Advertisement

ಪ್ರಯಾಸ ಅನುಭವಿಸಿದ ಗ್ರಾಹಕರಿಗೆ ನ್ಯಾಯ

12:08 PM May 23, 2018 | Team Udayavani |

ಬೆಂಗಳೂರು: ಟೂರ್‌ ಏಜೆನ್ಸಿಯೊಂದರ ಭರವಸೆಯಂತೆ ಮಲೇಷ್ಯಾ-ಸಿಂಗಾಪುರ ಪ್ರವಾಸ ತೆರಳಲು ಪೂರ್ಣ ಹಣ ಪಾವತಿಸಿ, ನಿಗದಿಯಂತೆ ದೂರದ ಕೌಲಾಲಂಪುರಕ್ಕೆ ತೆರಳಿ, ಅಲ್ಲಿ ತಮ್ಮ ಅನಾರೋಗ್ಯಪೀಡಿತ ಪೋಷಕರೊಂದಿಗೆ ಇನ್ನಿಲ್ಲದ ಸಂಕಷ್ಟ ಅನುಭವಿಸಿದ್ದ ಗ್ರಾಹಕರೊಬ್ಬರು, ಏಜೆನ್ಸಿ ವಿರುದ್ಧ ಗ್ರಾಹಕ ವೇದಿಕೆಗೆ ದೂರು ನೀಡಿ, ಮೂರು ವರ್ಷಗಳ ಕಾನೂನು ಹೋರಾಟದ ನಂತರ ನ್ಯಾಯ ಪಡೆದಿದ್ದಾರೆ.

Advertisement

ದೆಹಲಿ ಮೂಲದ ಕಲರ್‌ಫ‌ುಲ್‌ ವೆಕೇಷನ್‌ ಪ್ರೈ. ಲಿ. ಎಂಬ ಟೂರ್‌ ಏಜೆನ್ಸಿ ನೀಡಿದ ಆಫ‌ರ್‌ಗೆ ಅನುಗುಣವಾಗಿ ಹನುಮಂತನಗರದ ನಿವಾಸಿಯಾಗಿರುವ ಬಿ.ಕೆ.ಪ್ರಿಯಾರಾಮ್‌ ಎಂಬುವವರು ತಮ್ಮ ತಂದೆ-ತಾಯಿ ಜತೆ ಮಲೇಷ್ಯಾ-ಸಿಂಗಾಪುರ ಪ್ರವಾಸ ತೆರಳಲು ಟೂರ್‌ ಪ್ಯಾಕೇಜ್‌ನ ಪೂರ್ತಿ ಹಣ ಪಾವತಿಸಿದ್ದರು. ನಂತರ ಏಜೆನ್ಸಿ ಸೂಚನೆ ಮೇರೆಗೆ ಪೋಷಕರೊಂದಿಗೆ ಮಲೇಷ್ಯಾ ರಾಜಧಾನಿ ಕೌಲಾಲಂಪುರಕ್ಕೆ ತೆರಳಿದ್ದರು.

ಆದರೆ ಸತತ ಏಳು ಗಂಟೆ ಕಾದರೂ ಟೂರ್‌ ಏಜೆನ್ಸಿಯವರು ಬಂದು ಪಿಕಪ್‌ ಮಾಡಲೇ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಿಯಾರಾಮ್‌ ಅವರು, ಕಂಪನಿಯ ವಂಚನೆ ಹಾಗೂ ನಿರ್ಲಕ್ಷ್ಯದ ವಿರುದ್ಧ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ, ಕಂಪನಿ ವಿರುದ್ಧ ತಾವೇ ವಾದ ಮಂಡಿಸಿ, ತಾವು ಪಾವತಿಸಿದ್ದ ಹಣ ಹಾಗೂ ಪರಿಹಾರವಾಗಿ ಐದು ಸಾವಿರ ರೂ. ಪಡೆದುಕೊಳ್ಳುವಲ್ಲಿ ಸಫ‌ಲರಾಗಿದ್ದಾರೆ.

ಪ್ರಿಯಾರಾಮ್‌ ನೀಡಿದ್ದ ದೂರನ್ನು ಪುರಸ್ಕರಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಗ್ರಾಹಕ ವೇದಿಕೆ, ಕೊಟ್ಟ ಭರವಸೆಯಂತೆ ಸೇವೆ ಓದಗಿಸಲು ವಿಫ‌ಲವಾದ ಹಿನ್ನೆಲೆಯಲ್ಲಿ ಪ್ರಿಯಾರಾಮ್‌ ಪಾವತಿಸಿದ್ದ 1.23 ಲಕ್ಷ ರೂ. ಹಣ ಹಿಂತಿರುಗಿಸುವಂತೆ ಕಲರ್‌ಫ‌ುಲ್‌ ವೆಕೇಷನ್‌ ಸಂಸ್ಥೆಗೆ ಸೂಚಿಸಿದೆ.

ಜತೆಗೆ ದೂರದ ಊರಿನಲ್ಲಿ ಸಂಕಷ್ಟ ಹಾಗೂ ಮಾನಸಿಕ ಯಾತನೆ ಅನುಭವಿಸುವಂತೆ ಮಾಡಿದ ತಪ್ಪಿಗಾಗಿ ಸಂಸ್ಥೆಗೆ 5 ಸಾವಿರ ರೂ. ದಂಡ ವಿಧಿಸಿ, ಈ ಮೊತ್ತವನ್ನು ದೂರುದಾರ ಪ್ರಿಯಾರಾಮ್‌ಗೆ ನೀಡಬೇಕು, ಈ ಆದೇಶವನ್ನು 45 ದಿನಗಳಲ್ಲಿ ಪಾಲಿಸಬೇಕು ಎಂದು ಸೂಚಿಸಿದೆ.

Advertisement

ಸಂಸ್ಥೆ ವಾದ ತಳ್ಳಿಹಾಕಿದ ವೇದಿಕೆ: ಟೂರ್‌ ಪ್ಯಾಕೇಜ್‌ ಬುಕ್‌ ಮಾಡಿದ್ದ ಪ್ರಿಯಾರಾಮ್‌ ಸಕಾರಣ ನೀಡದೆ, ಹಣ ಉಳಿಸುವ ಉದ್ದೇಶದಿಂದ ಪ್ರವಾಸ ರದ್ದು ಮಾಡಿದ್ದಾರೆ. ಜತೆಗೆ, ಒಮ್ಮೆ ಪ್ರವಾಸಕ್ಕೆ ಪಾವತಿಸಿದ ಹಣವನ್ನು ಯಾವುದೇ ಕಾರಣಕ್ಕೂ ಗ್ರಾಹಕರಿಗೆ ವಾಪಾಸ್‌ ನೀಡುವಂತಿಲ್ಲ ಎಂಬುದು ಕಂಪನಿ ನಿಯಮವಾಗಿದೆ ಎಂಬ ಏಜೆನ್ಸಿ ವಾದವನ್ನು ಗ್ರಾಹಕ ವೇದಿಕೆ ತಳ್ಳಿಹಾಕಿದೆ.

“ಗ್ರಾಹಕರು ನಂಬಿಕೆಯಿಂದ ಹಣ ಪಾವತಿಸಿದ ಬಳಿಕ ಸಮರ್ಪಕ  ಸೇವೆ ನೀಡುವುದು ಕಂಪನಿ ಜವಾಬ್ದಾರಿ. ಅಲ್ಲದೆ, ಮೊದಲೇ ಆದ ಒಪ್ಪಂದದಂತೆ ಗ್ರಾಹಕರು ಸ್ವಂತ ಹಣದಲ್ಲಿ ಕೌಲಾಲಂಪುರಕ್ಕೆ ತೆರಳಿದ್ದಾರೆ. ಆದರೆ, ಆ ನಂತರದಲ್ಲಿ ನೀವು ಅವರಿಗೆ ಸೇವೆ ಒದಗಿಸಿಲ್ಲ. ಹೀಗಾಗಿ, ಗ್ರಾಹಕ ಪ್ರಿಯಾರಾಮ್‌ ಪಾವತಿಸಿದ್ದ ಹಣವನ್ನು ವಾಪಾಸ್‌ ನೀಡಲೇಬೇಕು,’ ಎಂದು ತಾಕೀತು ಮಾಡಿದೆ.

ಪ್ರಕರಣ ಏನು?: ಪ್ರಿಯಾರಾಮ್‌ ಅವರು ತಂದೆ, ತಾಯಿ ಜತೆ ಮಲೇಷ್ಯಾ ಹಾಗೂ ಸಿಂಗಾಪುರ ಪ್ರವಾಸಕ್ಕೆ ತೆರಳಲು ನಿರ್ಧರಿಸಿದ್ದರು. ಅದರಂತೆ 2015ರ ಫೆಬ್ರವರಿ 18ರಿಂದ 25ರವರೆಗೆ ಕಲರ್‌ಫ‌ುಲ್‌ ವೆಕೇಷನ್‌ ಮೂಲಕ ಟೂರ್‌ ಪ್ಯಾಕೇಜ್‌ ಬುಕ್‌ ಮಾಡಿ, ಎರಡು ಕಂತುಗಳಲ್ಲಿ ಒಟ್ಟು 1.23 ಲಕ್ಷ ರೂ. ಪಾವತಿಸಿದ್ದರು. ಗ್ರಾಹಕರು ಕೌಲಾಲಂಪುರಕ್ಕೆ ಬಂದ ಬಳಿಕ ಅಲ್ಲಿಂದ ಪ್ರವಾಸಿ ತಾಣಗಳಿಗೆ ವಿಮಾನ ಪ್ರಯಾಣ, ಊಟ, ವಸತಿ  ಸೌಲಭ್ಯ ಕಲ್ಪಿಸುವುದಾಗಿ ಏಜೆನ್ಸಿ ಭರವಸೆ ನೀಡಿತ್ತು.

ಅದರಂತೆ, ಪ್ರಿಯಾರಾಮ್‌, ತಾಯಿ ಹಾಗೂ ತಂದೆ ಜತೆ ಫೆ.18ರಂದು ಮುಂಜಾನೆ 5.30ಕ್ಕೆ ಕೌಲಾಲಂಪುರ ವಿಮಾನ ನಿಲ್ದಾಣ ತಲುಪಿದ್ದರು. ಬಳಿಕ  ಕಲರ್‌ ಪುಲ್‌ ವೆಕೇಶನ್‌ ಸಿಬ್ಬಂದಿಗೆ ಹಲವು ಬಾರಿ ಕರೆ ಮಾಡಿದ್ದು, ಯಾರೊಬ್ಬರೂ ಕಾಲ್‌ ರಿಸೀವ್‌ ಮಾಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ 7 ಗಂಟೆಗಳ ಕಾಲ ಅಲ್ಲಿಯೇ ಉಳಿಯುಂತಾಗಿತ್ತು.

ಈ ವೇಳೆ ಮಧುಮೇಹದಿಂದ ಬಳಲುತ್ತಿದ್ದ ತಾಯಿಯ ಆರೋಗ್ಯದಲ್ಲಿ ಏರುಪೇರಾಗಿ, ಅಲ್ಲೇ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಪ್ರಿಯಾರಾಮ್‌ ಅವರ ಕರೆ ಸ್ವೀಕರಿಸಿದ ಏಜೆನ್ಸಿ ಸಿಬ್ಬಂದಿಯೊಬ್ಬರು, ಸ್ವಂತ ಖರ್ಚಿನಲ್ಲಿ ಸಿಂಗಾಪುರಕ್ಕೆ ಆಗಮಿಸಿದರೆ, ಅಲ್ಲಿಂದ ಮುಂದಕ್ಕೆ ಕರೆದುಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

ಆದರೆ, ವಿಮಾನ ಪ್ರಯಾಣ ಟಿಕೆಟ್‌ ಖರೀದಿಗೆ ಹಣವಿಲ್ಲ ಎಂದು ಹೇಳಿದರೂ ಕೇಳದ ಏಜೆನ್ಸಿ ಸಿಬ್ಬಂದಿ, ಕರೆ ಸ್ಥಗಿತಗೊಳಿಸಿದ್ದರು. ಇದರಿಂದ ನೊಂದ ಪ್ರಿಯಾರಾಮ್‌, ಟೂರ್‌ ಪ್ಯಾಕೇಜ್‌ ಎದ್ದು ಮಾಡಿ ನಗರಕ್ಕೆ ವಾಪಸಾಗಿದ್ದರು. ಬಳಿಕ ಹಣ ವಾಪಾಸ್‌ ನೀಡುವಂತೆ ಮನವಿ ಮಾಡಿದರೂ ಏಜೆನ್ಸಿ ಸ್ಪಂದಿಸಿರಲಿಲ್ಲ. ಹೀಗಾಗಿ ಅವರು ಗ್ರಾಹಕರ ವೇದಿಕೆ ಮೆಟ್ಟಿಲೇರಿದ್ದರು.

* ಮಂಜುನಾಥ್‌ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next