ದಾವಣಗೆರೆ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಹಾಗೂ ಜಾತಿಗಣತಿ ವರದಿ ಬಹಿರಂಗಗೊಳಿಸಲು ಆಗ್ರಹಿಸಿ ಮಾದಿಗ ದಂಡೋರ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಮೂಲಕ ಶುಕ್ರವಾರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ ನೇತೃತ್ವದಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳಿ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪರನ್ನು ಭೇಟಿ ಮಾಡಿದ ಸಮಿತಿ ಮುಖಂಡರು ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಇದೆ.
ಈ ಸಮುದಾಯಕ್ಕೆ ಸಂವಿಧಾನಬದ್ಧವಾಗಿ ಸವಲತ್ತುಗಳುಸಿಗುತ್ತಿಲ್ಲ. ಸಮಾಜದ ಸ್ಥಿತಿ ಅತ್ಯಂತ ಹೀನವಾಗಿದೆ. ಒಳ ಮೀಸಲಾತಿ ಮೂಲಕ ಸಮಾಜದ ಅಭಿವೃದ್ಧಿಗೆ ಕ್ರಮ ವಹಿಸಬೇಕು ಎಂದು ನ್ಯಾ. ಸದಾಶಿವ ಆಯೋಗ ನೀಡಿದವರದಿಯನ್ನು ಜಾರಿ ಕುರಿತು ಸರ್ಕಾರ ಕ್ರಮ ವಹಿಸಬೇಕು ಎಂದು ಅವರು ಆಗ್ರಹಿಸಿದರು.
ಕಳೆದ 25 ವರ್ಷಗಳಿಂದ ಒಳ ಮೀಸಲಾತಿಗೆ ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ಸಮಾಜ ಪದೇ ಪದೇ ಹೋರಾಟಮಾಡುತ್ತಲೇ ಬಂದಿದೆ. ಬೃಹತ್ ಸಮಾವೇಶಗಳನ್ನೂ ಆಯೋಜಿಸಿದೆ. ಒಳ ಮೀಸಲಾತಿ ವರ್ಗೀಕರಣಕ್ಕೆ ತಕ್ಷಣ ಕ್ರಮ ವಹಿಸಬೇಕು ಎಂದು ಕೇಳಿಕೊಂಡಿದ್ದೇವೆ.
ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ಇನ್ನಾದರೂ ಕ್ರಮ ವಹಿಸಬೇಕು. ಹಾಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಆಯೋಗದ ವರದಿ ಆಂಗೀಕರಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು.
ಇಲ್ಲದಿದ್ದರೆ ಹೋರಾಟ ಕೈಗೊಳ್ಳಲಾಗುವುದು ಎಂದು ಮನವಿ ಮೂಲಕ ಸರ್ಕಾರಕ್ಕೆ ಎಚ್ಚರಿಸಲಾಯಿತು. ಸಮಿತಿಯ ಎಚ್. ಬಸವರಾಜ ಹುಣಸೆಕಟ್ಟೆ, ಹನುಮಂತಪ್ಪ,ಎನ್. ಕೆಂಚಪ್ಪ, ಮರಿಯಮ್ಮ, ಎಂ. ಆಂಜನೇಯ ಮನವಿ ಸಲ್ಲಿಸುವ ವೇಳೆ ಹಾಜರಿದ್ದರು ಎಂದು ಪ್ರಕಟಣೆ ತಿಳಿಸಿದೆ.