಲ್ಲಿ ತೆಲುಗುಯೇತರ ವ್ಯಕ್ತಿಗಳು ಎಷ್ಟು ಮಂದಿಯಿದ್ದಾರೆ? ಕಳೆದ 10 ವರ್ಷದಲ್ಲಿ ಭಾರತ ತಂಡದ ಪರ ಆಡಬಲ್ಲ ತೆಲುಗುಯೇತರ ವ್ಯಕ್ತಿಗಳು ತಯಾರಾಗಿಲ್ಲ. ಅನ್ಯರಾಜ್ಯದವರೂ ಈಗ ತೆಲಂಗಾಣದ ಪರ ಆಡುತ್ತಿದ್ದಾರೆ ಎಂದು ಜ್ವಾಲಾ ಹೇಳಿದರು. ಈ ಮೂಲಕ ಪರೋಕ್ಷವಾಗಿ ಇವಕ್ಕೆಲ್ಲ ಗೋಪಿಚಂದ್‌ ಅವರೇ ನೇರಕಾರಣ ಎಂದು ವಾಗ್ಧಾಳಿ ನಡೆಸಿದರು.

ದ್ವೇಷ ಹಳತು: ಗೋಪಿಚಂದ್‌ ಮತ್ತು ಜ್ವಾಲಾ ಗುಟ್ಟಾ ನಡುವಿನ ದ್ವೇಷಕ್ಕೆ ಹಳೆಯ ಇತಿಹಾಸವಿದೆ. ತಾನು ಭಾರತ ತಂಡದಲ್ಲಿ ಆಡುವುದು ಗೋಪಿಚಂದ್‌ಗೆ ಇಷ್ಟವಿಲ್ಲ ಎಂದು ಜ್ವಾಲಾ ಈ ಹಿಂದೆಯೂ ಆರೋಪಿಸಿದ್ದಾರೆ. ಅದೇ ಕಾರಣಕ್ಕೆ ನಾನು ಆಟ ನಿಲ್ಲಿಸಿದೆ ಎಂದೂ ಪರೋಕ್ಷವಾಗಿ ಜ್ವಾಲಾ ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next