Advertisement

ಸಾಹೇಬ್‌ ಪಟೇಲ್‌ ಸಾವಿಗೆ ಸಿಗಲಿ ನ್ಯಾಯ

09:33 AM Jan 04, 2019 | Team Udayavani |

ರಾಯಚೂರು: ಚಿನ್ನ ಉತ್ಪಾದಿಸುವ ನಾಡು, ಬೆಳಕಿನ ಬೀಡು, ಭತ್ತದ ತವರು ಎಂದೆಲ್ಲ ಹೆಸರಾಗಿದ್ದ ರಾಯಚೂರು
ಅಕ್ರಮ ಮರಳು ದಂಧೆಗೂ ಕುಖ್ಯಾತಿ ಪಡೆಯುವ ಮೂಲಕ ಇತಿಹಾಸದಲ್ಲಿ ದಾಖಲಾಯಿತು. ನಾವು ಅಕ್ರಮ ಮಾಡಿಲ್ಲ ಎಂದು ಸಮರ್ಥಿಕೊಳ್ಳುವವರಿಗೆ ಬರಿದಾಗಿರುವ ಕೃಷ್ಣೆ-ತುಂಗಭದ್ರೆಯರ ಒಡಲುಗಳೇ ಜೀವಂತ ಸಾಕ್ಷಿ. ಮರಳಿನ ಕೃತಕ ಅಭಾವ ಸೃಷ್ಟಿಸುತ್ತಿರುವ ದಂಧೆಕೋರರು ಬಡವರು ಮನೆ ಕಟ್ಟಿಕೊಳ್ಳುವುದೇ ಅಸಾಧ್ಯ ಎನ್ನುವಂಥ ಸ್ಥಿತಿ ನಿರ್ಮಿಸಿರುವುದು ಮುಚ್ಚಿಟ್ಟ ಸತ್ಯವೇನಲ್ಲ. ಆಶ್ರಯ ಮನೆ ಮಂಜೂರಾದ ಬಡವರು 25-30 ಸಾವಿರ ರೂ. ಕೊಟ್ಟು ಮರಳು ಖರೀದಿಸುವಷ್ಟರಲ್ಲಿಯೇ ಸರ್ಕಾರದ ಅರ್ಧ ಸಹಾಯಧನ ಖರ್ಚಾಗುತ್ತಿದೆ. ಇದನ್ನು ಪ್ರಶ್ನಿಸಿದರೆ ಸರ್ಕಾರಕ್ಕೆ ನಾವು ರಾಯಲ್ಟಿ ಕಟ್ಟುವುದಿಲ್ಲವೇ ಎಂದು ಎದೆ ತಟ್ಟಿಕೊಂಡು ಪ್ರಶ್ನಿಸುತ್ತಾರೆ ವರ್ತಕರು. ಈ ಅಕ್ರಮ ಕೂಪಕ್ಕೆ ಗ್ರಾಮ ಲೆಕ್ಕಾಧಿಕಾರಿ ಸಾಹೇಬ್‌ ಪಟೇಲ್‌ ಕುಟುಂಬದ ಶಾಪ ತಟ್ಟದೆ ಇರದು. ಆದರೆ, ಮೃತ ಅಧಿಕಾರಿ ಸಾವಿಗೆ ನ್ಯಾಯ ಸಿಗಬೇಕಾದರೆ ಜಿಲ್ಲಾಡಳಿತ ಈ ಅಕ್ರಮ ದಂಧೆಗೆ ಇತಿಶ್ರೀ ಹಾಡಲೇಬೇಕಿದೆ.

Advertisement

ಈಗಾಗಲೇ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಕೆಲ ಕಠಿಣ ನಿಯಮಗಳ ಜಾರಿಗೆ ಮುಂದಾಗಿರುವುದು ಸ್ವಾಗತಾರ್ಹ. ಅದರ ಜತೆಗೆ ಗ್ರಾಮ ಲೆಕ್ಕಾಧಿಕಾರಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಚಾಲಕ, ಮಾಲೀಕ ಸೇರಿದಂತೆ ನಾಲ್ವರ ಬಂಧನವಾಗಿದೆ. ಆದರೆ, ಇದು ಕೇವಲ ನೆಪ ಮಾತ್ರ. ಆದರೆ, ಈ ಕೃತ್ಯದ ಹಿಂದಿನ ಅಗೋಚರ ಶಕ್ತಿಗಳು ಕೂಡ ಬಯಲಾಗಬೇಕಿದೆ ಎಂಬುದು ಜಿಲ್ಲೆಯ ಜನರ ಒತ್ತಾಸೆ.

ಪ್ರಕರಣಕ್ಕೆ ರಾಜಕೀಯ ಲೇಪ: ಅಕ್ರಮ ಮರಳು ಪ್ರಕರಣ ರಾಜಕೀಯ ಸ್ವರೂಪ ಪಡೆಯಿತು. ಇದರ ಹಿಂದೆ ಜಿಲ್ಲೆಯ ಜನಪ್ರತಿನಿಧಿಗಳೇ ಇದ್ದಾರೆ ಎಂದು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕರೇ ನೇರವಾಗಿ ಆರೋಪಿಸಿದರು. ಬಿಜೆಪಿ ಮುಖಂಡರು ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ರಾಜ್ಯದಲ್ಲಿ ಮರಳು ಸುಲಭವಾಗಿ ಸಿಗುವವರೆಗೂ ಹೋರಾಟ
ಮಾಡುವುದಾಗಿ ಎಚ್ಚರಿಸಿದರು. 

ಕಟ್ಟುನಿಟ್ಟು ಕ್ರಮ: ಈಗ ಜಿಲ್ಲೆಯಲ್ಲಿ ಮರಳು ನೀತಿ ಬಲು ಕಟ್ಟುನಿಟ್ಟಾಗಿದೆ. ಒಂದೇ ವಾಹನ ಓಡಾಡುವುದು ಕಷ್ಟವಾಗಿದೆ. ಸ್ಟಾಕ್‌ ಯಾರ್ಡ್‌ಗಳ ಮೇಲೆ ದಾಳಿ ನಡೆಸಿದ್ದು, ನಿತ್ಯ ಒಂದಲ್ಲ ಒಂದು ಕಡೆ ವಾಹನಗಳನ್ನು ಸೀಜ್‌ ಮಾಡಲಾಗುತ್ತಿದೆ. ಎಲ್ಲ ಚೆಕ್‌ ಪೋಸ್ಟ್‌ಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಒಂದೇ ಒಂದು ಮರಳಿನ ವಾಹನ ಓಡಾಡದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಇನ್ನು ಕೃಷ್ಣ ನದಿ ಬಳಿಯ ಮರಳು ಬ್ಲಾಕ್‌ ಬಳಿ ಸಂಗ್ರಹಿಸಿದ್ದ ಅಕ್ರಮ ದಾಸ್ತಾನನ್ನು ಜಪ್ತಿ ಮಾಡಲಾಗಿದೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಅಲ್ಲದೇ, ಮೊಬೈಲ್‌ ಟೀಮ್‌ಗಳನ್ನು ಮಾಡಿದ್ದು, ಪೊಲೀಸರು ಜಿಲ್ಲಾದ್ಯಂತ ಸಂಚರಿಸುತ್ತಿದ್ದಾರೆ.

ಅಕ್ರಮ ಮರಳು ದಂಧೆ ಮಟ್ಟ ಹಾಕಲು ಈಗ ಕಾಲ ಕೂಡಿ ಬಂದಿದೆ. ಆದರೆ, ಅದು ನೆಪ ಮಾತ್ರಕ್ಕೆ ಆಗದೆ ಮತ್ತೆಂದೂ ಅದರ ಅಟ್ಟಹಾಸ ಮೆರೆಯದಂತೆ ಮಾಡಬೇಕಿದೆ. ಜನರು ಸರ್ಕಾರ, ಆಡಳಿತದ ಮೇಲಿನ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಂಡು ಹೋಗಬೇಕಿದೆ.

Advertisement

ಜಿಲ್ಲೆಯಲ್ಲಿ ಈಗ ಯಾವುದೇ ಮರಳು ಸಾಗಣೆ ನಡೆಯುತ್ತಿಲ್ಲ. ಜಿಲ್ಲಾಡಳಿತ ಕೆಲ ನಿಯಮಗಳನ್ನು ರೂಪಿಸಿ ಜಾರಿಗೆ ತರುತ್ತಿದೆ. ಅಲ್ಲದೇ, ಮೊಬೈಲ್‌ ತಂಡಗಳನ್ನು ರಚಿಸಿದ್ದು, ಈಗ ಜಿಲ್ಲಾದ್ಯಂತ ದಾಳಿ ನಡೆಯುತ್ತಿದೆ. ಎಲ್ಲಿಯೇ ಮರಳು ಅಕ್ರಮ ದಾಸ್ತಾನು, ಸಾಗಣೆ ಕಂಡು ಬಂದರೆ ಜಪ್ತಿ ಮಾಡಲಾಗುತ್ತಿದೆ. 
  ಡಿ.ಕಿಶೋರಬಾಬು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಯಚೂರು

ನಮ್ಮ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಮರಳು ಬ್ಲಾಕ್‌ ಇಲ್ಲ. ಆದರೆ, ಸಾಗಣೆ ನಡೆಯುತ್ತಿತ್ತು. ಈಗ ಮರಳು ಸಾಗಿಸಲು ಯಾವುದೇ ಪರವಾನಗಿ ನೀಡದ ಕಾರಣ ಅಂಥ ವಾಹನಗಳನ್ನು ವಶಕ್ಕೆ ಪಡೆಯಲು ಕಟ್ಟುನಿಟ್ಟಿನ ಸೂಚನೆ ಬಂದಿದೆ. ಈಚೆಗೆ ಯಾವುದೇ ವಾಹನಗಳು ಮರಳು ಸಾಗಿಸಿಲ್ಲ. 
 ಸೋಮಶೇಖರ, ಶಕ್ತಿನಗರ ಠಾಣೆ ಎಸ್‌ಐ

„ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next