ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ. ಹಾಗೆಂದು ನಾನೇ ಕಂಡುಕೊಂಡ ಪರಿಹಾರವಲ್ಲವಿದು.
ಹದಿನೈದು ವರ್ಷಗಳ ಹಿಂದೆ ಒಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸದ ಒತ್ತಡ ಹೆಚ್ಚಿತ್ತು ಎನಿಸುತ್ತಿತ್ತು. ನಿತ್ಯವೂ ಮನೆಗೆ ಬಂದ ಮೇಲೂ ಕಚೇರಿಯ ಕೆಲಸ ಕಾಡುತ್ತಿತ್ತು. ಅದಾಗಲಿಲ್ಲ, ಇದಾಗಬೇಕಿತ್ತು ಎಂದೆಲ್ಲ ಅನಿಸುತ್ತಿತ್ತು. ಮನೆಯಲ್ಲೂ ನಿಶ್ಚಿಂತೆಯಿಂದ ಇರಲು ಆಗುತ್ತಿರಲಿಲ್ಲ. ಏನು ಮಾಡುವುದು ಎಂದು ತೋಚದೆ ಕೆಲವೊಮ್ಮೆ ಸುಮ್ಮನೆ ಕುಳಿತುಬಿಡುತ್ತಿದ್ದೆ.
ಒಮ್ಮೆ ಸತ್ಸಂಗಕ್ಕೆ ಗೆಳೆಯರೊಬ್ಬರು ಕರೆದೊಯ್ದರು. ನಾನು ಒಲ್ಲದ ಮನಸ್ಸಿನಲ್ಲಿ ಹೋಗಿದ್ದೆ. ಇದು ಸತ್ಸಂಗ ವೆಂದರೆ ಮಹನೀಯರೊಬ್ಬರೊಬ್ಬರ ಉಪನ್ಯಾಸ. ಆ ಉಪನ್ಯಾಸಕರು ಎಲ್ಲರ ಬಗೆ ಬಗೆಯ ದುಃಖ ವನ್ನು ವಿವರಿಸಿದರು. ಮಹಾಭಾರತದಲ್ಲಿನ ದುಃಖ ದಿಂದ ಹಿಡಿದು ಇವತ್ತಿನವರೆಗೂ ಎಲ್ಲವೂ ಬಂದಿತ್ತು. ಮಾತನಾಡುತ್ತಾ ಉಪನ್ಯಾಸಕರು, “ಬದುಕಿನಲ್ಲಿ ಕಷ್ಟ, ಒತ್ತಡಗಳು ಬರುವಂಥದ್ದೇ. ಅದರಲ್ಲೂ ಈಗಿನ ದಿನಗಳ ಬದುಕಿನಲ್ಲಿ ಎಲ್ಲವೂ ಸಾಮಾನ್ಯ. ಅದಕ್ಕೆ ಉತ್ತರ ನಮ್ಮ ಸುತ್ತಲಿನ ಪರಿಸರದಲ್ಲಿಂದಲೇ ಪಡೆಯಬೇಕು. ಎಂದಾದರೂ ಒಮ್ಮೆ ನೀವು ಸಮುದ್ರ ಎದುರು ನಿಂತು ಗಮನಿಸಿದ್ದೀರಾ? ಇಲ್ಲವಾದರೆ ಗಮನಿಸಿ. ಗಾಳಿಯ ಒತ್ತಡ ಹೆಚ್ಚಿದರೂ ಸಮುದ್ರ ಏನೂ ಹೇಳುವುದಿಲ್ಲ, ಎಲ್ಲ ಕಡೆಯಿಂದಲೂ ನೀರು ಉಕ್ಕಿ ಹರಿದರೂ ಏನೂ ಹೇಳುವುದಿಲ್ಲ. ಅದರಷ್ಟಕ್ಕೆ ಇರುತ್ತದೆ. ಹಾಗಾದರೆ ಅದರ ತಾಳ್ಮೆ ಎಷ್ಟು ದೊಡ್ಡದು? ಅದಕ್ಕೇ ಬಹಳ ಬೇಸರವಾದರೆ ಒಮ್ಮೆ ಸಮುದ್ರದ ಎದುರು ಕುಳಿತು ಹೇಳಿಕೊಂಡು ಬಿಡಿ, ಖಾಲಿಯಾಗುತ್ತೀರಿ’ ಎಂದರು.
ನನಗೆ ಮೊದಲು ನಗು ಬಂದದ್ದು ನಿಜ. ಒಂದು ದಿನ ತೀರಾ ಒತ್ತಡದಲ್ಲಿದ್ದೆ, ಸಂಜೆಯೇ ಕಚೇರಿಯಿಂದ ಹೊರಟೆ. ಸಮುದ್ರ ಬಹಳ ದೂರವಿರಲಿಲ್ಲ. ಮನೆಗೆ ಹೋಗುವ ಮೊದಲು ಸಮುದ್ರ ತೀರಕ್ಕೆ ಹೋದೆ. ಅಲ್ಲಿನ ಶಾಂತತೆ ಆವರಿಸಿಕೊಂಡಿತು. ಯಾರೂ ಇಲ್ಲದ ಕಡೆ ಹೋಗಿ ಕುಳಿತೆ, ಸಮುದ್ರವನ್ನೇ ನೋಡುತ್ತಾ ಕುಳಿತೆ. ಮನಸ್ಸಿನಲ್ಲಿದ್ದ ಒತ್ತಡವೆಲ್ಲವನ್ನೂ ಹೇಳಿಕೊಂಡೆ. ಸ್ವಲ್ಪ ಸಮಾಧಾನವೆನಿಸಿತು. ಸೂರ್ಯ ಮುಳುಗುತ್ತಿದ್ದ. ಇನ್ನೂ ಸ್ವಲ್ಪ ಹೊತ್ತು ಇದ್ದು ಮನೆಗೆ ಬಂದೆ. ಏನೋ ಬದಲಾವಣೆ ಎನಿಸತೊಡಗಿತು. ಈಗ ಅದನ್ನೇ ಅಭ್ಯಾಸ ಮಾಡಿಕೊಂಡಿದ್ದೇನೆ. ಹೆಚ್ಚು ಒತ್ತಡವೆನಿಸಿದಾಗ ಸಮುದ್ರ ತೀರದಲ್ಲಿ ನಿಂತು ಎಲ್ಲವನ್ನೂ ಖಾಲಿ ಮಾಡಿಕೊಂಡು ಬರುತ್ತೇನೆ. ಒಂದು ಬಗೆಯ ನಿರಾಳವೆನಿಸುತ್ತದೆ.
ಎಷ್ಟೋ ಬಾರಿ ಪ್ರತಿಯೊಬ್ಬರ ಮಾತಿನಲ್ಲೂ ಅರ್ಥವಿರುತ್ತದೆ, ನಿಧಾನವಾಗಿ ಅರಿತುಕೊಳ್ಳಬೇಕು, ಸಾಧ್ಯವಾದರೆ ನಮ್ಮ ಬದುಕಿನಲ್ಲಿ ಅನ್ವಯಿಸಿಕೊಳ್ಳಲು ಪ್ರಯತ್ನಿಸಬೇಕು.
-ರಾಮಮೋಹನ್, ಉಡುಪಿ