ಚಾಮರಾಜನಗರ: ಅಂಗವಿಕಲರು, ಶೋಷಿತ ವರ್ಗದವರು, ಮಹಿಳೆಯರು, ಬಡವರು ಸೇರಿದಂತೆ ಅನ್ಯಾಯಕ್ಕೊಳಗಾದ ಜನರು ಆಸ್ತಿ ಸಂಬಂಧ ವಂಚನೆಗೊಳಗಾದರೆ ಕಾನೂನು ಸೇವಾ ಪ್ರಾಧಿಕಾರವನ್ನು ನೇರವಾಗಿ ಸಂಪರ್ಕಿಸಿ ನ್ಯಾಯ ಪಡೆಯಬಹುದು ಎಂದು ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ ಜಿ. ಬಸವರಾಜ ಸಲಹೆ ನೀಡಿದರು.
ನಗರದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕಿಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮತ್ತು ಮಾರ್ಗದರ್ಶಿಸೇವಾ ಸಂಸ್ಥೆ ವತಿಯಿಂದ ಸೇವಾ ಭಾರತಿ ಶಾಲೆಯಲ್ಲಿ ನಡೆದ ಅಂಗವಿಕಲ ಮಕ್ಕಳ ಹಕ್ಕುಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲ ಮಕ್ಕಳ ಹಕ್ಕುಗಳ ಬಗ್ಗೆ ಕಾರ್ಯಾಗಾರ ನಡೆಸುತ್ತಿರುವುದು ಶ್ಲಾಘನೀಯ. ಸಂವಿಧಾನ ಬಂದು 68ವರ್ಷಗಳಾದರೂ ಸಂವಿಧಾನದ ಉದ್ದೇಶಗಳು ಸಂಪೂರ್ಣವಾಗಿ ಈಡೇರಿಲ್ಲ. ಜಿಲ್ಲೆಯ ಅರಣ್ಯದಂಚಿನ ಗ್ರಾಮಗಳ ಜನರಿಗೆ ಸರ್ಕಾರದ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ದೊರೆತಿಲ್ಲ.
ಅಲ್ಲಿನ ಜನರು ಈಗಲೂ ಆದಿವಾಸಿಗಳಂತೆಯೇ ಜೀವನ ನಡೆಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು. ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದು ಅವರಿಗೆ ಸರ್ಕಾರದ ಸೌಲಭ್ಯಗಳನ್ನು ತಿಳಿಸಿ ಕೊಡಿಸುವಂತಹ ಕೆಲಸಗಳನ್ನು ಮಾಡಬೇಕಿದೆ. ಎಲ್ಲವನ್ನು ಸರ್ಕಾರವೇ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜೆ. ವಿಶಾಲಾಕ್ಷಿ ಮಾತನಾಡಿ, ಅಂಗವಿಕಲರ ಮಕ್ಕಳ ಅಭಿವೃದ್ಧಿಗೆ ಪ್ರಮುಖವಾಗಿ ಪೋಷಕರ ಪಾತ್ರ ಬಹಳಮುಖ್ಯ, ಅಂಗವೈಕಲ್ಯವಿರುವ ಮಕ್ಕಳನ್ನು ಆಟವಾಡಲು ಬಿಡಬೇಕು. ಇದರಿಂದ ಅಂತಹ ಮಕ್ಕಳ ಬುದ್ಧಿ ಚುರುಕಾಗುತ್ತದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಹದೇವಪ್ಪ, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ದೊಡ್ಡಪ್ಪ ಎನ್.ಮೂಲಿಮನಿ, ಸೇವಾಭಾರತಿ ಸಂಸ್ಥೆಯ ಎಂ.ಪಿ. ಮಂಜುನಾಥ್, ಸಂಸ್ಥೆಯ ವೀರೇಂದ್ರಪ್ರಸಾದ್, ನಾಗರಾಜು, ಲೀನಾಕುಮಾರಿ, ವಿದ್ಯಾರಾಣಿ, ರಂಜಿತ ಮತ್ತಿತರರು ಇದ್ದರು.