Advertisement

ನನ್ನ ಮೇಲೆ ಬೈರಪ್ಪ ಸಾಹಿತ್ಯ ಪ್ರಭಾವ:  ನಝೀರ್‌

05:17 PM Mar 13, 2017 | Team Udayavani |

ಮೂಡಬಿದಿರೆ : ದೇಶದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಕಗೊಂಡ ಬಳಿಕ ಶನಿವಾರ ಮೊದಲ ಬಾರಿಗೆ ಹುಟ್ಟೂರು ಮೂಡಬಿದಿರೆಗೆ ಆಗಮಿಸಿದ ಜಸ್ಟೀಸ್‌ ಎಸ್‌. ಅಬ್ದುಲ್‌ ನಝೀರ್‌ ಅವರನ್ನು  ಮೂಡಬಿದಿರೆ ವಕೀಲರ ಸಂಘದ ವತಿಯಿಂದ ಅಭಿನಂದಿಸಿ ಸಮ್ಮಾನಿಸಲಾಯಿತು.

Advertisement

ಕೋರ್ಟ್‌ ಸಭಾಂಗಣದಲ್ಲಿ  ಜರಗಿದ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎ.ಎನ್‌. ವೇಣುಗೋಪಾಲ ಗೌಡ ಅವರು ನ್ಯಾ| ಮೂ| ಅಬ್ದುಲ್‌ ನಝೀರ್‌ ಅವರನ್ನು ಸಮ್ಮಾನಿಸಿದರು.

ತಮಗೆ ನೀಡಿದ ಸಮ್ಮಾನಕ್ಕೆ  ಪ್ರತಿಕ್ರಿಯೆ ನೀಡಿದ  ನಝೀರ್‌ ತಮ್ಮ ಶಿಕ್ಷಣ, ವೃತ್ತಿ ಕ್ಷೇತ್ರದ ಗುರುಗಳನ್ನು ಸ್ಮರಿಸಿಕೊಂಡರು.  ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ  ಎದ್ದು ಕಾಣಿಸುವ ಮೂಡಬಿದಿರೆ,  ಬೈರಪ್ಪರಂಥವರ ಕಾದಂಬರಿಗಳ ಓದು ನನ್ನ ಮೇಲೆ ಪ್ರಭಾವ ಬೀರಿದೆ ಎಂದು ಅವರು ಹೇಳಿದರು.

ಸರಳ, ಪ್ರಾಮಾಣಿಕ ಗುಣ ನಡತೆಗಳಿಂದ ಹಿರಿಯ ಕಿರಿಯ ನ್ಯಾಯಾಧೀಶರು, ವಕೀಲರ ಪ್ರೀತಿ ಪಾತ್ರರಾಗಿರುವ ನಝೀರ್‌ ಅವರು ಕೆಳಹಂತದ ನ್ಯಾಯಾಧೀಶರನ್ನು ಗೌರವದಿಂದ ಕಾಣುವವರು ಎಂದು ಜ|  ವೇಣುಗೋಪಾಲ ಗೌಡ ಹೇಳಿದರು.

ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಜ| ಎ.ಎಸ್‌. ಬೋಪಣ್ಣ,  ಜ| ಜಾನ್‌  ಮೈಕಲ್‌ ಡಿ’ ಕುನ್ಹಾ ಮೊದಲಾದವರು  ನಝೀರ್‌ ಅವರ ಸಾಧನೆ,  ಗುಣನಡತೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಅಬ್ದುಲ್‌ ನಝೀರ್‌ ಅವರ  ವೃತ್ತಿ ಗುರು ನ್ಯಾಯವಾದಿ ಎಂ.ಕೆ ವಿಜಯ ಕುಮಾರ್‌ ಮಾತನಾಡಿ,  ಪ್ರತಿಭೆ ಮತ್ತು ಸರಳತೆಯಿಂದಾಗಿ ನಝೀರ್‌ ಈ ಎತ್ತರಕ್ಕೆ ಏರಿದ್ದಾರೆ ಎಂಬುದು ತನಗೆ ಹೆಮ್ಮೆ, ಅಭಿಮಾನದ ಸಂಗತಿ ಎಂದರು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್‌.  ಬೀಳಗಿ, ಮೂಡಬಿದಿರೆ ನ್ಯಾಯಾಲಯದ ನ್ಯಾಯಾಧೀಶೆ ಅರುಣಾ ಕುಮಾರಿ, ಸೀನಿಯರ್‌ ಡಿವಿಶನ್‌ ನ್ಯಾಯಾಧೀಶೆ ಶಿಲ್ಪಾ ಕೆ. ಎಸ್‌., ಮೂಡಬಿದಿರೆ ವಕೀಲರ ಸಂಘದ ಉಪಾಧ್ಯಕ್ಷ ನಾಗೇಶ್‌ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್‌ ಲೋಬೋ ಉಪಸ್ಥಿತರಿದ್ದರು.

ಗುರುಗಳಿಗೆ ಅಭಿನಂದನೆ
ಶ್ರೀಮಹಾವೀರ ಕಾಲೇಜಿನಲ್ಲಿ ತನಗೆ ಗುರುವಾಗಿದ್ದು  ಪ್ರಸ್ತುತ ಇಲ್ಲಿನ  ವಕೀಲರ ಸಂಘದ ಅಧ್ಯಕ್ಷರಾಗಿರುವ ಎಂ. ಬಾಹುಬಲಿ ಪ್ರಸಾದ್‌ ಅವರು ರಾಷ್ಟ್ರ ಮಟ್ಟದ “ಭಾರತ ಜ್ಯೋತಿ’ ಪ್ರಶಸ್ತಿ ಪಡೆದಿರುವುದನ್ನು  ಜ| ನಝೀರ್‌ ಉಲ್ಲೇಖೀಸಿ ಅವರನ್ನು  ಸಮ್ಮಾನಿಸಿದರು.

ಮೂಡಬಿದಿರೆಗೆ ನಝೀರ್‌ ಕೊಡುಗೆ
ಎಂ. ಬಾಹುಬಲಿ ಪ್ರಸಾದ್‌  ಪ್ರಸ್ತಾವಿಸಿ,  ಇನ್ನೂ ಹೋಬಳಿ ಹಂತದಲ್ಲಿರುವ ಮೂಡಬಿದಿರೆಗೆ ನ್ಯಾಯಾಲಯ ಒದಗಿ ಬರುವಲ್ಲಿ  ಹಾಗೂ ಸುಮಾರು 6  ಕೋಟಿ ರೂ ವೆಚ್ಚದ ಸುಸಜ್ಜಿತ ಕಟ್ಟಡ ನಿರ್ಮಾಣವಾಗುವಲ್ಲಿ  ಅಬ್ದುಲ್‌ ನಝೀರ್‌ ಅವರ ಶ್ರಮವನ್ನು ಸ್ಮರಿಸಿದರು.

ಡಾಕ್ಯುಮೆಂಟರಿ
ವಕೀಲರ ಸಂಘದ ಕಾರ್ಯದರ್ಶಿ ಪ್ರವೀಣ್‌ ಲೋಬೋ ದಂಪತಿ ನಿರ್ಮಿಸಿದ ನಝೀರ್‌ ಅವರ  ಜೀವನದ ಪ್ರಮುಖ ಬೆಳವಣಿಗೆಗಳನ್ನು ಚಿತ್ರಿಸುವ  ಸಾಕ್ಷé ಚಿತ್ರವನ್ನು  ಪ್ರದರ್ಶಿಸಲಾಯಿತು.

ಹಿರಿಯ ನ್ಯಾಯವಾದಿ ಕೆ. ಆರ್‌. ಪಂಡಿತ್‌ ಸಮ್ಮಾನಪತ್ರ ವಾಚಿಸಿದರು. ಕಾರ್ಯದರ್ಶಿ  ಪ್ರವೀಣ್‌ ಲೋಬೋ ವಂದಿಸಿದರು. ನ್ಯಾಯವಾದಿ  ಶ್ವೇತಾ ಜೈನ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next