Advertisement
ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಗಳನ್ನು ತನ್ನಲ್ಲಿ ವರ್ಗಾಯಿಸಿಕೊಂಡಿರುವ ಸುಪ್ರೀಂಕೋರ್ಟ್, ದೇಶದ ಇತರ ಯಾವುದೇ ಕೋರ್ಟ್ ಕೂಡ ಲೋಯಾ ಸಾವಿಗೆ ಸಂಬಂಧಿಸಿದ ಅರ್ಜಿಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವಂತಿಲ್ಲ ಎಂದು ಸೂಚನೆ ನೀಡಿದೆ. ಜತೆಗೆ ಅರ್ಜಿದಾರರು ವಾದಿಸಿದಂತೆ ಪ್ರಕರಣದಲ್ಲಿ ಕೆಲವು ಗಂಭೀರ ವಿಚಾರಗಳು ಇವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಹಾಗಂತ, ಯಾರ ಮೇಲೂ ಅಪವಾದ ಹೊರಿಸ ಬಾರದು ಎಂದೂ ಹೇಳಿದೆ.
ಬಾಂಬೆ ವಕೀಲರ ಒಕ್ಕೂಟದ ಪರವಾಗಿ ವಾದಿಸಿದ ಹಿರಿಯ ನ್ಯಾಯವಾದಿ ದುಷ್ಯಂತ್ ದವೆ ವಾದ ಮಂಡಿಸುವ ವೇಳೆ “ಬಿಜೆಪಿ ಅಧ್ಯಕ್ಷ ಅಮಿತ್ ಶಾ ರನ್ನು ರಕ್ಷಿಸಲು ಎಲ್ಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ’ ಎಂದು ಹೇಳಿದರು. ಮಹಾರಾಷ್ಟ್ರ ಸರಕಾರದ ಪರ ವಕೀಲ ಹರೀಶ್ ಸಾಳ್ವೆ, ಆ ಹೇಳಿಕೆಗೆ ಪ್ರತಿಭಟನೆ ಸಲ್ಲಿಸಿದರು. ಇದರಿಂದ ವಸ್ತುಶಃ ಕೋಪೋದ್ರಿಕ್ತರಾದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು, “ಈ ದಿನದವರೆಗೂ ನ್ಯಾ| ಲೋಯಾ ಅವರದ್ದು ಸಹಜ ಸಾವು. ಹೀಗಾಗಿ ಈ ಬಗ್ಗೆ ಯಾರ ಮೇಲೂ ಅಪವಾದ ಹೊರಿಸುವುದು ಬೇಡ’ ಎಂದು ಹೇಳಿದರು.