Advertisement

ಅಹಿಂಸಾ ವರ್ಗದ ನೌಕರರಿಗೆ ನ್ಯಾಯ

02:29 PM Jul 31, 2017 | Team Udayavani |

ಬಳ್ಳಾರಿ: ಕರ್ನಾಟಕ ಇಂಜಿನಿಯರಿಂಗ್‌ ಸಂಘವು ಕಳೆದ 15 ವರ್ಷದಿಂದ ನ್ಯಾಯಾಲಯದಲ್ಲಿ ಸತತ ಹೋರಾಟ ನಡೆಸಿದ ಪ್ರತಿಫಲವಾಗಿ ಸರ್ವೋಚ್ಛ ನ್ಯಾಯಾಲಯದಲ್ಲಿ ಅಂತಿಮವಾಗಿ ಅಲ್ಪಸಂಖ್ಯಾತರ ಹಿಂದುಳಿದ ಸಾಮಾನ್ಯ ವರ್ಗದ ನೌಕರರಿಗೆ (ಅಹಿಂಸಾ) ನ್ಯಾಯ ದೊರೆತಿದೆ ಎಂದು ಅಹಿಂಸಾ ಒಕ್ಕೂಟದ ರಾಜ್ಯಾಧ್ಯಕ್ಷ ಎಂ.ನಾಗರಾಜ ಹೇಳಿದರು.

Advertisement

ನಗರದ ಡಾ| ರಾಜ್‌ಕುಮಾರ್‌ ರಸ್ತೆಯಲ್ಲಿರುವ ಬಿಡಿಎಎ ಸಭಾಂಗಣದಲ್ಲಿ ಭಾನುವಾರ ಸಂಜೆ ಜಿಲ್ಲಾ ಮಟ್ಟದ ಅಹಿಂಸಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. 1978ರಲ್ಲಿ ರಾಜ್ಯ ಸರ್ಕಾರವು ಜಾರಿಗೆ ತಂದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ, ಶೇ. 18 ಮೀಸಲು ಪರಿಣಾಮದಿಂದ ಜೇಷ್ಠತಾ ಪಟ್ಟಿಯಲ್ಲಿ ಆಗಿರುವ ತಪ್ಪಿನಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ವೇಗೋತ್ಕರ್ಷ ಬಡ್ತಿ ದೊರೆತಿದೆ. ಇದರಿಂದ ಅಲ್ಪಸಂಖ್ಯಾತ, ಹಿಂದುಳಿದ ಮತ್ತು ಸಾಮಾನ್ಯ (ಅಹಿಂಸಾ) ವರ್ಗದ ಶೇ. 82 ನೌಕರರಿಗೆ ನ್ಯಾಯಯುತವಾಗಿ ದೊರೆಯಬೇಕಿದ್ದ ಬಡ್ತಿ ದೊರೆಯದೇ ಬಹಳ ಅನ್ಯಾಯವಾಗಿತ್ತು ಎಂದರು. 

ಪ.ಜಾ ಮತ್ತು ಪ.ವ. ನೌಕರರು ಸೇವೆಗೆ ಸೇರಿದ ನಾಲ್ಕೈದು ವರ್ಷಗಳಲ್ಲಿ ಬಡ್ತಿ ಪಡೆದರೆ, ಅದೇ ಅಹಿಂಸಾ ವರ್ಗದವರಿಗೆ 25-30 ವರ್ಷಗಳವರೆಗೆ ಮೊದಲ ಬಡ್ತಿಗಾಗಿ ಕಾಯಬೇಕಾಗಿದೆ. ಲೋಕೋಪಯೋಗಿ ಮತ್ತು ನೀರಾವರಿ ಇಲಾಖೆಯ ಕೆಲ ಇಂಜಿನಿಯರ್‌ಗಳು ಒಂದು ಬಡ್ತಿಯೂ ಇಲ್ಲದೇ ನಿವೃತ್ತರಾಗಿದ್ದಾರೆ ಎಂದು ಹೇಳಿದರು. ಸರ್ವೋತ್ಛ ನ್ಯಾಯಾಲಯ 2017 ಫೆ. 9ರಂದು ನೀಡಿದ ಆದೇಶದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ನೌಕರರಿಗೆ ಬಡ್ತಿಯಲ್ಲಿನ ಪ್ರಾತಿನಿಧ್ಯವು ನಿಗದಿತ ಶೇ. 18ಕ್ಕಿಂತ ಮೀರಿರುವುದನ್ನು ಮನಗಂಡಿತು. ಆ ಬಳಿಕ 2002ರಲ್ಲಿ ಕರ್ನಾಟಕ ಸರ್ಕಾರ ಜಾರಿಗೊಳಿಸಿದ ಅವೈಜ್ಞಾನಿಕ ಅಧಿನಿಯಮ ಅಸಿಂಧುಗೊಳಿಸಿತು. ಆರು ತಿಂಗಳ ಅವಧಿಯಲ್ಲಿ ಅಹಿಂಸಾ ವರ್ಗದ ಅರ್ಹರ ಜೇಷ್ಠತಾ ಪಟ್ಟಿ
ತಯಾರಿಸಿ ಜೇಷ್ಠತೆಯ ಆಧಾರದಲ್ಲಿ ಘಟನೋತ್ತರ ಬಡ್ತಿ ನೀಡಲು ಸೂಚಿಸಿದೆ ಎಂದು ತಿಳಿಸಿದರು. 

ಸರ್ವೋಚ್ಛ ನ್ಯಾಯಾಲಯದ ತೀರ್ಪು ಅನುಷ್ಠಾನಗೊಳಿಸಲು ನೀಡಿದ ಕಾಲಾವಕಾಶ ಮುಗಿಯುತ್ತಾ ಬಂದರೂ ರಾಜ್ಯ ಸರ್ಕಾರ ಮೀನಾ-ಮೇಷ ಎಣಿಸುತ್ತಿದೆ. ಇದರ ಪರಿಣಾಮವಾಗಿ ಶೇ. 82 ಸಾಮಾನ್ಯ ವರ್ಗದ ನೌಕರರ ಅಸಹನೆಗೆ ಕಾರಣವಾಗಿದೆ ಎಂದರು. ಸ್ವಹಿತಾಸಕ್ತಿಯ ಕೆಲವರು ಸರ್ವೋತ್ಛ ನ್ಯಾಯಾಲಯವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನಿಗದಿಯಾದ ಶೇ. 18ರ ಬಡ್ತಿ ಮೀಸಲಾತಿಯನ್ನು ರದ್ದು ಪಡಿಸಿದೆ ಎಂಬ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿರುವರು. ಸಂವಿಧಾನದತ್ತ ಮೀಸಲಾತಿಗೆ ಅಹಿಂಸಾ ವರ್ಗದ ವಿರೋಧವಿಲ್ಲ ಎಂದರು.

ಎಲ್ಲ ನೌಕರರ ವರ್ಗದವರಿಗೆ ಮತ್ತು ಸಾರ್ವಜನಿಕರಿಗೆ ತಪ್ಪುಗ್ರಹಿಕೆ ಹೋಗಲಾಡಿಸಲು ಕರ್ನಾಟಕದ ಇತರ  ಜಿಲ್ಲೆಗಳಂತೆ ಬಳ್ಳಾರಿಯಲ್ಲೂ ಈ ಅಹಿಂಸಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸರ್ವೋತ್ಛ ನ್ಯಾಯಾಲಯವು ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ತೀರ್ಪನ್ನು ನೀಡಿದೆ. ಈ ತೀರ್ಪಿನಿಂದ ಎಲ್ಲ ವರ್ಗದವರಿಗೆ ಬಡ್ತಿಯಲ್ಲಿ ನ್ಯಾಯ ದೊರೆಯಲಿದೆ. ನೆಮ್ಮದಿಯಾಗಿ ಸರ್ಕಾರಿ ಸೇವೆ ಸಲ್ಲಿಸುವ ಅವಕಾಶವಿದೆ. ಈ ತೀರ್ಪಿನ ಅನುಷ್ಠಾನಕ್ಕೆ ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ, ಸಚಿವರು, ಶಾಸಕರು, ಲೋಕಸಭಾ ಸದಸ್ಯರು ಮತ್ತು ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಈ  ತೀರ್ಪನ್ನು ಅನುಷ್ಠಾನಗೊಳಿಸಿ, ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

Advertisement

ಕರ್ನಾಟಕ ರಾಜ್ಯ ಇಂಜಿನಿಯರುಗಳ ಸಂಘದ ಅಧ್ಯಕ್ಷ ಹೂಗಾರ್‌ ಹಾಗೂ ದೊಡ್ಡ ನಾಗಯ್ಯ, ರಾಜ್ಯ ಕಾರ್ಯದರ್ಶಿ ತಿಮ್ಮೇಗೌಡ, ಬಾಗಲಕೋಟೆ ಇಂಜಿನಿಯರ್‌ಗಳ ಸಂಘದ ಅಧ್ಯಕ್ಷ ಮೋಹನ ನಾಡಗೌಡ, ಕೆಪಿಸಿಎಲ್‌ ಇಂಜಿನಿಯರ್‌ ಚಂದ್ರಶೇಖರ, ಖಜಾನೆ ಇಲಾಖೆಯ ಶಶಾಂಕ್‌, ಶಿಕ್ಷಣ ಇಲಾಖೆಯ ಅರುಣ ಪ್ರತಾಪರೆಡ್ಡಿ, ಶಿಕ್ಷಕ ಎನ್‌.ಬಸವರಾಜ, ಸಾಮಾಜಿಕ ಹೋರಾಟಗಾರ ಟಿ.ಜಿ. ವಿಠಲ್‌ ನೇಕಾರ ಸಂಘದ ಅಧ್ಯಕ್ಷ ಮಂಜುನಾಥ, ಕುರುಬರ ಸಂಘದ ಅಧ್ಯಕ್ಷ ಎರ್ರಿಸ್ವಾಮಿ, ನಿವೃತ್ತ ಮುಖ್ಯ ಅಭಿಯಂತರ ಬಿ.ಜಿ. ಈಶ್ವರಪ್ಪ, ಶಿಕ್ಷಕ ಪ್ರಸಾದರೆಡ್ಡಿ, ವೀ.ವಿ. ನೌಕರರ ಸಂಘ, ಉಪ್ಪಾರ ಸಂಘ, ವಿಶ್ವಕರ್ಮ ಸಂಘದ ಸದಸ್ಯರು ಉಪಸ್ಥಿತರಿದ್ದರು.  ಉದ್ದಿಹಾಳ್‌ ವೆಂಕಟರಾವ್‌ ಸ್ವಾಗತಿಸಿದರು. ಕೃಷ್ಣಾರೆಡ್ಡಿ ಅಧ್ಯಕ್ಷೀಯ ಭಾಷಣ ಮಾಡಿದರು.

ಸವೊìàತ್ಛ ನ್ಯಾಯಾಲಯ ಎಸ್‌ಸಿ, ಎಸ್‌ಟಿ ನೌಕರರಿಗೆ ಸಂವಿಧಾನದ ನಿಯಮಗಳಂತೆ ಶೇ. 18ರಷ್ಟು ಮೀಸಲಾತಿ ತಿರಸ್ಕರಿಸಿಲ್ಲ. ಅವೈಜ್ಞಾನಿಕ ಬಡ್ತಿಯಿಂದಾಗಿ ಇಲಾಖೆಗಳ ವಿವಿಧ ಹುದ್ದೆಗಳಲ್ಲಿ ಶೇ.40ಕ್ಕಿಂತ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪಾಲಾಗಿರುವುದು ಸರಿಪಡಿಸಲು ಆದೇಶಿಸಿದೆ.
 ಎಂ. ನಾಗರಾಜ, ಅಹಿಂಸಾ ಒಕ್ಕೂಟದ ರಾಜ್ಯಾಧ್ಯಕ್ಷ.

Advertisement

Udayavani is now on Telegram. Click here to join our channel and stay updated with the latest news.

Next