ಕರ್ನಾಟಕ ಉಚ್ಚ ನ್ಯಾಯಾಲಯದ ಎರಡನೆಯ ಜ್ಯೇಷ್ಠತಮ ನ್ಯಾಯಮೂರ್ತಿ ಜಯಂತ್ ಎಂ. ಪಟೇಲ್ ರಾಜೀನಾಮೆ ನೀಡಿರುವುದಕ್ಕೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಂಗೀಯ ಆಯ್ಕೆ ಸಮಿತಿಯೇ ಕಾರಣವೆಂದು ದೂರಲಾಗುತ್ತದೆಯಾದರೂ ಈ ಆಕ್ಷೇಪದಲ್ಲಿ ಎನ್‌ಡಿಎ ಸರ್ಕಾರಕ್ಕೂ ಅದರದೇ “ಪಾಲು’ ಸಲ್ಲಬೇಕಿದೆ. ಮೂಲತಃ ಗುಜರಾತ್ ಉಚ್ಚನ್ಯಾಯಾಲಯದಿಂದ ಬಂದವರಾದ ನ್ಯಾ| ಪಟೇಲ್, ತನಗೆ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಪದವಿಯನ್ನು ನೀಡದೆ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗ ಮಾಡಿರುವುದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದ್ದಾರೆ. ನಿಜಕ್ಕಾದರೆ ಕರ್ನಾಟಕದ ಮುಖ್ಯ ನ್ಯಾಯಮೂರ್ತಿ ಸುಭೊ ಕಮಲ್ ಮುಖರ್ಜಿಯವರು ನಿವೃತ್ತಿ ಹೊಂದಲಿರುವ ದಿನವಾದ ಇದೇ ಅ.10ರಿಂದ ನ್ಯಾ| ಪಟೇಲ್ ಅವರು ಇಲ್ಲಿನ ಮುಖ್ಯ ನ್ಯಾಯಮೂರ್ತಿಯಾಗಿ ಮುಂಭಡ್ತಿ ಪಡೆಯಬೇಕಿತ್ತು. ಇದೀಗ ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಗೊಂಡು ಅಧಿಕಾರ ಸ್ವೀಕರಿಸಿದ್ದಿದ್ದರೆ, ಅವರು ಮುಖ್ಯ ನ್ಯಾಯಮೂರ್ತಿ ಪದವಿಗೆ ಅಥವಾ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಪದವಿಗೆ ಮುಂಭಡ್ತಿ ಪಡೆಯುವ ಅವಕಾಶದಿಂದ ವಂಚಿತರಾಗಿರುವ ಮೂರನೆಯ ಹಿರಿಯ ನ್ಯಾಯಮೂರ್ತಿಯಾಗಿರುತ್ತಿದ್ದರು. ಕರ್ನಾಟಕಕ್ಕೆ ವರ್ಗವಾಗುವ ಮುನ್ನ ನ್ಯಾ| ಪಟೇಲ್ ಅವರು ಗುಜರಾತ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕೆಲಸ ಮಾಡಿದ್ದರು. ಅವರ ಈ ಎರಡನೆಯ ವರ್ಗಾವಣೆ, ಯಾವ ದೃಷ್ಟಿಯಿಂದ ನೋಡಿದರೂ ಒಂದು ಘೋರ ಶಿಕ್ಷೆಯೇ ಹೌದು. ನ್ಯಾ| ಪಟೇಲ್ ಅವರ ವರ್ಗಾವಣೆ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಮೋದಿ ಸರ್ಕಾರದ ಒತ್ತಡಕ್ಕೆ ಒಳಗಾಗಿದೆ ಎಂದು ಭಾವಿಸುವುದಕ್ಕೆ ಬಲವಾದ ಕಾರಣವಿದೆ. ಈಗಾಗಲೇ ತಿಳಿದಿರುವಂತೆ, ನ್ಯಾ| ಪಟೇಲ್ ಅವರು ಗುಜರಾತ್ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದಾಗ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದ ಕುರಿತಂತೆ ಸಿಬಿಐ ತನಿಖೆಯಾಗಲೆಂದು ಆದೇಶ ನೀಡಿದ್ದರು; ಈ ಆದೇಶದನ್ವಯ ಗುಜರಾತಿನ ಕೆಲ ಹಿರಿಯ ಪೊಲೀಸಧಿಕಾರಿಗಳ ಬಂಧನವಾಗಿತ್ತು; ಈ ಘಟನೆ ಆಗಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರನ್ನು ಮುಜುಗರಗೊಳಿಸಿತ್ತು. ಉಚ್ಚ ನ್ಯಾಯಾಧೀಶರ ನೇಮಕಾತಿ ಹಾಗೂ ವರ್ಗಾವಣೆ ಪ್ರಕ್ರಿಯೆಯನ್ನು ನಡೆಸುವವರು ರಾಷ್ಟ್ರಪತಿಗಳು. ಹೀಗಿರುತ್ತ ಈ ಪ್ರಕ್ರಿಯೆಯಲ್ಲಿ ಕೇಂದ್ರದ ಪಾತ್ರವೂ ಇದೆ; ಈ ಪಾತ್ರವನ್ನು ಅದು ಅಲ್ಲಗಳೆಯುವ ಹಾಗಿಲ್ಲ! ಕಾರಣ, ರಾಷ್ಟ್ರಪತಿಗಳು ಈ ವಿಷಯದಲ್ಲಿ ಕಾರ್ಯ ನಿರ್ವಹಿಸುವುದು ಕೇಂದ್ರದ ಕಾನೂನು ಸಚಿವಾಲಯದ ಸಲಹೆಯ ಮೇರೆಗೆ. ಸರ್ವೋಚ್ಚ ನ್ಯಾಯಾಲಯದ ಆಯ್ಕೆ ಸಮಿತಿ ಇಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ನೇಮಕಾತಿ ಹಾಗೂ ವರ್ಗಾವಣೆ ವಿಚಾರದಲ್ಲಿ ಸರ್ವಶಕ್ತವೇ ಹೌದಾದರೂ ವಾಸ್ತವ ಸಂಗತಿ ಬೇರೆಯೇ ಆಗಿದೆ.
ನ್ಯಾ| ಪೆಂಡ್ಸೆ ಪ್ರಕರಣ: ಹೀಗೆ ಮುಂಭಡ್ತಿಯಿಂದ ವಂಚಿತ ರಾಗಿರುವವರು ನ್ಯಾ| ಜಯಂತ್ ಪಟೇಲ್ ಒಬ್ಬರೇ ಅಲ್ಲ. ಇನ್ನೊಂದು ರಾಜೀನಾಮೆ ಪ್ರಕರಣ ನೋಡಿ – 1996ರ ಮಾರ್ಚ್ 25ರಂದು ನಮ್ಮ ಆಗಿನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಮಧುಕರ್ ಲಕ್ಷ್ಮಣ್ ಪೆಂಡ್ಸೆ ಅವರು ಕೂಡ ಸರ್ವೋಚ್ಚ ನ್ಯಾಯಾಲಯಕ್ಕೆ ಮುಂಭಡ್ತಿ ನೀಡದಿದ್ದುದನ್ನು ಪ್ರತಿಭಟಿಸಿ ರಾಜೀನಾಮೆ ನೀಡಿದ್ದರು. ದೇಶದ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಪೈಕಿ ಅವರಿಗಿಂತ ಕಿರಿಯರಾಗಿದ್ದ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್.ಪಿ. ಕುರ್ದುಕರ್ ಹಾಗೂ ಕೇರಳ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಥಾಮಸ್ ಅವರಿಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮುಂಭಡ್ತಿ ನೀಡುವ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆಯೆಂಬ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಹರಿಯಾಣದ ಮುಖ್ಯ ನ್ಯಾಯಮೂರ್ತಿ ಪದವಿಗೆ ರಾಜೀನಾಮೆ ಸಲ್ಲಿಸಿದ್ದರು. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಾಮಾಜೋಯಿಸ್ ಅವರ ಬದಲಿಗೆ ಅವರ ಭೂತಪೂರ್ವ ಸಹೋದ್ಯೋಗಿ, ನ್ಯಾ| ವೆಂಕಟಾಚಲ (ಮುಂದೆ ಇವರು ಲೋಕಾಯುಕ್ತರಾದರು) ಅವರನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡಲಾಗಿತ್ತು. ನ್ಯಾ| ಪೆಂಡ್ಸೆ 1995ರ ಜುಲೈ 28ರಿಂದ ಕರ್ನಾಟಕದ ಮುಖ್ಯ ನ್ಯಾಯಮೂರ್ತಿಯಾಗಿದ್ದವರು. ಅಂದು ರಾಮಾಜೋಯಿಸ್ ಅವರು ಮಾಧ್ಯಮದವರೊಡನೆ ಮಾತನಾಡಲು ನಿರಾಕರಿಸಿದ್ದರು. ನ್ಯಾ|ಜಯಂತ್ ಪಟೇಲ್ ಅವರು ಮಾಧ್ಯಮದವರನ್ನು ಸಂಪರ್ಕಿಸಿ ಹೇಳಿಕೆ ನೀಡಿದರಾದರೂ ನ್ಯಾಯಾಂಗ ಸಂಬಂಧಿ ಶಿಸ್ತನ್ನು ಉಲ್ಲಂ ಸಲು ಇಷ್ಟವಿಲ್ಲದ್ದರಿಂದ ತನ್ನ ರಾಜೀನಾಮೆಯ ಹಿಂದಿನ ಕಾರಣತಿಳಿ ಸಲಿಲ್ಲ. ಈ ನಡುವೆ, ಸರ್ಕಾರೇತರ ಸಂಘಟನೆಯಾಗಿರುವ ಕ್ಯಾಂಪೇನ್ ಫಾರ್ ಜುಡಿಶಿಯಲ್ ಅಕೌಂಟೆಬಿಲಿಟಿ ಆ್ಯಂಡ್ ರಿಫಾರ್ಮ್ ನ್ಯಾ| ಪಟೇಲ್‌ರ ವರ್ಗಾವಣೆ ಖಂಡಿಸಿದೆ.
ಈ ವಿದ್ಯಮಾನ ನ್ಯಾಯಾಂಗ ವ್ಯವಸ್ಥೆಯ ಸ್ವಾತಂತ್ರ್ಯ ಕುರಿತಂತೆ ತೀವ್ರ ಆತಂಕಕ್ಕೆ ಕಾರಣವಾಗಿದೆ; ಶ್ರೇಷ್ಠ ನ್ಯಾಯಮೂರ್ತಿಗಳು ಕೇಂದ್ರ ಸರ್ಕಾರದ ಇಷಾರೆಗೆ ತಕ್ಕಂತೆ ವರ್ತಿಸುತ್ತಿರುವ ಹಾಗಿದೆ; ಹೀಗಾಗಿ ನ್ಯಾಯಾಂಗೀಯ ನೇಮಕಾತಿಗಳಲ್ಲಿ ರಾಜಕೀಯ ಮಧ್ಯಪ್ರವೇಶಗೈಯುತ್ತಿದೆಯೆ ಎಂಬ ಸಂದೇಹ ಮೂಡಲೂ ಕಾರಣವಾಗಿದೆ ಎಂದಿದೆ ಈ ಸಂಘಟನೆೆ. ವಿವಿಧ ಉಚ್ಚ ನ್ಯಾಯಾಲಯಗಳಲ್ಲಿನ ಹುದ್ದೆಗಳ ಪೈಕಿ ಹೆಚ್ಚಿನವು ಖಾಲಿ ಬಿದ್ದಿವೆ. ಸರ್ವೋಚ್ಚ ನ್ಯಾಯಾಲಯದಲ್ಲೂ ಸ್ವಲ್ಪ ಮಟ್ಟಿಗೆ ಇದೇ ಅವಸ್ಥೆ. ಇಂಥ ಪರಿಸ್ಥಿತಿ ಉಂಟಾಗುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂಬ ಆಕ್ಷೇಪದಿಂದ ಅದು ನುಣುಚಿಕೊಳ್ಳುವುದು ಸಾಧ್ಯವಿಲ್ಲ. ಸರ್ವೋಚ್ಚ ನ್ಯಾಯಾಲಯವು ರಾಷ್ಟ್ರೀಯ ನ್ಯಾಯಾಂಗೀಯ ನೇಮಕಾತಿ ಆಯೋಗವನ್ನು ಅನೂರ್ಜಿತಗೊಳಿಸಿ, ತತ್ಸಂಬಂಧಿ (ಸಂವಿಧಾನದ) 99ನೆಯ ತಿದ್ದುಪಡಿಯನ್ನು ನಿರಸನಗೊಳಿಸಿ 2015ರ ಅಕ್ಟೋಬರ್‌ನಲ್ಲಿ ಆದೇಶ ಹೊರಡಿಸಿದ ಬಳಿಕ, ಅಂದಿನಿಂದ ಸರ್ವೋಚ್ಚ ನ್ಯಾಯಾಲಯದೊಂದಿಗಿನ ಕೇಂದ್ರದ ಸಂಬಂಧ “ಸುಮಧುರ’ವೆನಿಸುವ ರೀತಿಯಲ್ಲಿಲ್ಲ.
ಈ ತೀರ್ಪು ಹೊರಬಿದ್ದಂದಿನಿಂದಲೂ ಕೇಂದ್ರವು ನೇಮಕಾತಿ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ಕಾಲೆಳೆಯುವ ಕೆಲಸ ಮಾಡುತ್ತಲೇ ಬಂದಿದೆ. 2017ರ ಆಗಸ್ಟ್ ಹೊತ್ತಿಗೆ ನಮ್ಮ 24 ಉಚ್ಚ ನ್ಯಾಯಾಲಯಗಳಲ್ಲಿ 672 ನ್ಯಾಯಾಧೀಶರುಗಳಿದ್ದರು; 407 ಹುದ್ದೆಗಳು ಖಾಲಿಬಿದ್ದಿದ್ದವು. ವಿವಿಧ ಉಚ್ಚ ನ್ಯಾಯಾಲಯ ಗಳಿಗೆ ನೇಮಕಾತಿ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ಸಲ್ಲಿಸಿರುವ 350ರಷ್ಟು ದೊಡ್ಡ ಸಂಖ್ಯೆಯ ಶಿಫಾರಸುಗಳ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರವನ್ನೇ ತೆಗೆದುಕೊಂಡಿಲ್ಲ. ಇತ್ತೀಚೆಗಷ್ಟೇ ಅಲಹಾಬಾದ್,ಕಲ್ಕತ್ತಾ ಉಚ್ಚ ನ್ಯಾಯಾಲಯಗಳಿಗೆ 24 ಹೆಚ್ಚುವರಿ ನ್ಯಾಯಮೂರ್ತಿಗಳನ್ನು ನೇಮಿಸಲಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ 62 ನ್ಯಾಯಮೂರ್ತಿಗಳು ಬೇಕೆಂಬ ಬಗ್ಗೆ ಮಂಜೂರಾತಿ ದೊರೆತಿದ್ದರೂ, ನ್ಯಾ| ಪಟೇಲ್ ರಾಜೀನಾಮೆ ನೀಡುವುದರೊಂದಿಗೆ ಈ ಸಂಖ್ಯೆ ಕೇವಲ 27 ಎಂಬುದನ್ನು ಗಮನಿಸಬೇಕು. ಅಠಾರಾ ಕಚೇರಿಗೆ ಕಾಲಿಟ್ಟಿರಿ ಎಂದಾದರೆ ಖಾಲಿ ಕೋರ್ಟ್ ಹಾಲ್‌ಗಳಿಂದ ಸ್ವಾಗತ ಪಡೆಯಬೇಕಷ್ಟೆ. ಇನ್ನೊಂದು ಸಮಸ್ಯೆ- ನೇಮಕಾತಿಗೆ ಸಂಬಂಧಿಸಿದಂತೆ ಅಡ್ವೋಕೇಟ್‌ಗಳು, ನ್ಯಾಯಾಂಗೀಯ ಅಧಿಕಾರಿಗಳ ಬಗೆಗಿನ ಅರ್ಹ ದಾಖಲೆಗಳನ್ನು ಕೇಂದ್ರ-ರಾಜ್ಯ ಬೇಹುಗಾರಿಕೆ ಸಂಸ್ಥೆಗಳು ಒದಗಿಸಿದ್ದರೂ ಕೇಂದ್ರ ಇವರುಗಳ ಅರ್ಹತಾಂಶಗಳನ್ನು ಪ್ರಶ್ನಿಸುತ್ತಿದೆಯೆನ್ನಲಾಗುತ್ತದೆ.
ಮೋದಿ ಸರ್ಕಾರಕ್ಕೇಕೆ ಅಸಂತುಷ್ಟಿ?: ಸರ್ವೋಚ್ಚ ನ್ಯಾಯಾ ಲಯ ಕೇಂದ್ರೀಯ ನ್ಯಾಯಾಂಗೀಯ ನೇಮಕಾತಿ ಆಯೋಗ (ಎನ್‌ಜೆಎಸಿ) ಬರಖಾಸ್ತು ಗೊಳಿಸಿದ ಬಳಿಕ ವಿವಿಧ ಉಚ್ಚ ನ್ಯಾಯಾಲಯಗಳಿಗೆ ಮಾಡಲಾಗಿರುವ ನೇಮಕಾತಿಗಳ ಸಂಖ್ಯೆ, ಇತ್ತೀಚೆಗೆ ಮಾಡಲಾಗಿರುವ 24 ನೇಮಕಾತಿಯೂ ಸೇರಿದಂತೆ, ಕೇವಲ 75. ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎನ್. ಕುಮಾರ್ ಅವರ ನೇಮಕಾತಿಗೆ ಅಡ್ಡಿಯಾಗಿ ಪರಿಣಮಿಸಿದ್ದು (2016ರ ಜೂನ್‌ನಲ್ಲಿ) ಈ ಆಯೋಗದ ರಚನೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ದೂರು. ನ್ಯಾ| ಕುಮಾರ್ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶದಿಂದಲೂ ವಂಚಿತರಾಗಿ ನಿವೃತ್ತಿ ಹೊಂದಬೇಕಾಯಿತು. ನ್ಯಾಯಾಲಯಗಳಿಗೆ ಮಾಡಬೇಕಾದ ನೇಮಕಾತಿಗಳ ವಿಷಯದಲ್ಲಿ ಈಗ ಉದ್ಭವಿಸಿರುವ ಬಿಕ್ಕಟ್ಟಿಗೆ ಕಾರಣವೇನೆಂದು ಹುಡುಕುತ್ತ ಹೋದರೆ, ಮೇ 2017ರ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕಣ್ಣೆದುರಿಗೆ ಬರುತ್ತದೆ. ನ್ಯಾ| ಜ್ಯೇಷ್ಠಿ ಚಲಮೇಶ್ವರ್ ಹಾಗೂ ನ್ಯಾ| ರಂಜನ್ ಗೊಗೋಯ್ ಮದ್ರಾಸ್ ಉಚ್ಚ ನ್ಯಾಯಾಲಯದ ಭೂತಪೂರ್ವ ನ್ಯಾ| ಸಿ.ಎಸ್. ಕರ್ಣನ್‌ರನ್ನು, ಉನ್ನತ ನ್ಯಾಯಾಲಯದ ನ್ಯಾಯಾಧೀಶರ ಮಾನಹಾನಿ ಮಾಡಿದ್ದಕ್ಕಾಗಿ ಆರು ತಿಂಗಳ ಕಾಲ ಜೈಲಿನಲ್ಲಿರಿಸುವಂತೆ ತೀರ್ಪಿ ನಲ್ಲಿ ಆದೇಶಿಸಲಾಗಿತ್ತು. ಸಾಂವಿಧಾನಿಕ ನ್ಯಾಯಾಲಯಗಳ ಆಯ್ಕೆ ಪ್ರಕ್ರಿಯೆ ಹಾಗೂ ನೇಮಕಾತಿಗಳ ಕ್ರಮವನ್ನು ಪುನರ್ ಪರಿಶೀಲಿಸುವಂತೆ ಆಯ್ಕೆ ಸಮಿತಿಗೂ ಸೂಚಿಸಿದ್ದರು. ಇದಕ್ಕೂ ಮೊದಲೇ ನ್ಯಾ| ಚಲಮೇಶ್ವರ್ ಅವರು ಆಯ್ಕೆ ಸಮಿತಿಯ ಕಾರ್ಯವಿಧಾನದಲ್ಲಿ ಪಾರದರ್ಶಕತೆ ಕಾಣಿಸುತ್ತಿಲ್ಲವೆಂಬ ಕಾರಣ ನೀಡಿ, ಕೊಲಿಜಿಯಂಸಭೆಗಳಿಗೆ ಗೈರು ಹಾಜರಾಗುತ್ತಿದ್ದರು.
ನ್ಯಾಯಾಂಗೀಯ ನೇಮಕಾತಿಗಳ ಬಗ್ಗೆ ತನ್ನದೇ ದೃಷ್ಟಿಕೋನ ಹೊಂದಿರುವ ಕೇಂದ್ರ, ಮೇಲಿನ ನ್ಯಾಯಮೂರ್ತಿಗಳಿಬ್ಬರ ತೀರ್ಪನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವಂತಿದೆ. ಈ ತೀರ್ಪಿನ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯಗಳ ನೇಮಕ ಸಂಬಂಧದ ಸೂಚನಾಪತ್ರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪುನರ್‌ಪರಿಶೀಲನೆ ನಡೆಸುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಸೂಚಿಸಿದೆಯೆನ್ನಲಾಗಿದೆ. ಈಗ ನ್ಯಾ| ಜಯಂತ್ ಪಟೇರನ್ನು ಅಲಹಾಬಾದಿಗೆ ವರ್ಗ ಮಾಡಿರುವುದೇಕೆ ಎಂಬುದನ್ನು ಸರ್ವೋಚ್ಚ ನ್ಯಾಯಾಲಯದ ಆಯ್ಕೆ ಸಮಿತಿ ಸಾರ್ವಜನಿಕವಾಗಿ ಬಹಿರಂಗ ಪಡಿಸುವ ಸಾಧ್ಯತೆ ತೀರಾ ಕಡಿಮೆ! ಕೆಲ ವರ್ಷಗಳ ಕಾಲ “ಕರ್ತವ್ಯಬದ್ಧ’ ನ್ಯಾಯಾಧೀಶ ನೇಮಕಾತಿಗಷ್ಟೇ ಶಿಫಾರಸು ಮಾಡುತ್ತಿದ್ದ ಇಂದಿರಾಗಾಂಧಿ ಕಾಲದ ಸರ್ಕಾರಗಳಿಗಿಂತ ಎನ್‌ಡಿಎ ಭಿನ್ನವಾಗಿಲ್ಲ. “ಬದ್ಧತೆ’ ಎಂದರೆ ಸರ್ಕಾರದ ಸಿದ್ಧಾಂತಗಳಿಗೆ, ನಿಲುಗಳಿಗೆ ಬದ್ಧತೆ ಎಂದರ್ಥ! ಯಾವುದೋ ಸಿದ್ಧಾಂತಕ್ಕೆ ಬದ್ಧರಾಗಿರುವ ವ್ಯಕ್ತಿಗಳನ್ನಷ್ಟೆ ಆಯ್ಕೆ ಮಾಡ ಬೇಕೆಂದು ಕೇಂದ್ರ ಪಟ್ಟು ಹಿಡಿದಿದೆಯೆ? ಮುನ್ಸಿಫ್ ಕೋರ್ಟಿನಲ್ಲೂ ಯಾವುದೇ ರಾಜಕೀಯ ಪಕ್ಷಕ್ಕೆ ಬದ್ಧರಾಗಿಲ್ಲದ ಉತ್ತಮ ನ್ಯಾಯಾಧೀಶರಿಲ್ಲವೆನ್ನುವುದು ಜನಸಾಮಾನ್ಯರಿಗೂ ಸುಲಭವಾಗಿ ಸಹಿಸಿಕೊಳ್ಳಲು ಸಾಧ್ಯವಾಗದ ಕಹಿಸತ್ಯವಾಗಿದೆ. ಅಂದ ಹಾಗೆ ಭಾರತದ ರಾಜಕಾರಣದಲ್ಲಿ “ಸಿದ್ಧಾಂತ’ ವೆನ್ನುವುದೇ ಇಲ್ಲವೆಂಬುದು ಬೇರೆ ಮಾತು.