Advertisement

ಮೋದಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ

09:27 AM Mar 29, 2019 | Team Udayavani |

ಹೊಸದಿಲ್ಲಿ: ಡಿಆರ್‌ಡಿಒ ಸಾಧನೆ ವಿವರಿಸಲು ದೇಶವನ್ನುದ್ದೇಶಿಸಿ ಮಾತನಾಡಿದಾಗ ಪ್ರಧಾನಿ ನರೇಂದ್ರ ಮೋದಿಯ ಮುಖದಲ್ಲಿ ಅಧಿಕಾರ ಕಳೆದುಕೊಳ್ಳುವ ಭೀತಿ ಎದ್ದು ಕಾಣುತ್ತಿತ್ತು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಇಂದಿರಾ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಕಾಂಗ್ರೆಸ್‌ನ ಒಬಿಸಿ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ಬಡವರಿಗೆ ಕಾಂಗ್ರೆಸ್‌ನಿಂದ ನ್ಯಾಯ ಸಿಗುತ್ತದೆ ಎಂಬುದು ಮೋದಿಗೆ ಮನವರಿಕೆಯಾಗಿದೆ ಎಂದಿದ್ದಾರೆ.

Advertisement

ಒಂದು ಸಾಮಾನ್ಯ ಘೋಷಣೆಗೆ ದೇಶವನ್ನು 45 ನಿಮಿಷ ಕಾಯಿಸಿದ್ದಾರೆ. ಅವರ ಮುಖ ನೋಡಿದ್ದೀರಾ? ಕಾಂಗ್ರೆಸ್‌ ಇನ್ನು ನ್ಯಾಯ ಒದಗಿಸಬಲ್ಲದು ಎಂಬುದು ಅವರಿಗೆ ಮನವರಿಕೆಯಾಗಿದೆ. ತಾನು ಅಧಿಕಾರ ತ್ಯಜಿಸುವ ಸಮಯ ಬಂದಿದೆ ಎಂಬ ಹೆದರಿಕೆ ಹುಟ್ಟಿದೆ ಎಂದು ರಾಹುಲ್‌ ಹೇಳಿದ್ದಾರೆ. ವರ್ಷಕ್ಕೆ 72 ಸಾವಿರ ರೂ. ನೀಡುವ ಕನಿಷ್ಠ ಆದಾಯ ಯೋಜನೆ ಪ್ರಸ್ತಾಪಿಸಿದ ರಾಹುಲ್‌, ಬಡತನದಿಂದ 5 ಕೋಟಿ ಕುಟುಂಬಗಳನ್ನು ಹೊರತರುವ ಈ ಯೋಜನೆ ನ್ಯಾಯ ಒದಗಿಸುತ್ತದೆ. ಇದು ಮೋದಿ ಯೋಜನೆಗಳ ರೀತಿ ಸುಳ್ಳಲ್ಲ ಎಂದರು. ಅಲ್ಲದೆ ಒಬಿಸಿ ಸಮುದಾಯಕ್ಕೆ ಇನ್ನಷ್ಟು ಪ್ರಾತಿನಿಧ್ಯ ನೀಡಲು ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಟಿಕೆಟ್‌ ನೀಡಲಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್‌ ಈಗಾಗಲೇ ಇಬ್ಬರು ಮುಖ್ಯಮಂತ್ರಿಗಳನ್ನು ಈ ಸಮುದಾಯದಿಂದ ನೇಮಿಸಿದೆ. ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಇನ್ನಷ್ಟು ಪ್ರಾತಿನಿಧ್ಯವನ್ನು ಈ ಸಮುದಾಯಕ್ಕೆ ಒದಗಿಸಲಾಗುತ್ತದೆ. ನಾನು ಮೋದಿಯಂತೆ ಸುಳ್ಳು ಹೇಳುವುದಿಲ್ಲ ಎಂದಿದ್ದಾರೆ. ಅಲ್ಲದೆ ವಿಶ್ವ ರಂಗ ದಿನದ ಪ್ರಯುಕ್ತ “ನಾಟಕ ದಿನದ ಶುಭಾಶಯ’ ಎಂದೂ ಮೋದಿಗೆ ಕಾಲೆಳೆದಿದ್ದಾರೆ.

ಪಕ್ಷ ಬಯಸಿದರೆ ಸ್ಪರ್ಧೆ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಪಕ್ಷ ಬಯಸಿದರೆ ನಾನು ಸ್ಪರ್ಧಿಸುತ್ತೇನೆ. ಈ ಬಗ್ಗೆ ಇನ್ನೂ ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಹೇಳಿದ್ದಾರೆ. ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಯಾಕೆ ಸ್ಪರ್ಧಿಸಬಾರದು? ನೀವೂ ಕೂಡ ಸ್ಪರ್ಧಿಸಬಹುದು ಎಂದಿದ್ದಾರೆ. ಬುಧವಾರ ಅಮೇಥಿಗೆ ಆಗಮಿಸಿರುವ ಪ್ರಿಯಾಂಕಾ, ರಾಹುಲ್‌ ಪರ ಪ್ರಚಾರ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಗುರುವಾರ ರಾಯ್‌ಬರೇಲಿಗೆ ತೆರಳಿ ಅಲ್ಲಿ ತಾಯಿ ಸೋನಿಯಾ ಪರವೂ ಪ್ರಚಾರ ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ಕಾಂಗ್ರೆಸ್‌ ಸೇರಿದ ರಂಗೀಲಾ ನಟಿ
ರಂಗೀಲಾ ಸಿನಿಮಾ ಖ್ಯಾತಿಯ ನಟಿ ಊರ್ಮಿಳಾ ಮಾತೋಂಡ್ಕರ್‌ ಬುಧವಾರ ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಸಮ್ಮುಖ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬಳಿಕ ಪಕ್ಷದ ವಕ್ತಾರ ರಣದೀಪ್‌ ಸುಜೇìವಾಲ ಜೊತೆ ಸುದ್ದಿಗೋಷ್ಠಿ ನಡೆಸಿದ ಊರ್ಮಿಳಾ, “ಕಾಂಗ್ರೆಸ್‌ ಸಿದ್ಧಾಂತವನ್ನು ಇಷ್ಟಪಟ್ಟು ನಾನು ಕಾಂಗ್ರೆಸ್‌ ಸೇರ್ಪಡೆ ಆಗಿದ್ದೇನೆ. ಚುನಾವಣೆಗೋಸ್ಕರ ನಾನು ಪಕ್ಷ ಸೇರುತ್ತಿಲ್ಲ. ನನ್ನ ಕುಟುಂಬದ ಸದಸ್ಯರು ನೆಹರೂ, ಪಟೇಲ್‌ರ ತತ್ವಾದರ್ಶಗಳನ್ನು ಅನುಸರಿಸುತ್ತಿದ್ದರು. ನಾನು ಪಕ್ಷಕ್ಕಾಗಿ ದುಡಿಯುತ್ತೇನೆ’ ಎಂದಿದ್ದಾರೆ. ಪಕ್ಷದ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ಕೆಲಸದಲ್ಲಿ ಊರ್ಮಿಳಾ ಜತೆಗೆ ಇರುತ್ತಾರೆ ಎಂದು ಸುಜೇವಾಲ ಹೇಳಿದ್ದಾರೆ.

ನೋಟು ಅಮಾನ್ಯ ಬಗ್ಗೆ ತನಿಖೆ
ಕೋಲ್ಕತಾ: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ಪ್ರಣಾಳಿಕೆಯನ್ನು ಬುಧವಾರ ಬಿಡುಗಡೆ ಮಾಡಿದ್ದಾರೆ. ವಿಪಕ್ಷಗಳ ಒಕ್ಕೂಟದ ಸರ್ಕಾರ ರಚನೆಯಾದರೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ನೋಟು ಅಮಾನ್ಯದ ಬಗ್ಗೆ ತನಿಖೆ ಮತ್ತು ಹಿಂದೆ ಅಸ್ತಿತ್ವದಲ್ಲಿದ್ದ ಯೋಜನಾ ಆಯೋಗ ಪುನಃಸ್ಥಾಪಿಸುವುದಾಗಿ ವಾಗ್ಧಾನ ಮಾಡಿದ್ದಾರೆ. ಜಿಎಸ್‌ಟಿ ನೀತಿಯನ್ನು ಪರಿಶೀಲಿಸಿ ಜಾರಿ ಮಾಡುವುದಾಗಿಯೂ ಹೇಳಿದ್ದಾರೆ. 100 ಕೆಲಸದ ದಿನಗಳನ್ನು 200ಕ್ಕೆ ಏರಿಸಿ, ಅದಕ್ಕೆ ಸಂಬಂಧಿಸಿದ ವೇತನವನ್ನೂ ಹೆಚ್ಚಿಸುವ ಭರವಸೆ ನೀಡಿದ್ದಾರೆ.

Advertisement

ರೈಲ್ವೆ ಇಲಾಖೆಗೆ ನೋಟಿಸ್‌
ಹೊಸದಿಲ್ಲಿ: ರೈಲ್ವೆ ಟಿಕೆಟ್‌ಗಳು ಹಾಗೂ ಬೋರ್ಡಿಂಗ್‌
ಪಾಸ್‌ಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ಚಿತ್ರವನ್ನು ಪ್ರಕಟಿಸಿದ್ದಕ್ಕಾಗಿ ರೈಲ್ವೆ ಇಲಾಖೆ ಮತ್ತು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಚು. ಆಯೋಗ ನೋಟಿಸ್‌ ನೀಡಿದೆ. ಟಿಕೆಟ್‌ಗಳಲ್ಲಿ ಮೋದಿ ಫೋಟೋ ಹಾಕಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ ದೂರು ನೀಡಿತ್ತು.

ಆದಾಯ ಯೋಜನೆ ಹಂತಗಳಲ್ಲಿ ಜಾರಿ
ಚೆನ್ನೈ: ಕಾಂಗ್ರೆಸ್‌ ಇತ್ತೀಚೆಗೆ ಘೋಷಿಸಿರುವ ಕನಿಷ್ಠ ಆದಾಯ ಸ್ಕೀಮ್‌ ಅನ್ನು ಹಂತ ಹಂತಗಳಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಪಿ.ಚಿದಂಬರಂ ಅವರು ಹೇಳಿದ್ದಾರೆ.
ಚೆನ್ನೈನಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು,
ಹಂತ ಹಂತಗಳಲ್ಲಿ ಐದು ಕೋಟಿ ಫ‌ಲಾನುಭವಿ ಕುಟುಂಬಗಳಿಗೆ ಈ ಸೌಲಭ್ಯವನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.

ಈ ಯೋಜನೆಯ ರೂಪುರೇಷೆ ತಯಾರಿಸಲು ಹಲವು ಆರ್ಥಿಕ ತಜ್ಞರು ಹಾಗೂ ಪರಿಣತರನ್ನು ಸಂಪರ್ಕಿಸಲಾಗಿದೆ. ಈ ಯೋಜನೆಯನ್ನು ಜಾರಿಗೊಳಿಸಲು ಸಾಧ್ಯವಿದೆ ಎಂದು ಆರ್‌ಬಿಐ ಮಾಜಿ ಗವರ್ನರ್‌ ಹೇಳಿದ್ದಾರೆ. ಇದು ಜಿಡಿಪಿಯ ಶೇ. 2 ರಷ್ಟನ್ನು ಮೀರುವುದಿಲ್ಲ . ಜಿಡಿಪಿಯ ಶೇ. 1.8 ರಷ್ಟು ಆಗಿರುತ್ತದೆ. ಮೊದಲು ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು. ನಂತರ ಪೂರ್ಣ ಪ್ರಮಾಣದಲ್ಲಿ ಅಳವಡಿಸಬೇಕಿದೆ. ಇದಕ್ಕಾಗಿ ಪರಿಣಿತರ ಸಮಿತಿಯನ್ನು ರಚಿಸಲಾಗುತ್ತದೆ. ಇದು ಪ್ರತಿ ಹಂತದಲ್ಲೂ ಸ್ಕೀಮ್‌ ಅನ್ನು ರೂಪಿಸುತ್ತದೆ.ಐದು ಕೋಟಿ ಬಡ ಕುಟುಂಬಗಳನ್ನು ಗುರುತಿಸಲು ಸೂಕ್ತ ಡೇಟಾ ಇದೆ. ಯುಪಿಎ ಸರ್ಕಾರವು 2009ರಲ್ಲಿ ನರೇಗಾ ಜಾರಿಗೊಳಿಸಿದಾಗ ಇದು ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಿಲ್ಲ ಎಂದು ವಿತ್ತ ಸಚಿವ ಅರುಣ್‌ ಜೇಟ್ಲಿ ಹೇಳಿದ್ದರು ಎಂದೂ ಚಿದಂಬರಂ ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next