ಹೊಸದಿಲ್ಲಿ : ಸುಪ್ರೀಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ಕಾರ್ಯ ವೈಖರಿಯನ್ನು ಬಹಿರಂಗವಾಗಿ ಪತ್ರಿಕಾಗೋಷ್ಠಿ ಮೂಲಕ ಟೀಕಿಸಿದ್ದ ನಾಲ್ವರು ಬಂಡುಕೋರ ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿರುವ ನ್ಯಾ. ಜೆ ಚಲಮೇಶ್ವರ್ ಅವರು ಇಂದು ಬುಧವಾರ ಅನಾರೋಗ್ಯದ ಕಾರಣ ಕರ್ತವ್ಯಕ್ಕೆ ಹಾಜರಾಗಿಲ್ಲ.
ನ್ಯಾ. ಚಲಮೇಶ್ವರ್ ಅವರು ಇಂದು ಬುಧವಾರ ಕೋರ್ಟ್ ಕಲಾಪ ನಡೆಸುವುದಿಲ್ಲ ಎಂದು ದೃಢೀಕರಿಸಲಾಗಿದೆ ಎಂಬುದಾಗಿ ಮೂಲಗಳು ತಿಳಿಸಿವೆ.
ನಿನ್ನೆ ಮಂಗಳವಾರ ವರಿಷ್ಠ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ನಾಲ್ವರು ಬಂಡುಕೋರ ಹಿರಿಯ ನ್ಯಾಯಮೂರ್ತಿಗಳೊಂದಿಗೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು. ಇಂದು ಬೆಳಗ್ಗೆ ಮತ್ತೆ ಅವರು ಮಾತುಕತೆ ನಡೆಸುವುದೆಂದು ತೀರ್ಮಾನಿಸಲಾಗಿತ್ತು.
ಕಳೆದ ಜ.12ರಂದು ಪತ್ರಿಕಾ ಗೋಷ್ಠಿಯ ಮೂಲಕ ವರಿಷ್ಠ ನ್ಯಾಯಮೂರ್ತಿ ಮಿಶ್ರಾ ವಿರುದ್ಧ ಬಂಡೆದಿದ್ದ ಇತರ ಮೂವರು ನ್ಯಾಯಮೂರ್ತಿಗಳೆಂದರೆ ರಂಜನ್ ಗೊಗೋಯಿ, ಮದನ್ ಬಿ ಲೊಕುರ್ ಮತ್ತು ಕುರಿಯನ್ ಜೋಸೆಫ್.
ಮೂಲಗಳ ಪ್ರಕಾರ ನ್ಯಾ. ಯು ಯು ಲಲಿತ್ ಮತ್ತು ನ್ಯಾ. ಡಿ ವೈ ಚಂದ್ರಚೂಡ್ ಅವರು ನಿನ್ನೆ ಮಂಗಳವಾರ ಸಂಜೆ ಜಸ್ಟಿಸ್ ಚಲಮೇಶ್ವರ್ ಅವರನ್ನು ಅವರ ಮನೆಯಲ್ಲಿ ವೈಯಕ್ತಿಕವಾಗಿ ಭೇಟಿಯಾಗಿದ್ದಾರೆ.