ಹೊಸದಿಲ್ಲಿ : ನ್ಯಾಯಾಲಯ ನಿಂದನೆಗಾಗಿ ಸುಪ್ರೀಂ ಕೋರ್ಟ್‌ನಿಂದ ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಕಲ್ಕತ್ತ ಹೈಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಸಿ ಎಸ್ ಕರ್ಣನ್, ನೇಪಾಲ ಅಥವಾ ಬಾಂಗ್ಲಾದೇಶಕ್ಕೆ ಎಸ್ಕೇಪ್ ಆಗಿರಬಹುದು. ಅವರು ರಿಲೀಫ್ ಗಾಗಿ ರಾಷ್ಟ್ರಪತಿಯನ್ನು ಸಂಪರ್ಕಿಸುವ ಸಿದ್ಧತೆ ನಡೆಸುತ್ತಿರಬಹುದು ಎಂದು ಅವರ ಕಾನೂನು ಸಲಹೆಗಾರ ಇಂದು ಗುರುವಾರ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಇದು ದೇಶದ ಉನ್ನತ ನ್ಯಾಯಾಂಗದಲ್ಲಿ ಏರ್ಪಟ್ಟಿರುವ ಸಂಘರ್ಷಕ್ಕೆ ದೊರಕಿರುವ ಹೊಸ ತಿರುವು ಎಂದು ತಿಳಿಯಲಾಗಿದೆ.
ಜಸ್ಟಿಸ್ ಕರ್ಣನ್ ಅವರನ್ನು ಬಂಧಿಸಿ ಜೈಲಿಗಟ್ಟಲು ಪೊಲೀಸರು ದೇಶದ ವಿವಿಧ ನಗರಗಳಲ್ಲಿ ಭಾರೀ ಹುಡುಕಾಟ ನಡೆಸಿದರಾದರೂ ಕರ್ಣನ್ ಅವರನ್ನು ಪತ್ತೆ ಹಚ್ಚಲು ಅವರಿಗೆ ಸಾಧ್ಯವಾಗಲಿಲ್ಲ.
“ಕುಲಭೂಷಣ್ ಜಾದವ್ ಕೇಸ್‌ನಲ್ಲಿ ಮಾಡಿರುವ ಹಾಗೆ ರಾಷ್ಟ್ರಪತಿಗಳು ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಉಲ್ಲೇಖೀಸಬೇಕೆಂದು ನಾವು ಬಯಸುತ್ತೇವೆ; ನಾವು ಮುಂದಿನ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದೇವೆ; ಆದುದರಿಂದ ಆತ (ಕರ್ಣನ್) ಅಲ್ಲಿಯ ವರೆಗೆ ಅಡಗಿಕೊಂಡಿರುವ ಅಗತ್ಯವಿದೆ’ ಎಂದು ಮದ್ರಾಸ್ ಹೈಕೋರ್ಟಿನ ವಕೀಲರಾಗಿರುವ ಪೀಟರ್ ರಮೇಶ್ ಕುಮಾರ್ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು.
ಈ ನಡುವೆ ಕರ್ಣನ್ ಅವರ ಕಾನೂನು ಸಲಹಾ ತಂಡವು ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿ ಕರ್ಣನ್ ಅವರಿಗಾಗಿರುವ ಶಿಕ್ಷೆ ಮತ್ತು ಬಂಧನದ ಆದೇಶವನ್ನು ಹಿಂಪಡೆಯುವಂತೆ ಕೇಳಿಕೊಂಡಿದೆ. ಜಸ್ಟಿಸ್ ಕರ್ಣನ್ ಅವರು “ನಾನೋರ್ವ ದಲಿತನಾಗಿರುವ ಕಾರಣಕ್ಕೆ ನನ್ನನ್ನು ಪ್ರತ್ಯೇಕಿಸಿ ಅನುಚಿತವಾಗಿ ನಡೆಸಿಕೊಳ್ಳಲಾಗುತ್ತಿದೆ; ನಿರಂತರ ಮಾನಸಿಕ ಹಿಂಸೆ, ಕಿರುಕುಳ ನೀಡಲಾಗುತ್ತಿದೆ’ ಎಂದು ಉನ್ನತ ನ್ಯಾಯಾಂಗದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಾ ಬಂದಿದ್ದಾರೆ.