Advertisement

ಖಾಸಗಿ ಪ್ರತಿಷ್ಠಾನಗಳಿಂದ ಅರ್ಹ ಲೇಖಕರಿಗೆ ನ್ಯಾಯ: ಎಚ್ಚೆಸ್‌ವಿ

12:52 PM Sep 25, 2017 | Team Udayavani |

ಬೆಂಗಳೂರು: ಖಾಸಗಿ ಪ್ರತಿಷ್ಠಾನಗಳಿಂದ ಮಾತ್ರ ಲೇಖಕರಿಗೆ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ ಎಂದು ಹಿರಿಯ ಕವಿ ಎಚ್‌.ಎಸ್‌.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಭಾನುವಾರ ಕನ್ನಡ ಜನಶಕ್ತಿ ಕೇಂದ್ರ ಮತ್ತು ಡಾ.ನರಹಳ್ಳಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ನರಹಳ್ಳಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.

Advertisement

“ಸರ್ಕಾರದ ಸಾಂಸ್ಥಿಕ ಪ್ರತಿಷ್ಠಾನಗಳಿಗೆ ನಿರ್ದಿಷ್ಟ ಜವಾಬ್ದಾರಿ, ಹೊಣೆಗಳಿವೆ. ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲವರಿಗೆ ಅನ್ಯಾಯವಾಗುತ್ತದೆ. ಲೇಖಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಜಾತಿ, ಧರ್ಮ, ವರ್ಗ, ಪ್ರಾಂತ್ಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ.

ಈ ಸಂದರ್ಭದಲ್ಲಿ ಒಂದೇ ವರ್ಗದಲ್ಲಿ ಇಬ್ಬರು ಪ್ರತಿಭಾವಂತ ಲೇಖಕರಿದ್ದರೆ ಅವರಲ್ಲಿ ಒಬ್ಬರಿಗೆ ಅನ್ಯಾಯ ಖಚಿತ. ಇಂತಹ ಕಾರಣಗಳಿಂದ ಎಂ.ಆರ್‌.ದತ್ತಾತ್ರಿ ಅವರಂತಹ ಪ್ರತಿಭಾವಂತ ಲೇಖಕರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿಭಾನ್ವಿತರಿಗೆ ನ್ಯಾಯ ಒದಗಿಸುವಲ್ಲಿ ಖಾಸಗಿ ಪ್ರತಿಷ್ಠಾನಗಳ ಪಾತ್ರ ಪ್ರಮುಖವಾಗಿದೆ,’ ಎಂದರು.

ಕಾದಂಬರಿಕಾರ ಎಂ.ಆರ್‌.ದತ್ತಾತ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ ಲೇಖಕ ಡಾ.ಸಿ.ಎನ್‌.ರಾಮಚಂದ್ರನ್‌ ಮಾತನಾಡಿ, ಲೇಖಕರು ಮುನ್ನೆಲೆಗೆ ಬರುತ್ತಿದಂತೆ ಸಾಮಾಜಿಕ ಕ್ಷೇತ್ರವನ್ನು ಕಡೆಗಣಿಸುವುದು ಸಹಜ. ಆದರೆ ನರಹಳ್ಳಿ ಬಾಲಸುಬ್ರಹ್ಮಣ್ಯ ಈ ಸಾಲಿಗೆ ಸೇರುವುದಿಲ್ಲ. ಸಾಹಿತ್ಯ ಕ್ಷೇತ್ರದಲ್ಲಿ ಉತ್ತುಂಗಕ್ಕೇರಿದರೂ ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ನಗರವಾಸಿಗಳಿಗೆ ಸಿಗುತ್ತಿರುವ ಸಾಹಿತ್ಯ ಪರಿಕರಗಳು, ಸೌಲಭ್ಯಗಳು ಗ್ರಾಮೀಣ ಪ್ರದೇಶದ ಜನರಿಗೂ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಗರದಲ್ಲಿದ್ದುಕೊಂಡೆ ತಮ್ಮ ಹುಟ್ಟೂರು ನರಹಳ್ಳಿ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ ನರಹಳ್ಳಿ ಯುವ ಸಂಘವನ್ನು ಕಟ್ಟಿ ಯುವಕರನ್ನು ಸಾಮಾಜಿಕ ಕ್ಷೇತ್ರದಲ್ಲಿ ಕ್ರಿಯಾಶೀಲರನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

Advertisement

ಕತೆಗಾರ ವಸುಧೇಂದ್ರ ಅವರು ಮತನಾಡಿ,ಎಂಜಿನಿಯರ್‌ ಓದಿ ಐಟಿ ಬಿಟಿ ಕ್ಷೇತ್ರದಲ್ಲಿ ತಾವು ನೌಕರಿ ಮಾಡಿದ್ದರೆ ಸಾಕಷ್ಟು ಹಣ ಗಳಿಸಬಹುದಿತ್ತು. ಆದರೆ, ಇತರೆ ಸುಖ – ಸಂತೋಷಗಳನ್ನ ಕಳೆದುಕೊಳ್ಳಬೇಕಿತ್ತು. ಕನ್ನಡ ಸಾಹಿತ್ಯದಲ್ಲಿ ಏನಾದರೂ  ಸಾಧನೆ ಮಾಡಬೇಕು ಎಂಬ ಆಶಾಭಾವದಿಂದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಇಂಗ್ಲೆಂಡ್‌ನಿಂದ ವಾಪಸ್ಸು ಬಂದೆ. ಇದೇ ಕೆಲಸವನ್ನು ಸ್ನೇಹಿತ ದತ್ತಾತ್ರಿ ಮಾಡಿದರು.

ದತ್ತಾತ್ರಿ ಅವರ ಬರವಣಿಗೆಯಲ್ಲಿ ಗಾಢವಾದ ಅಧ್ಯಯನದ ಹೂರಣ, ಸೃಜನಶೀಲತೆ ಇದೆ. ಈ ಕಾರಣದಿಂದಲೇ ಅವರ ಬರವಣಿಗೆ ನನಗೆ ಇಷ್ಟ ಆಗುತ್ತೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ  ಪ್ರಶಸ್ತಿ ಪುರಸ್ಕೃತ ಕಾದಂಬರಿಕಾರ ಎಂ.ಆರ್‌.ದತ್ತಾತ್ರಿ, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ನರಹಳ್ಳಿ ಪ್ರತಿಷ್ಠಾನದ  ಪ್ರಧಾನ ಕಾರ್ಯದರ್ಶಿ ಡಾ.ಆನಂದರಾಮ ಉಪಾಧ್ಯ,ಹಿರಿಯ ಸಾಹಿತಿ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next