ನನ್ನ ಕಂತ್ರಿ ಬುದ್ಧಿ ಶುರುವಾಗುವುದು ಬೈಕಿನ ಕನ್ನಡಿಯನ್ನು ನಿನ್ನ ಮುಖಕ್ಕೆ ನಿಲುಕಿಸುವ ಮೂಲಕ! ಅದುವರೆಗೂ ಕೋಪದಲ್ಲಿದ್ದ ನೀನು ಒಮ್ಮೆಲೇ ನಾಚಿ, ನಕ್ಕು ಬೇರೆ ಕಡೆಗೆ ಮುಖ ಹೊರಳಿಸಿಬಿಟ್ಟರೆ, ನನ್ನೆಲ್ಲ ತುಂಟ ಕೃತ್ಯಗಳು ಸರಾಗವಾಗುವುದೆಂಬ ವಿಶ್ವಾಸ ಮೂಡುತ್ತದೆ…
ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳನ್ನು ನೋಡೋದು ನಿನಗೆಷ್ಟು ಇಷ್ಟ ಅಂತ ನನಗೆ ಗೊತ್ತು. ಯೌವ್ವನದ ಹೊಸ್ತಿಲಲ್ಲಿರುವ ಸುಂದರಿಯಂತೆ, ಮಂಜಿನ ಶಾಲನ್ನೇ ದೃಷ್ಟಿ ಬೊಟ್ಟಾಗಿಸಿಕೊಂಡ ಆ ಅದ್ಭುತ ಹಾದಿಯಲ್ಲಿ ನಿನ್ನ ಜೊತೆ ಬೈಕ್ ರೈಡ್ ಹೋಗೋದು ನನ್ನ ನಿತ್ಯದ ಕನಸು. ನನ್ನೊಂದಿಗೆ ಬೈಕ್‌ನಲ್ಲಿ ಕೂರುವ ಆಸೆ ನಿನಗೂ ಆಗುತ್ತದೆ. ಆದರೂ, ಅದನ್ನು ತೋರ್ಪಡಿಸಿ, ಸೋಲೊಪ್ಪುವ ಹುಡುಗಿಯಂತೂ ನೀನಲ್ಲ ಬಿಡು! ಆ ಬೇಡಿಕೆ ನನ್ನಿಂದಲೇ ಬರಬೇಕು. ಒಂದೊಮ್ಮೆ ನಾನೇ ಸೋಲೊಪ್ಪಿ “ಎಲ್ಲಿಗಾದ್ರೂ ಹೋಗಿ ಬರೋಣಾÌ?’ ಅಂತ ಕೇಳಿದರೂ, ಒಪ್ಪಿಗೆಯ ಪ್ರಮಾಣಪತ್ರಕ್ಕೆ “ಪ್ಲೀಸ್ ಪುಟ್ಟ’, “ಮತ್ತೆ ಕೇಳಲ್ಲ’, “ಪ್ಲೀಸ್ ಕಣೋ, ಒಮ್ಮೆ ಹೋಗೋಣ’ ಎಂದೆಲ್ಲ ತಲೆಬಾಲ ಸೇರಿಸಲೇಬೇಕು. ಆಗಲೇ ಆ ಪ್ರಸ್ತಾವನೆಗೆ ನಿನ್ನ ಅಂಕಿತ ಬೀಳುವುದು.
ಒಪ್ಪಿಗೆಯ ಬಳಿಕ, ಹೊರಡುವ ಹಿಂದಿನ ದಿನದ ನಿನ್ನ ತಯಾರಿ ನನಗೆ ಗೊತ್ತಿಲ್ವಾ? ನಿನಗೋ, ಆ ದಿನ ಊರ ಜಾತ್ರೆಯಷ್ಟೇ ಸಂಭ್ರಮ. ಮಾರನೇ ದಿನ ನಡೆಯಬಹುದಾದ ಘಟನೆಗಳ ಬಗೆಗೆ ಪುಳಕ. ನಾನು ಯಾವ ಬಣ್ಣದ ಶರ್ಟು ಹಾಕಬಹುದೆಂದು ತಲೆಕೆಡಿಸಿಕೊಂಡು, ಕೊನೆಗೆ ಒಂದು ಊಹೆಯ ಮೇರೆಗೆ ನಿನ್ನ ಡ್ರೆಸ್ಸಿನ ಬಣ್ಣದ ಆಯ್ಕೆ. ನಿನ್ನ ಲೆಕ್ಕ ತಾಳೆಯಾದರೆ ನಾ ಉಳಿವೆ, ಇಲ್ಲಾ ಇನ್ನೊಂದು ವಾರದ ಕೋಳಿಜಗಳಕ್ಕೆ ಅದೇ ಕಥಾವಸ್ತು!
ಮಾರನೆದಿನ ನೀನು, ನನ್ನ ಭುಜದ ಮೇಲೊಂದು ಕೈಯಿಟ್ಟು ಕೂತು, ಮುನ್ನಡೆಯಲು ಸೂಚನೆ ನೀಡಿದ ಮೇಲೆ ಬೈಕ್‌ಗೊಂದು ಜೋಶ್ ಬರುವುದು. ಆಗ ಈ ಮನಸ್ಸು ಬೇಡುವುದು ಒಂದನ್ನೇ; “ಕೈ ಮಾತ್ರ ತೆಗೀಬೇಡ ಕಣೇ’. ಹೃದಯಕ್ಕೊಂದಿಷ್ಟು ಅಹಂಕಾರದ ಬಲೆ ಸುತ್ತಿಕೊಳ್ಳುವುದೂ ಆಗಲೇ! ಇನ್ನೇನು ಖುಷಿಯಿಂದ ನಗಬೇಕು ಎನ್ನುವಷ್ಟರಲ್ಲಿ ಕೈ ಹಿಂದಕ್ಕೆ ತೆಗೆದು, ಹಿಂದಕ್ಕೆ ಸರಿದು ಕೂರುವ ನೀನು “ಜಾಸ್ತಿ ಖುಷಿ ಪಡ್ಬೇಡ, ನಾನು ಅಂಟಿ ಕೂರೋಕೆ ಬಂದಿದ್ದಲ್ಲ’ ಎನ್ನುವ ಸ್ಪಷ್ಟ ಸಂದೇಶ ನೀಡಾಗಿರುತ್ತೆ. ಕಳೆದ ಬಾರಿಯ ಜಗಳದ ದೋಷಾರೋಪ ಪಟ್ಟಿಯ ವಿಮರ್ಶೆ, ಆ ಸಿಡಿನುಡಿಗೆ ನನ್ನ ಹೂಂಗುಟ್ಟುವಿಕೆಯ ಉತ್ತರದ ನಂತರ ನನ್ನ ಕಪಿಚೇಷ್ಟೆ ಶುರು!
ನನ್ನ ಕಂತ್ರಿಬುದ್ಧಿ ಶುರುವಾಗುವುದು ಬೈಕಿನ ಕನ್ನಡಿಯನ್ನು ನಿನ್ನ ಮುಖಕ್ಕೆ ನಿಲುಕಿಸುವ ಮೂಲಕ! ಅದುವರೆಗೂ ಕೋಪದಲ್ಲಿದ್ದ ನೀನು ಒಮ್ಮೆಲೇ ನಾಚಿ, ನಕ್ಕು ಬೇರೆ ಕಡೆಗೆ ಮುಖ ಹೊರಳಿಸಿಬಿಟ್ಟರೆ, ನನ್ನೆಲ್ಲ ತುಂಟ ಕೃತ್ಯಗಳು ಸರಾಗವಾಗುವುದೆಂಬ ವಿಶ್ವಾಸ ಮೂಡುತ್ತದೆ. ಸಣ್ಣಪುಟ್ಟ ಹೊಂಡಗುಂಡಿಗಳಿಗೂ ಹಠಾತ್ತನೆ ಬ್ರೇಕು ಹಾಕಿ ಬೈಸಿಕೊಳ್ಳುವುದು ಅಥವಾ ನಯನಾಜೂಕಿನ ಪೆಟ್ಟು ತಿನ್ನುವುದು ನನ್ನಿಷ್ಟದ ಮೆಚ್ಚಿನ ಕುಚೇಷ್ಟೆ! ಬೇಕಂತಲೇ ಹಿಂದಕ್ಕೆ ಸರಿಯುವುದು, ಆಗೊಮ್ಮೆ ಈಗೊಮ್ಮೆ ಪೋಲಿ ಮಾತಾಡುವುದು.. ಹೀಗೆ ಹಿಂಬದಿಯಿಂದ ಒಂದು ಅಪ್ಪುಗೆ ಪಡೆಯಲು ನಾ ಮಾಡುವ ಯತ್ನಗಳು ಅಪಾರ.
ಆ ದಿನದ ಆರಂಭದಲ್ಲಿ ಎಷ್ಟು ಸಂಭ್ರಮವಿರುತ್ತದೋ, ಅಂತ್ಯ ಅಷ್ಟೇ ನೋವಿನಿಂದ ಕೂಡಿರುತ್ತದೆ. ನೇಸರನ ಒಂದೊಂದು ಇಂಚಿನ ಮುಳುಗುವಿಕೆಗೂ ಹೃದಯ ಕಾರಣ ಹೇಳದೆ ಅಳುವ ಮಗುವಿನಂತಾಗುತ್ತದೆ. ಗಾಳಿಗೆ ನಿನ್ನ ಕೂದಲ ಹಾರಾಟ, ಭುಜದ ಮೇಲಿಟ್ಟ ಕೈ, ಕೋಪದ ನಾಟಕ.. ಎಲ್ಲವೂ ಸೇರಿ ಆ ದಿನವನ್ನು ಇನ್ನಷ್ಟು ಭಾವನಾತ್ಮಕವಾಗಿಸುತ್ತದೆ. ನಿನ್ನೊಂದಿಗಿನ ಈ ಪುಟ್ಟ ರೈಡು, ಸಂತೋಷದ ಚಿಲುಮೆ ಹರಿಸುತ್ತ ಪ್ರೀತಿಯ ಕಡಲನ್ನು ಮತ್ತಷ್ಟು ಸನಿಹವಾಗಿಸುತ್ತದೆ. ಇಂಥ ಇನ್ನೊಂದು ಪಯಣಕ್ಕೆ ಹೃದಯ ಹಪಹಪಿಸುತ್ತಿದೆ, ಯಾವಾಗ ಸಿಗ್ತಿಯ? ಜಾಸ್ತಿ ಚೇಷ್ಟೆ ಮಾಡಲ್ಲ, ಪ್ರಾಮಿಸ್!
ಅರ್ಜುನ್ ಶೆಣೈ