Advertisement
ಗಾಂಧಿನಗರದ ಸಿದ್ಧಸೂತ್ರ ಬಿಟ್ಟು ಆಚೀಚೆ ಬರದ ಚಿತ್ರವಿದು. ಕನ್ನಡಕ್ಕೆ ಕಥೆ ಹೊಸದಲ್ಲ. ಈಗಾಗಲೇ ಕನ್ನಡದಲ್ಲೇ ಅದೆಷ್ಟೋ ಕಥೆಗಳು ಬಂದು ಹೋಗಿವೆ. ಸೃಜನ್ ಲೋಕೇಶ್ ನಿರ್ವಹಿಸಿರುವ ಪಾತ್ರವಷ್ಟೇ ಇಲ್ಲಿ ಹೊಸದು. ಕಾಣುವ ಪಾತ್ರಗಳಲ್ಲಷ್ಟೇ ಹೊಸತನವಿದೆ. ಉಳಿದಿದೆಲ್ಲವೂ ಮಾಮೂಲಿ. ಸುಳ್ಳು ಎಷ್ಟು ಮಜ ಕೊಡುತ್ತೆ ಎಂಬುದನ್ನಿಲ್ಲಿ ಅಷ್ಟೇ ಮಜವಾಗಿ ತೋರಿಸಲಾಗಿದೆ. ಅದರಿಂದ ಎಷ್ಟು ಮನಸ್ಸುಗಳಿಗೆ ನೋವಾಗುತ್ತೆ ಅನ್ನೋದನ್ನೂ ಹೇಳಲಾಗಿದೆ.
Related Articles
Advertisement
ನಾಯಕ ಸೂರ್ಯ ಚಿಕ್ಕವನಿರುವಾಗಲೇ ಅವನ ಅಪ್ಪ, ಅಮ್ಮ ಮಲೇಶಿಯಾಗೆ ಶಿಫ್ಟ್ ಆಗಿರುತ್ತಾರೆ. ದೊಡ್ಡ ಉದ್ಯಮಿ ಪುತ್ರನಾದ ಸೂರ್ಯನಿಗೆ ಇಂಡಿಯಾಗೆ ಬರುವ ಆಸೆ. ತಂದೆ ಮಾಡಿಕೊಟ್ಟ ಬಿಜಿನೆಸ್ ನೋಡಿಕೊಳ್ಳೋಕೂ ಸೋಮಾರಿತನ. ಅದರಲ್ಲೂ ಅವನಿಗೆ ಮದ್ವೆ ಅಂದರೆ ಅಲರ್ಜಿ. ಹೀಗಿರುವಾಗಲೇ, ತಂದೆ-ತಾಯಿ ಜೊತೆ ಇಂಡಿಯಾಗೆ ಬರುತ್ತಾನೆ. ಕಾರ್ಯಕ್ರಮವೊಂದರಲ್ಲಿ ನಾಯಕಿಯನ್ನು ನೋಡಿ ಫಿದಾ ಆಗುತ್ತಾನೆ.
ಆಕೆಯನ್ನು ಒಲಿಸಿಕೊಳ್ಳೋಕೆ ಡ್ರಾಮಾ ಶುರುಮಾಡುತ್ತಾನೆ. ಸುಳ್ಳುಗಳ ಮನೆಕಟ್ಟಿ ಆಕೆಯನ್ನು ಒಲಿಸಿಕೊಳ್ತಾನೆ. ಮದ್ವೆ ಆಗಲು ಹೊರಟಾಗ, ಅಲ್ಲೊಂದು ದೊಡ್ಡ ಘಟನೆ ನಡೆಯುತ್ತೆ. ಆ ಘಟನೆ ಏನೆಂಬ ಕುತೂಹಲವಿದ್ದರೆ ಸಿನಿಮಾ ನೋಡಬಹುದು. ಸೃಜನ್ ಡೈಲಾಗ್ ಹರಿಬಿಡುವುದರಲ್ಲಿ ಇಷ್ಟವಾಗುತ್ತಾರೆ. ಬಿಲ್ಡಪ್‌ಗೆಂದು ಇಟ್ಟಿರುವ ಸ್ಟಂಟ್ಸ್‌ನಲ್ಲಿ ಅಷ್ಟೊಂದು ಗಮನಸೆಳೆಯಲ್ಲ. ಆದರೂ, ನಗಿಸಲು ಹಿಂದುಳಿದಿಲ್ಲ.
ಹರಿಪ್ರಿಯಾ, ಗ್ಲಾಮರ್ ಜೊತೆ, ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ತಾರಾ, ಅವಿನಾಶ್, ಸಾಧು, ತಬಲಾನಾಣಿ, “ತರಂಗ’ ವಿಶ್ವ, ಗಿರಿ ಸೇರಿದಂತೆ ಬರುವ ಪಾತ್ರಗಳು ಚಿತ್ರದ ವೇಗಕ್ಕೆ ಸಾಧ್ಯವಾದಷ್ಟು ಹೆಗಲು ಕೊಟ್ಟಿವೆ. ಅರ್ಜುನ್ ಜನ್ಯ ಸಂಗೀತದಲ್ಲಿ ಒಂದು ಹಾಡಷ್ಟೇ ಪರವಾಗಿಲ್ಲ. ಹಿನ್ನೆಲೆ ಸಂಗೀತದಲ್ಲೂ ಹೇಳಿಕೊಳ್ಳುವಂತಹ “ಮಜ’ವಿಲ್ಲ. ಹೆಚ್.ಸಿ. ವೇಣು ಛಾಯಗ್ರಹಣ ಅಂದವನ್ನು ಹೆಚ್ಚಿಸಿದೆ.
ಚಿತ್ರ: ಎಲ್ಲಿದ್ದೆ ಇಲ್ಲೀ ತನಕನಿರ್ಮಾಣ: ಲೋಕೇಶ್ ಪ್ರೊಡಕ್ಷನ್ಸ್
ನಿರ್ದೇಶನ: ತೇಜಸ್ವಿ
ತಾರಾಗಣ: ಸೃಜನ್ ಲೋಕೇಶ್, ಹರಿಪ್ರಿಯಾ, ತಾರಾ, ಅವಿನಾಶ್, ಗಿರಿಜಾ ಲೋಕೇಶ್, ತಬಲನಾಣಿ, ಸಾಧುಕೋಕಿಲ ಇತರರು. * ವಿಜಯ್ ಭರಮಸಾಗರ