ಬೆಂಗಳೂರು: “ಜನ ತಮಿಳುನಾಡಿಗೆ ಹೋದರೆ ತಮಿಳು ಕಲಿಯುತ್ತಾರೆ, ಕೇರಳಕ್ಕೆ ಹೋದರೆ ಮಲಯಾಳಂ ಕಲಿಯುತ್ತಾರೆ. ಆದರೆ, ಕರ್ನಾಟಕಕ್ಕೆ ಬಂದು ದಶಕಗಳ ಕಾಲ ನೆಲೆಸಿದ್ದರೂ ಕನ್ನಡ ಮಾತ್ರ ಕಲಿಯುವುದಿಲ್ಲ,’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಅವರು ಹೀಗೆ ಬೇಸರ ವ್ಯಕ್ತಪಡಿಸಿದ್ದು, ಕಳೆದ 31 ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿದ್ದರೂ “ಕನ್ನಡ ಗೊತ್ತಿಲ್ಲ’ ಎಂದ ಅರ್ಜಿದಾರ ಮಹಿಳೆಯ ಮಾತು ಕೇಳಿ. “ಮೂರು ದಶಕದಿಂದ ಇಲ್ಲೇ ನೆಲೆಸಿದ್ದೀರ. ನೀವು ಹುಟ್ಟಿ ಬೆಳೆದಿರುವುದೂ ಇಲ್ಲೇ. ಆದರೂ ಕನ್ನಡ ಕಲಿತಿಲ್ಲವಾ. ಆದಷ್ಟು ಬೇಗ ಕನ್ನಡ ಕಲಿಯಿರಿ,’ ಎಂದು ನ್ಯಾಯಮೂರ್ತಿಗಳು ಮಹಿಳೆಗೆ ಸಲಹೆ ನೀಡಿದರು.
ಪತಿ ಮತ್ತು ಆತನ ಏಳು ಸಂಬಂಧಿಕರು ವರದಕ್ಷಿಣೆ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಬ್ಯಾಟರಾಯನಪುರ ನಿವಾಸಿ ಸಬಿಹಾಬಾನು ಎಂಬುವವರು 2017ರ ಮೇ 8ರಂದು ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ಅಧೀನ ನ್ಯಾಯಾಲಯದಲ್ಲಿ ಬಾಕಿ ಇತ್ತು.
ಈ ಹಿನ್ನೆಲೆಯಲ್ಲಿ ಸಬಿಹಾಬಾನು ಅವರ ಪತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಎಫ್ಐಆರ್ ರದ್ದು ಪಡಿಸಲು ಕೋರಿದ್ದರು. ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ಶುಕ್ರವಾರ ಅರ್ಜಿ ವಿಚಾರಣೆಗೆ ಬಂದಿತ್ತು. ವಿಚಾರಣೆ ವೇಳೆ ಸಬಿಹಾಬಾನು ಪರ ವಕೀಲ ಬೈರೇಶ್ ಮತ್ತು ಆಕೆಯ ಪತಿ ಪರ ವಕೀಲ ಲಕ್ಷ್ಮೀಕಾಂತ್ ಜಂಟಿಯಾಗಿ ಪ್ರಮಾಣ ಪತ್ರ ಸಲ್ಲಿಸಿ, ದಂಪತಿ ನಡುವಿನ ಕಲಹ ಬಗೆಹರಿದಿದ್ದು, ಒಟ್ಟಿಗೆ ಜೀವನ ನಡೆಸುತ್ತಿದ್ದಾರೆ.
ಆದ್ದರಿಂದ ದೂರುದಾರರಾದ ಸಬಿಹಾಬಾನು ದೂರು ವಾಪಸ್ ಪಡೆಯಲು ತೀರ್ಮಾನಿಸಿದ್ದಾರೆ. ಹೀಗಾಗಿ ಪತಿ ವಿರುದ್ಧದ ಎಫ್ಐಆರ್ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಮನವಿ ಮಾಡಿದರು. ಪ್ರಮಾಣಪತ್ರ ಪರಿಶೀಲಿಸಿದ ನ್ಯಾಯಮೂರ್ತಿ ಅರವಿಂದ ಕುಮಾರ್, ಕೋರ್ಟ್‌ನಲ್ಲಿ ಹಾಜರಿದ್ದ ಸಬಿಹಾಬಾನು ಅವರನ್ನು ಕರೆದು, ಪತಿ ಹಾಗೂ ಸಂಬಂಧಿಕರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯುತ್ತೀರಾ? ಎಂದು ಕನ್ನಡದಲ್ಲಿಯೇ ಪ್ರಶ್ನಿಸಿದರು.
ಆದರೆ, ಆಕೆ ಉತ್ತರಿಸದೆ ಮೌನವಾಗಿದ್ದರು. ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯೇ? ಎಂದು ನ್ಯಾಯಮೂರ್ತಿಗಳು ಹಿಂದಿಯಲ್ಲಿ ಮತ್ತೆ ಕೇಳಿದರು. ಆಗಲೂ ಆಕೆ ಮೌನವಾಗಿದ್ದರು.ನಿಮಗೆ ಯಾವ ಭಾಷೆ ಬರುತ್ತದೆ ಎಂದು ಮತ್ತೂಮ್ಮೆ ಪ್ರಶ್ನಿಸಿದಾಗ ಉರ್ದು ಬರುತ್ತದೆಯೆಂದು ಸಬಿಹಾಬಾನು ಉತ್ತರಿಸಿದರು.
ನ್ಯಾಯಮೂರ್ತಿಗಳು ಕೂಡಲೇ ನಿಮ್ಮ ಊರು ಯಾವುದು? ಎಂದು ಹಿಂದಿಯಲ್ಲಿ ಪ್ರಶ್ನಿಸಿದರು. ಕಳೆದ 31 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ. ಹುಟ್ಟಿ ಬೆಳೆದದ್ದು ಇಲ್ಲಿಯೇ ಎಂದು ಸಬಿಹಾಬಾನು ಉತ್ತರಿಸಿದಾಗ ನ್ಯಾ.ಅರವಿಂದಕುಮಾರ್ ಬೇಸರ ವ್ಯಕ್ತಪಡಿಸಿದರು.