ವಾಷಿಂಗ್ಟನ್ : ಭಾರತ ಜತೆ ಕೇವಲ ಎರಡೇ ನಿಮಿಷಗಳ ಮಾತುಕತೆ ನಡೆಸಿ ಅಮೆರಿಕದಿಂದ ಭಾರತ ಆಮದಿಸಿಕೊಳ್ಳುವ ಮೋಟರ್‌ಸೈಕಲ್‌ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.50ರಷ್ಟು ಕಡಿತ ಮಾಡಿಸಿಕೊಂಡೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೆಚ್ಚುಗೆಯಿಂದ ಹೇಳಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ, ಹ್ಯಾರ್ಲೆ ಡೇವಿಡ್‌ಸನ್ ರೀತಿಯ ಮೋಟಾರ್ ಸೈಕಲ್‌ಗಳ ಮೇಲಿನ ಅಬಕಾರಿ ಸುಂಕವನ್ನು ಶೇ.50ರಷ್ಟು ಇಳಿಸಿತ್ತು. ಈ ಇಳಿಕೆಗೆ ಟ್ರಂಪ್ – ಮೋದಿ ಫೋನ್ ಮಾತುಕತೆಯೇ ಕಾರಣವಾಗಿತ್ತು.
ಭಾರತ ಸರಕಾರ ಮಾಡಿದ್ದ ಈ ಇಳಿಕೆಯನ್ನು ಒಂದು ನ್ಯಾಯೋಚಿತ ಡೀಲ್ ಎಂದು ಟ್ರಂಪ್ ಹೇಳಿದ್ದರೂ ಅಮೆರಿಕದ ವಿಸ್ಕಿ ಮೇಲೆ ಭಾರತ ಅತ್ಯಧಿಕ ಅಬಕಾರಿ ಸುಂಕ ಹೇರುತ್ತಿದೆ ಎಂದು ಆಕ್ಷೇಪಿಸಿದ್ದರು.
ನಿನ್ನೆ ಗುರುವಾರ ಶ್ವೇತ ಭವನದಲ್ಲಿ “ಕೊಟ್ಟು ತೆಗೆದುಕೊಳ್ಳುವ ವಾಣಿಜ್ಯ ಕಾಯಿದೆ’ ಕುರಿತಾಗಿ ನಡೆದಿದ್ದ ಸಮಾರಂಭದಲ್ಲಿ ಟ್ರಂಪ್ ಅವರು ವಿವಿಧ ದೇಶಗಳ ನಾನ್-ರೆಸಿಪ್ರೋಕಲ್ ಟ್ಯಾರಿಫ್ ಗಳ ಹಸಿರು ವರ್ಣದ ಫಲಕವನ್ನು ಎತ್ತಿ ಹಿಡಿದರು.
ಟ್ರಂಪ್ ಮಾತನಾಡುತ್ತಾ, “ಮೋಟಾರ್ ಸೈಕಲ್ ಮೇಲಿನ ಅಬಕಾರಿ ಸುಂಕದ ವಿಷಯದಲ್ಲಿ ಭಾರತದ ಉದಾಹರಣೆಯನ್ನೇ ತೆಗೆದುಕೊಳ್ಳಿ; ಕೇವಲ ಎರಡು ನಿಮಿಷಗಳ ಮಾತುಕತೆಯಲ್ಲಿ ಶೇ.100 ಇದ್ದ ಆ ಸುಂಕವನ್ನು ನಾನು ಶೇ.50ಕ್ಕೆ ಇಳಿಸಿಕೊಂಡೆ. ಆದರೆ ಈಗಲೂ ಅದು ಶೇ.50 ವರ್ಸರ್ ಶೇ.2.4 ರಲ್ಲಿದೆ (ಅಮೆರಿಕ ಆಮದಿಸಿಕೊಳ್ಳುವ ವಿದೇಶೀ ಮೋಟಾರು ಸೈಕಲ್‌ಗಳ ಮೇಲಿನ ಅಬಕಾರಿ ಸುಂಕ); ಹಾಗಿದ್ದರೂ ಭಾರತದೊಂದಿಗೆ ಈ ಡೀಲ್ ಆಕರ್ಷಕವಾಗಿಯೇ ಇದೆ’ ಎಂದು ಹೇಳಿದರು.