Advertisement

ಪಣಜಿ: ವಿಶ್ವದಲ್ಲೇ ಜುವಾರಿ ಅತ್ಯಾಧುನಿಕ ಸೇತುವೆ; ಸಚಿವ ನಿತಿನ್ ಗಡ್ಕರಿ

01:17 PM Dec 30, 2022 | |

ಪಣಜಿ: ಗೋವಾದ ಜುವಾರಿ ಸೇತುವೆಯು ಅತ್ಯಾಧುನಿಕ ಸೇತುವೆಯಾಗಿದೆ. ಈ ಸೇತುವೆ ಎಷ್ಟು ಸುಂದರವಾಗಿದೆಯೆಂದರೆ ದೇಶದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಇದು ಅತ್ಯಾಧುನಿಕ ಎಂದು ಹೆಸರಿಸಲ್ಪಡುತ್ತದೆ ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದರು.

Advertisement

ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು 2024 ರ ಅಂತ್ಯದ ಮೊದಲು ಅಮೆರಿಕದ ರಸ್ತೆಗಳಿಗಿಂತ ಭಾರತದ ರಸ್ತೆಗಳು ಉತ್ತಮವಾಗಿರುತ್ತವೆ ಎಂದು ನಿರ್ಧರಿಸಿದ್ದೇವೆ.  ಮುಂಬರುವ ದಿನಗಳಲ್ಲಿ ಗೋವಾದ ಮೂಲಸೌಕರ್ಯವೂ ಸುಧಾರಿಸಬೇಕು. ಇನ್ನು ಹಲವು ವರ್ಷಗಳ ಕಾಲ ಗೋವಾದ ಜನತೆ ಈ ಸೇತುವೆಯ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗೋವಾದ ಜುವಾರಿ ನದಿಗೆ ನೂತನವಾಗಿ ನಿರ್ಮಿಸಲಾಗಿರುವ ಜುವಾರಿ ಸೇತುವೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಈ ಸೇತುವೆಯ ಭೂಮಿಪೂಜೆಯನ್ನು ನಾನು ಮತ್ತು ಮನೋಹರ್ ಪರಿಕ್ಕರ್ ಮಾಡಿದ್ದೆವು. ಗಂಗೆಯಲ್ಲಿ 13 ಸೇತುವೆಗಳು, ಬ್ರಹ್ಮಪುತ್ರದಲ್ಲಿ 8 ಸೇತುವೆಗಳು, ಅದೂ ಕೂಡ ಹೊಸ ತಂತ್ರಜ್ಞಾನದ ಪ್ರಕಾರ ನಿರ್ಮಿಸುತ್ತಿದ್ದೇವೆ ಎಂದರು.

ಈ ಜುವಾರಿ ಸೇತುವೆ ಬಾಂದ್ರಾ-ವರ್ಲಿ ಸೇತುವೆಗಿಂತ ದೊಡ್ಡದಾಗಿದೆ. ಸಮಾಲೋಚಕರು, ಗುತ್ತಿಗೆದಾರರು, ಇಂಜಿನಿಯರ್‍ ಗಳು ಈ ಅನೇಕ ತೊಂದರೆಗಳನ್ನು ನಿವಾರಿಸಿ ಈ ಸೇತುವೆಯನ್ನು ನಿರ್ಮಿಸಿದ್ದಾರೆ. ಈ ಸೇತುವೆಯ ಮೇಲೆ ರಿವಾಲ್ವಿಂಗ್ ರೆಸ್ಟೋರೆಂಟ್ ಮತ್ತು ಆರ್ಟ್ ಗ್ಯಾಲರಿ ನಿರ್ಮಿಸುವುದು ನನ್ನ ಕನಸಾಗಿತ್ತು. ಈ ಸೇತುವೆಗೆ ಎರಡು ಬಾರಿ ಟೆಂಡರ್ ಕರೆದರೂ ಯಾರೂ ಬಂದಿಲ್ಲ. ಹಾಗಾಗಿ ನಾನೇ, ಗೋವಾ ಮುಖ್ಯಮಂತ್ರಿ ಸಾವಂತ್, ಲೋಕೋಪಯೋಗಿ ಸಚಿವ ನೀಲೇಶ್ ಕಬ್ರಾಲ್ ಒಟ್ಟಾಗಿ ದಾರಿ ಕಂಡುಕೊಳ್ಳುತ್ತೇವೆ. ಅದನ್ನು ಹೇಗೆ ಸಾಧ್ಯವಾಗಿಸುವುದು ಎಂದು ದಾರಿ ಕಂಡುಕೊಳ್ಳುತ್ತೇವೆ ಎಂದು ಹೇಳಿದರು.

Advertisement

ಸೇತುವೆಯ ಕಾಂಕ್ರೀಟ್ ಬೇಸ್ ಅನ್ನು ಸೇತುವೆಯ ಮೇಲ್ಬಾಗ ನಿರ್ಮಾಣಕ್ಕೆ ಸೂಕ್ತವಾಗಿ ನಿರ್ಮಿಸಲಾಗಿದೆ ಇಲ್ಲಿ ರೆಸ್ಟೊರೆಂಟ್ ನಿರ್ಮಿಸುವ ಯೋಜನೆಯಿದ್ದು, ಈ ರೆಸ್ಟೋರೆಂಟ್‍ನಲ್ಲಿ ಕ್ಯಾಪ್ಸುಲ್ ಲಿಫ್ಟ್‌ ನೊಂದಿಗೆ ನೀರಿನಿಂದ ಮೇಲಕ್ಕೆ ಹೋಗುವ ಮೂಲಕ ಗೋವಾದ ಭಕ್ಷ್ಯಗಳನ್ನು ಆನಂದಿಸಬಹುದು. ಕಲಾ ಗ್ಯಾಲರಿಗಳು, ಗೋವಾದ ಆಹಾರ, ಸಂಸ್ಕೃತಿಯನ್ನು ಅನುಭವಿಸಬಹುದು. ಈ ಸೇತುವೆಯು ಜಾಗತಿಕ ಪ್ರವಾಸಿ ಆಕರ್ಷಣೆಯಾಗಲಿದೆ. ಸೇತುವೆಯ ಮೇಲಿನ ಗೋಪುರದಿಂದ ಇಡೀ ಗೋವಾ ಕಾಣಿಸುವಂತೆ ಉತ್ತಮ ವ್ಯವಸ್ಥೆ ಮಾಡಬಹುದು. ಪ್ರತಿ ವರ್ಷ 1200 ವಿಶೇಷ ವಿಮಾನಗಳು ಗೋವಾಕ್ಕೆ ಬರುತ್ತವೆ. ಹಾಗಾಗಿ ಈ ಆರ್ಟ್ ಗ್ಯಾಲರಿ, ಈ ಮೊಬೈಲ್ ರೆಸ್ಟೊರೆಂಟ್ ಪೂರ್ಣಗೊಳಿಸುವ ಜವಾಬ್ದಾರಿ ನಮ್ಮ ಮೇಲಿದೆ ನಾವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ, ಜುವಾರಿ ಸೇತುವೆ ದೇಶದ ಅತಿ ದೊಡ್ಡ ಸೇತುವೆ ಎಂಬ ಹೆಗ್ಗಳಿಕೆ ನಮಗಿದೆ. ತಲಾ ಶೇ.45ರಷ್ಟು ಹೆಚ್ಚು ಕಾರುಗಳನ್ನು ಹೊಂದಿರುವ ದೇಶದ ಮೊದಲ ರಾಜ್ಯ ಗೋವಾ. ಆದ್ದರಿಂದ ಪತ್ರಾದೇವಿಯಿಂದ ದೊಡಾಮಾರ್ಗಕ್ಕೆ, ಕೇರಿಯಿಂದ ಮೋಲೆಂಗೆ, ಮೋಲೆಂನಿಂದ ಪೋಳೆಗೆ ಪಶ್ಚಿಮ ಘಟ್ಟಗಳ ಮೂಲಕ ಸಂಪರ್ಕ ಕಲ್ಪಿಸುವ ವೃತ್ತಾಕಾರದ ರಸ್ತೆ ನಿರ್ಮಾಂಕ್ಕೆ ಅನುಮೋದನೆ ನೀಡುವಂತೆ ಮನವಿ ಮಾಡುತ್ತೇವೆ. ಬಾಂಬೋಲಿಯಿಂದ ವೆರ್ಣಾವರೆಗೆ ಕಾಮಗಾರಿ ನಡೆಯುತ್ತಿದ್ದ ವೇಳೆ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಆ ಕಾರ್ಮಿಕರ ಕುಟುಂಬಗಳಿಗೆ ಗೋವಾ ಸರ್ಕಾರದಿಂದ 2 ಲಕ್ಷ ರೂ. ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ಘೋಷಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಚಿವ ಶ್ರೀಪಾದ ನಾಯ್ಕ ಸೇರಿದಂತೆ ರಾಜ್ಯ ಸಚಿವರು, ವೇದಿಕೆಯ ಮೇಲೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next