ಹೊಸದಿಲ್ಲಿ: ನ್ಯಾಯಮೂರ್ತಿ ಕರ್ಣನ್ ಮತ್ತು ಸರ್ವೋಚ್ಚ ನ್ಯಾಯಾಲಯದ ನಡುವಿನ ಸಂಘರ್ಷ ಮತ್ತೂಂದು ಘಟ್ಟ ತಲುಪಿದೆ. ಸುಪ್ರೀಂ ಕೋರ್ಟ್ ಜಡ್ಜ್ಗಳ ವಿರುದ್ಧವೇ ಭ್ರಷ್ಟಾಚಾರ ಆರೋಪ ಹೊರಿಸಿ ನ್ಯಾಯಾಂಗ ನಿಂದನೆಗೆ ಗುರಿಯಾ ಗಿರುವ ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ ಸಿ. ಎಸ್. ಕರ್ಣನ್ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶ ನೀಡಿದೆ.
ಕೋಲ್ಕತಾ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರ ಮಂಡಳಿ ರಚಿಸಿ, ನ್ಯಾ| ಕರ್ಣನ್ ಅವರು ಮಾನಸಿಕ ವಾಗಿ ಸ್ಥಿರವಾಗಿದ್ದಾರೆಯೇ ಎಂಬ ಬಗ್ಗೆ ಮೇ 4ರಂದು ಪರೀಕ್ಷೆ ನಡೆಸಿ ಮೇ 8ರೊಳಗೆ ವರದಿ ನೀಡಿ ಎಂದು ಪಶ್ಚಿಮ ಬಂಗಾಲ ಪೊಲೀಸ್ ಮಹಾನಿರ್ದೇಶಕರಿಗೆ ಸಿಜೆಐ ಜೆ.ಎಸ್. ಖೇಹರ್ ನೇತೃತ್ವದ 7 ಮಂದಿ ನ್ಯಾಯಮೂರ್ತಿಗಳ ಪೀಠ ಆದೇಶಿಸಿದೆ.
ಸುಪ್ರೀಂ ಆದೇಶ ಹೊರಬೀಳುತ್ತಿದ್ದಂತೆಯೇ ಕೆಂಡಾಮಂಡಲರಾಗಿರುವ ನ್ಯಾ| ಕರ್ಣನ್, “ನನ್ನನ್ನೇನಾದರೂ ಪರೀಕ್ಷಿಸಲು ಬಂದರೆ, ಪಶ್ಚಿಮ ಬಂಗಾಲ ಡಿಜಿಪಿಯನ್ನೇ ಅಮಾನತು ಮಾಡಿ ಆದೇಶ ಹೊರಡಿಸುತ್ತೇನೆ’ ಎಂದಿದ್ದಾರೆ. ಜತೆಗೆ ತನ್ನ ವೈದ್ಯಕೀಯ ಪರೀಕ್ಷೆಗೆ ಆದೇಶಿಸಿದ ಸುಪ್ರೀಂ ಕೋರ್ಟ್‌ನ 7 ಮಂದಿ ನ್ಯಾಯಮೂರ್ತಿಗಳನ್ನೇ ಮಾನಸಿಕ ತಪಾಸಣೆಗೆ ಒಳಪಡಿಸುವಂತೆ ಡಿಜಿಪಿ ಮತ್ತು ಕೇಂದ್ರ ಸರಕಾರಕ್ಕೆ ಸೂಚಿಸಿ ಹೊಸ ಆದೇಶ ಹೊರಡಿಸಿದ್ದಾರೆ.
ಆದೇಶ ಪರಿಗಣಿಸದಂತೆ ಸೂಚನೆ: ಸೋಮವಾರ ಈ ಕುರಿತ ವಿಚಾರಣೆ ನಡೆಸಿದ ಸಿಜೆಐ ನೇತೃತ್ವದ ಪೀಠ, “ನ್ಯಾ| ಕರ್ಣನ್‌ರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲೇಬೇಕು. ಇದಕ್ಕಾಗಿ ಹೊಸ ವೈದ್ಯಕೀಯ ತಂಡವನ್ನು ರಚಿಸಿ. ಜತೆಗೆ ಅವರ ಪರೀಕ್ಷೆ ವೇಳೆ ವೈದ್ಯರಿಗೆ ನೆರವಾಗಲು ಪೊಲೀಸ್ ಅಧಿಕಾರಿಗಳ ತಂಡವನ್ನೂ ರಚಿಸಿ’ ಎಂದು ಡಿಜಿಪಿಗೆ ಸೂಚನೆ ನೀಡಿತು. ಇದೇ ವೇಳೆ “ಯಾವುದೇ ಆಡಳಿತಾತ್ಮಕ ಮತ್ತು ನ್ಯಾಯಾಂಗದ ಅಧಿಕಾರವನ್ನು ಚಲಾಯಿಸದಂತೆ ನ್ಯಾ| ಕರ್ಣನ್ ಅವರಿಗೆ ನಾವು ಈಗಾಗಲೇ ಆದೇಶಿಸಿದ್ದೇವೆ. ಹಾಗಾಗಿ, ಫೆ.8ರ ಬಳಿಕ ನ್ಯಾ| ಕರ್ಣನ್ ಅವರು ಹೊರಡಿಸಿದ ಯಾವುದೇ ಆದೇಶಗಳನ್ನು ಪರಿಗಣಿಸಬೇಕಾಗಿಲ್ಲ’ ಎಂದೂ ದೇಶದ ಎಲ್ಲ ನ್ಯಾಯಾಲಯಗಳು, ನ್ಯಾಯಮಂಡಳಿಗಳು ಹಾಗೂ ಆಯೋಗಕ್ಕೆ ನ್ಯಾಯಪೀಠ ಸೂಚಿಸಿತು.
ಮೇ 8ರೊಳಗೆ ಪ್ರತಿಕ್ರಿಯೆ ನೀಡಿ: ನ್ಯಾಯಾಂಗ ನಿಂದನೆ ನೋಟಿಸ್‌ಗೆ ಸಂಬಂಧಿಸಿ ಮೇ 8ರೊಳಗೆ ಪ್ರತಿಕ್ರಿಯೆ ನೀಡುವಂತೆ ನ್ಯಾ| ಕರ್ಣನ್‌ಗೆ ನ್ಯಾಯಪೀಠ ಆದೇಶಿಸಿದೆ. ಒಂದು ವೇಳೆ ಮೇ 8ರೊಳಗೆ ಪ್ರತಿಕ್ರಿಯೆ ನೀಡದೇ ಇದ್ದಲ್ಲಿ ನಿಮಗೆ ಹೇಳಲು ಏನೂ ಇಲ್ಲ ಎಂದು ಪರಿಗಣಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿ ಮೇ 9ಕ್ಕೆ ವಿಚಾರಣೆಯನ್ನು ಮುಂದೂಡಿತು. ಈ ಹಿಂದೆ, ಕೋರ್ಟ್ ಮುಂದೆ ಹಾಜರಾಗಿದ್ದ ನ್ಯಾ| ಕರ್ಣನ್, ತಮ್ಮ ಆಡಳಿತಾತ್ಮಕ ಹಾಗೂ ನ್ಯಾಯಾಂಗದ ಕರ್ತವ್ಯಗಳನ್ನು ಪೂರೈಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು. ಆದರೆ ಇದನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು. ಇದರಿಂದ ಕ್ರುದ್ಧರಾಗಿದ್ದ ನ್ಯಾ| ಕರ್ಣನ್, ಇನ್ನು ಮುಂದೆ ಕೋರ್ಟ್ ಮುಂದೆ ಹಾಜರಾಗುವುದಿಲ್ಲ ಎಂದು ಹೇಳಿ ಹೊರನಡೆದಿದ್ದರು.
ಬಲವಂತವಾಗಿ ನನ್ನನ್ನು ಪರೀಕ್ಷಿಸಲು ಬಂದರೆ ಡಿಜಿಪಿಯನ್ನೇ ಸಸ್ಪೆಂಡ್ ಮಾಡುತ್ತೇನೆ. ಏಮ್ಸ್ ವೈದ್ಯ ತಂಡದಿಂದ ಸುಪ್ರೀಂ ಕೋರ್ಟ್‌ನ 7 ಮಂದಿ ಜಡ್ಜ್ಗಳ ಮಾನಸಿಕ ಆರೋಗ್ಯವನ್ನು ಪರಿಶೀಲಿಸುವಂತೆ ಡಿಜಿಪಿ ಮತ್ತು ಕೇಂದ್ರ ಸರಕಾರಕ್ಕೆ ಆದೇಶಿಸುತ್ತೇನೆ.
ನ್ಯಾ| ಸಿ.ಎಸ್.ಕರ್ಣನ್, ಕೋಲ್ಕತಾ ಹೈಕೋರ್ಟ್ ನ್ಯಾಯಮೂರ್ತಿ