ಬೆಳ್ತಂಗಡಿ, ಬಂಟ್ವಾಳ: ಶರತ್ ಹತ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹ
ಬಂಟ್ವಾಳ: ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆಯಾಗಿ ಒಂದು ತಿಂಗಳು ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಬಂಧನಕ್ಕೆ ಪೊಲೀಸರು ಹಿಂದೇಟು ಹಾಕಲು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಸಹಿತ ರಾಜ್ಯ ಸರಕಾರದ ಒತ್ತಡವೇ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಸಹ ವಕ್ತಾರೆ ಸುಲೋಚನಾ ಜಿ.ಕೆ.ಭಟ್ ಆರೋಪಿಸಿದ್ದಾರೆ. ಆ. 8ರಂದು ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಹಿಂದೂ ಹಿತರಕ್ಷಣಾ ಸಮಿತಿ ಮತ್ತಿತರ ಸಂಘಟನೆಗಳ ಆಶ್ರಯದಲ್ಲಿ ದಿನವಿಡೀ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕೇವಲ ಓಟಿನ ಆಸೆ ಮತ್ತು ತುಷ್ಟೀಕರಣ ನೀತಿಯಿಂದ ಬಿಜೆಪಿ, ಸಂಘ ಪರಿವಾರವನ್ನು ಮಣಿಸಲು ಹಿಂದೂಗಳ ಹತ್ಯೆಗೆ ಮುಂದಾಗಿದೆ. ಇಂತಹ ಹಿಂದೂ ವಿರೋಧಿ, ಲಜ್ಜೆಗೆಟ್ಟ ಸರಕಾರವನ್ನು ರಾಜ್ಯದ ಜನತೆ ಒಟ್ಟಾಗಿ ಮನೆಗೆ ಕಳುಹಿಸಬೇಕು ಎಂದರು. ಕಲ್ಲಡ್ಕದಲ್ಲಿ ಘರ್ಷಣೆ ನಡೆದ ಬಳಿಕ ಮೆಲ್ಕಾರ್, ತುಂಬೆ ಮತ್ತು ಕಣ್ಣೂರು ಮತ್ತಿತರ ಪ್ರದೇಶಗಳಲ್ಲಿ ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಹತ್ಯಾ ಯತ್ನ ನಡೆದಿದೆ. ಅದರ ಆರೋಪಿಗಳನ್ನು ಕೂಡ ಬಂಧಿಸಿಲ್ಲ ಎಂದವರು ಹೇಳಿದರು.
ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾೖಕ್, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ, ಹಿಂದೂ ಸಂಘಟನೆ ಮುಖಂಡ ಜಿತೇಂದ್ರ ಕೊಟ್ಟಾರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ ಮತ್ತಿತರರು ಮಾತನಾಡಿ, ಎಸ್‌ಡಿಪಿಐ ಮುಖಂಡ ಆಶ್ರಫ್ ಕಲಾಯಿ ಹತ್ಯೆ ಆರೋಪಿಗಳನ್ನು ಬಂಧಿಸಲು ಮುತುವರ್ಜಿ ವಹಿಸಿದ ಪೊಲೀಸರಿಗೆ ಶರತ್ ಹತ್ಯೆ ಆರೋಪಿಗಳನ್ನು ಬಂಧಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಎಸ್‌ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ಬಂಧನದಲ್ಲಿ ಭಾರೀ ಪ್ರಮಾಣದ ಹಣಕಾಸು ವ್ಯವಹಾರ ನಡೆದಿದ್ದು, ಈ ಷಡ್ಯಂತ್ರದ ಹಿಂದೆ ಕಾಂಗ್ರೆಸಿನ ‘ಮರಳು ಮಾಫಿಯಾ’ ಅಡಗಿರುವುದು ಪೊಲೀಸರಿಗೆ ಗೊತ್ತಿದ್ದರೂ ಕೂಡಾ ಸುಮ್ಮನಾಗಿದ್ದಾರೆ ಎಂದು ಟೀಕಿಸಿದರು.
ಆರ್‌ಎಸ್‌ಎಸ್ ವಿಭಾಗ ಕಾರ್ಯಕಾರಿ ಸದಸ್ಯ ಪ್ರವೀಣ್ ಸರಳಾಯ, ಮೃತ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ, ಬಿಜೆಪಿ ಕ್ಷೇತ್ರಾಧ್ಯಕ್ಷ ಬಿ.ದೇವದಾಸ ಶೆಟ್ಟಿ, ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ಸರಪಾಡಿ ಅಶೋಕ ಶೆಟ್ಟಿ, ಪ್ರವೀಣ ತುಂಬೆ, ಸುಂದರ ಭಂಡಾರಿ, ರಾಧಾಕೃಷ್ಣ ಅಡ್ಯಂತಾಯ ಮತ್ತಿತರರು ಮಾತನಾಡಿದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಚಿವ ಬಿ.ರಮಾನಾಥ ರೈಅವರಿಗೆ ಧಿಕ್ಕಾರ ಕೂಗಿದ ಪ್ರತಿಭಟನಕಾರರು, ಪಿಎಫ್‌ಐ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿದರು. ಜಿ.ಪಂ.ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ಗ್ರಾ.ಪಂ. ಅಧ್ಯಕ್ಷರಾದ ಯಶೋಧರ ಕರ್ಬೆಟ್ಟು, ಲಕ್ಷ್ಮೀ ಗೋಪಾಲ ಆಚಾರ್ಯ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಪ್ರಮುಖರಾದ ಆನಂದ ಎ. ಶಂಭೂರು, ರಮಾನಾಥ ರಾಯಿ, ಚರಣ್ ಜುಮಾದಿಗುಡ್ಡೆ, ವಜ್ರನಾಥ ಕಲ್ಲಡ್ಕ, ಸಂತೋಷ್ ಕುಮಾರ್ ಬೆಟ್ಟು, ಗಣೇಶ ರೈ, ಪ್ರಕಾಶ ಅಂಚನ್, ಪುರುಷೋತ್ತಮ ಸಾಲ್ಯಾನ್, ಕಿಶೋರ್ ಶೆಟ್ಟಿ, ಸೀತಾರಾಮ ಮತ್ತಿತರರು ಉಪಸ್ಥಿತರಿದ್ದರು.
ಪುತ್ತೂರು, ಸುಳ್ಯದಲ್ಲಿಯೂ ಉಪವಾಸ ಸತ್ಯಾಗ್ರಹ
ಶರತ್ ಮಡಿವಾಳ ಹತ್ಯೆ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಪುತ್ತೂರು ಮಿನಿ ವಿಧಾನಸೌಧದ ಮುಂಭಾಗ ಹಿಂದೂ ಹಿತರಕ್ಷಣಾ ಸಮಿತಿ ಮಂಗಳವಾರ ಉಪವಾಸ ಸತ್ಯಾಗ್ರಹ ಚಳವಳಿ ನಡೆಸಿತು.
ಶಾಸಕಿ ಭೇಟಿ
ಅಂಬೇಡ್ಕರ್ ತತ್ವ ರಕ್ಷಣಾ ವೇದಿಕೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹಿಂದಿರುಗುವ ವೇಳೆ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂ ಹಿತರಕ್ಷಣಾ ಸಮಿತಿಯ ಬಳಿ ಶಾಸಕಿ ತೆರಳಿ ಮಾತನಾಡಿದರು. ಇದರ ಬಗ್ಗೆ ನಿಷ್ಪಕ್ಷಪಾತ ತನಿಖೆಯನ್ನು ರಾಜ್ಯ ಸರಕಾರ ನಡೆಸಲಿದೆ ಎಂದು ಭರವಸೆ ನೀಡಿದರು.
ನಿದ್ದೆಯಲ್ಲಿರುವ ಸರಕಾರ
ಸುಳ್ಯದ ತಾಲೂಕು ಕಚೇರಿ ಎದುರು ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆ, ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಮಂಗಳವಾರ ನಡೆದ ಉಪವಾಸ ಸತ್ಯಾಗ್ರಹನನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು, ಸರಕಾರಕ್ಕೆ ಕಣ್ಣು, ಕಿವಿ, ಮೂಗು ಯಾವುದೂ ಇಲ್ಲ. ಅಷ್ಟು ಮಾತ್ರವಲ್ಲ ಹೃದಯವೂ ಇಲ್ಲ ಎಂದು ಈಗ ಸಾಬೀತಾಗಿದೆ. ರಾಜ್ಯದ ಎಲ್ಲೆಡೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಯ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಸಿದ್ದರಾಮಯ್ಯ ಸರಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷವಾದರೂ ಇನ್ನೂ ನಿದ್ದೆಯಿಂದ ಎದ್ದಿಲ್ಲ ಎಂದರು.