Advertisement

ದಕ್ಷ ವಾದದೊಂದಿಗೆ ಕಕ್ಷಿದಾರನಿಗೆ ನ್ಯಾಯ ಕೊಡಿಸಿ

12:02 PM Jan 28, 2018 | |

ಎಚ್‌.ಡಿ.ಕೋಟೆ: ವಕೀಲರು ದಕ್ಷತೆಯ ಕಾರ್ಯ ನಿರ್ವಹಣೆಯೊಂದಿಗೆ  ಪರಿಣಾಮಕಾರಿಯಾಗಿ ವಾದ ಮಾಡಿದರೆ ಮಹತ್ವದ ತೀರ್ಪು ಸಾಧ್ಯವಿದ್ದು ಕಕ್ಷಿದಾರನಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಮೂರ್ತಿ ಸುಜಾತಾ ಕಿವಿಮಾತು ಹೇಳಿದರು.

Advertisement

ಪಟ್ಟಣದ ನ್ಯಾಯಾಲಯದ ಮೊದಲ ಮಹಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿದ್ದ ನ್ಯಾಯಾಲಯದ ಕಟ್ಟಡ ಮತ್ತು ಹಿರಿಯ ಸಿವಿಲ್‌ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ದಿವಾಣಿ ಶ್ರೇಣಿ ಕೇಸುಗಳಿಗೆ ತಾಲೂಕಿನ ಕಕ್ಷಿದಾರರು ದೂರದ ಹುಣಸೂರಿಗೆ ಹೋಗಬೇಕಿತ್ತು. ಈಗ ತಾಲೂಕಿನಲ್ಲಿಯೇ ನ್ಯಾಯಾಲಯ ಉದ್ಘಾಟನೆ ಆಗಿರುವುದರಿಂದ ನ್ಯಾಯಾಲಯ ಎಚ್‌.ಡಿ.ಕೋಟೆ ಜನರ ಮನೆ ಬಾಗಿಲಿಗೆ ಬಂದಂತಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಪವಿತ್ರ ದಿನದಿಂದ ಇಲ್ಲಿ ಹಿರಿಯ ದಿವಾಣಿ ಶ್ರೇಣಿ ನ್ಯಾಯಾಲಯ ಪ್ರಾರಂಭಗೊಂಡಿದ್ದು ತಾತ್ಕಾಲಿಕವಾಗಿ ನ್ಯಾಯಾಧೀಶರಾಗಿ ಹುಣಸೂರು ನ್ಯಾಯಾಲಯದ ನ್ಯಾಯಾಧೀಶರಾದ ಶಂಕರ್‌ ವಾರದಲ್ಲಿ 3 ದಿನ ಕರ್ತವ್ಯ ನಿರ್ವಹಿಸಲಿದ್ದಾರೆಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಬಿ.ಎಸ್‌.ಸಂಗಮೇಶ್ವರ್‌, ಮೊದಲೆಲ್ಲಾ  ತಾಲೂಕಿನ ಜನರು ಕೇಸುಗಳ ಇತ್ಯರ್ಥಕ್ಕಾಗಿ ಮೈಸೂರು ಮುನ್ಸಿಪಾಲ್‌ ನ್ಯಾಯಾಲಯಕ್ಕೆ ಹೋಗಬೇಕಿತ್ತು. 1989 ರಲ್ಲಿ ತಾಲೂಕಿನಲ್ಲಿ ನ್ಯಾಯಾಲಯ ಆರಂಭವಾಗಿ ಕಳೆದ 3 ವರ್ಷಗಳ ಹಿಂದೆ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ಪ್ರಾರಂಭ ವಾಯಿತು.

Advertisement

ತಾಲೂಕು ವ್ಯಾಪ್ತಿ ಹೆಚ್ಚಿರುವುದರಿಂದ ಪ್ರಕರಣಗಳು ಹೆಚ್ಚಿವೆ. ಈಗ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯ ಉದ್ಘಾಟನೆ ಆಗಿರುವುದರಿಂದ ಈ ಭಾಗದ ಜನರಿಗೆ ಸಕಾಲದಲ್ಲಿ ವ್ಯಾಜ್ಯಗಳು ಬಗೆಹರಿದು ಶೀಘ್ರ ನ್ಯಾಯ ಒದಗಿಸಲು ಅನುಕೂಲ ಆಗಲಿದೆ ಎಂದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಪಿ.ಜಿ.ಎಂ.ಪಾಟೀಲ್‌ ಮಾತನಾಡಿ, ಸಂವಿಧಾನದ ಅಶಯಗಳಿಗೆ ಅನುಗುಣವಾಗಿ ನ್ಯಾಯ ಒದಗಿಸುವುದು ನಮ್ಮೆಲ್ಲರ ಕರ್ತವ್ಯ. ತಾಲೂಕಿಗೆ 2016ರಲ್ಲೇ ಹಿರಿಂ‌ು ಸಿವಿಲ್‌ ನ್ಯಾಯಾಲಯ ಮಂಜೂರಾಗಿತ್ತು. ಆದರೆ ಕಟ್ಟಡದ ಅಭಾವದಿಂದ ಇದುವರೆಗೆ ಸಾಧ್ಯ ಆಗಿರಲಿಲ್ಲ. ಈಗ, ಸುಸಜ್ಜಿತ ಕಟ್ಟಡ ಉದ್ಘಾಟನೆಯಾಗಿದ್ದು ಕಕ್ಷಿದಾರರರಿಗೆ ಸಮಯ- ಖರ್ಚು ಉಳಿತಾಯ ಆಗಲಿದೆ ಎಂದು ತಿಳಿಸಿದರು.

ಸಿವಿಲ್‌ ನ್ಯಾಯಾಧೀಶರಾದ ಸರ್ಪರಾಜ್‌ ಹುಸೇನ್‌ ಕಿತ್ತೂರು, ಕೆ.ಕೇಶವ, ಮಹಮ್ಮದ್‌ ಮುಜಿಬುಲ್‌, ಶಂಕರ್‌, ಶಿವಪ್ರಭು, ಹಿರಿಯ ವಕೀಲರಾದ ಸಿ.ಎಂ.ಜಗದೀಶ್‌, ಸಿ.ಅಪ್ಪಾಜಿಗೌಡ, ಸತ್ಯನಾರಾಯಣ್‌ರಾವ್‌, ಸರ್ಕಾರಿ ಅಭಿಯೋಜಕ ಮಧು, ಜಿ.ಎನ್‌.ನಾರಾಯಣಗೌಡ,

ಕೆ.ಸಿ.ಚಂದ್ರಶೇಖರ್‌, ಕೃಷ್ಣೇಗೌಡ, ದೊರೆಸ್ವಾಮಿ, ಎ.ಟಿ.ಕೃಷ್ಣೇಗೌಡ, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ರಾಮನಾಯ್ಕ, ಕಾರ್ಯದರ್ಶಿ ಪುಟ್ಟಸ್ವಾಮಿ, ವಕೀಲರಾದ ಎಂ.ಬಿ.ಶ್ರೀನಿವಾಸ್‌, ಡಿ.ಆರ್‌.ಮಹೇಶ್‌, ಬಾಲಚಂದ್ರು, ದಿನೇಶ್‌, ಹನುಮೇಶ್‌, ಆರ್‌.ನಾಗೇಶ್‌, ಸದಾಶಿವಪ್ಪ ಮತ್ತಿತರರಿದ್ದರು.
 
ಜನರಲ್ಲಿ ಕಾನೂನು ಅರಿವು ಹೆಚ್ಚಿದಂತೆಲ್ಲಾ ಕಾನೂನು ವ್ಯವಸ್ಥೆಯೂ ನ್ಯಾಯಾಲಯಗಳೂ ವಿಸ್ತಾರಗೊಳ್ಳಲಿವೆ. ವಕೀಲರು ನ್ಯಾಯಾಲಯದ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡು ಹೆಚ್ಚು ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ನಿಮ್ಮ ದುಡಿಮೆ ಜೋತೆಗೆ ಕಕ್ಷಿದಾರರಿಗೆ ನ್ಯಾಯ ಸಿಗುವಂತಾಗಬೇಕು. 
-ಸುಜಾತ, ಹೈಕೋರ್ಟ್‌ ನ್ಯಾಯಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next