ಮಂಡ್ಯ: ಸಕ್ಕರೆ ಕಾರ್ಖಾನೆಯ 2013-14ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ ಮಂಡನೆ ಹಾಗೂ ಷೇರುದಾರರ 80ನೇ ವಾರ್ಷಿಕ ಸಾಮಾನ್ಯ ಸಭೆ ಆನ್‌ಲೈನ್ ವಿಡಿಯೋ ಸಂವಾದ ಕಾಟಾಚಾರಕ್ಕೆ ಎಂಬಂತೆ ಆಯೋಜಿಸಲಾಗಿತ್ತು. ಅಸ್ಪಷ್ಟ ಮಾತುಗಳು, ದೃಶ್ಯಗಳಿಂದ ಇಡೀ ಸಭೆ ಗೊಂದಲ ದಲ್ಲಿ ಮುಳುಗಿತ್ತು. ಅವ್ಯವಸ್ಥೆ ವಿರುದ್ಧ ರೈತರು, ಷೇರುದಾರರು ಆಕ್ರೋಶ ವ್ಯಕ್ತಪಡಿಸಿ ದರು. ಪರಿಣಾಮ ಯಾವುದೇ ನಿರ್ಧಾರವಿಲ್ಲದೆ ಸಭೆ ಅರ್ಧಕ್ಕೆ ಮೊಟಕುಗೊಂಡಿತು. ಸೋಮವಾರ ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ 11.15ಕ್ಕೆ ಪ್ರಾರಂಭವಾಯಿತು.
ಕಾರ್ಖಾನೆ ಅಧ್ಯಕ್ಷ ಎಂ.ಮಹೇಶ್ವರರಾವ್ ನೇತೃತ್ವದಲ್ಲಿ 3 ಕಡೆ ವಿಡಿಯೋ ಸಂವಾದ ಏರ್ಪಡಿಸಲಾಗಿತ್ತು. ಬೆಂಗಳೂರು ಪ್ರಧಾನ ಕಚೇರಿ, ಮೈಷುಗರ್ ಆವರಣ ಹಾಗೂ ಮೈಷುಗರ್ ಪ್ರೌಢಶಾಲೆಯಲ್ಲಿ ವಿಡಿಯೋ ಸಂವಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೈಷುಗರ್ ಕಾರ್ಖಾನೆ ವ್ಯಾಪ್ತಿಯಲ್ಲಿ 14 ಸಾವಿರ ಷೇರುದಾರರಿದ್ದು, ಈ ಪೈಕಿ ಕೇವಲ 150 ಜನರಿಗೆ ಮಾತ್ರ ಸಭೆಗೆ ಅವಕಾಶವಿತ್ತು. ಕಂಪನಿಯ ಆವರಣದಲ್ಲಿ 50 ಷೇರುದಾರರು ಹಾಗೂ ಮೈಷುಗರ್ ಪ್ರೌಢಶಾಲೆ ಆವರಣ ದಲ್ಲಿ 100 ಷೇರುದಾರರು ಭಾಗವಹಿಸಿದ್ದರು.
ಧ್ವನಿ ಅಸ್ಪಷ್ಟ: ಸಭೆ ಆರಂಭವಾಗುತ್ತಿದ್ದಂತೆ ಕಾರ್ಖಾನೆ ಅಧ್ಯಕ್ಷ ಎಂ.ಮಹೇಶ್ವರರಾವ್ 2013-14ನೇ ಸಾಲಿನ ವಾರ್ಷಿಕ ಲೆಕ್ಕ ಮಂಡಿಸಲು ಆರಂಭಿಸಿದರು. 3 ಕಡೆ ಸಂವಾದದಲ್ಲಿ ಯಾವ ಕಡೆ ಯಾರು ಮಾತನಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಅಧಿಕಾರಿಗಳಿಂ ದ ಹಿಡಿದು ಷೇರುದಾರರು ಮಾತುಗಳು ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ. ಧ್ವನಿ ಹಾಗೂ ಎಲ್ ಇಡಿ ಟಿವಿಯಲ್ಲಿನ ದೃಶ್ಯಗಳು ಅಸ್ಪಷ್ಟವಾಗಿದ್ದ ರಿಂದ ಇಡೀ ಸಭೆ ಗೊಂದಲದ ಗೂಡಾಯಿತು.
ಆಕ್ರೋಶ, ಸಭೆ ರದ್ದಿಗೆ ಆಗ್ರಹ: ನೀವು ಮಾತನಾಡುವುದು ಯಾರಿಗೂ ತಿಳಿಯುತ್ತಿಲ್ಲ. ಈ ಸಭೆಯನ್ನು ರದ್ದು ಮಾಡಿ, ನೇರವಾಗಿಯೇ ಎಲ್ಲ ಷೇರುದಾರರು, ರೈತರನ್ನು ಒಂದೆಡೆ ಸೇರಿಸಿ ಸಭೆ ನಡೆಸುವಂತೆ ರೈತ ನಾಯಕಿ ಸುನಂದಜಯರಾಂ, ಸಿ.ಕುಮಾರಿ, ಕೆ.ಬೋರಯ್ಯ, ಎಂ.ಬಿ.ಶ್ರೀನಿವಾಸ್, ಮುದ್ದೇಗೌಡ ಸೇರಿದಂತೆ ಎಲ್ಲರೂ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಕಾಟಾಚಾರದ ಸಂವಾದ ಬೇಕಾಗಿಲ್ಲ.
ಕೂಡಲೇ ಸಭೆ ರದ್ದು ಪಡಿಸುವಂತೆ ಆಗ್ರಹಿಸಿ ಧಿಕ್ಕಾರದ ಘೋಷಣೆ ಗಳೊಂದಿಗೆ ಹೊರನಡೆದರು. ಸಭೆಯ ನಂತರ ಒ ಅಂಡ್ ಎಂಗೆ ವಹಿಸುವ ವಿಚಾರದಲ್ಲಿ ಅಭಿಪ್ರಾಯ ಸಂಗ್ರಹ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ, ಸಭೆ ಮೊಟಕುಗೊಂಡಿದ್ದರಿಂದ ಆ ಪ್ರಕ್ರಿಯೆ ಯೂ ಸ್ಥಗಿತಗೊಂಡಿತು. ಗೊಂದಲದಿಂದ ಮಹೇಶ್ವರರಾವ್ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ರೈತರ ನಿರೀಕ್ಷೆ ಹುಸಿ: ರೈತರು ಕಾರ್ಖಾನೆ ಯನ್ನು ಒ ಅಂಡ್ ಎಂ ಮೂಲಕ ಚಾಲನೆ ನೀಡುವ ಕುರಿತು ತಮ್ಮ ಅಭಿಪ್ರಾಯ ಮಂಡಿಸಲು ಆಗಮಿಸಿದ್ದರು. ಸಭೆಯ ಮಧ್ಯದಲ್ಲೂ ಕೆಲವು ರೈತರು ಲೆಕ್ಕಪತ್ರ ಮಂಡಿಸುವುದನ್ನು ಬಿಟ್ಟು ಕಾರ್ಖಾನೆ ಯಾವಾಗ ಪ್ರಾರಂಭ ಮಾಡುತ್ತೀರಾ ಎಂಬ ಪ್ರಶ್ನೆಗಳನ್ನು ತೂರಿ ಬಿಟ್ಟರು. ಆ ಪ್ರಶ್ನೆಗಳಿಗೆ ಯಾವುದೇ ಉತ್ತರ ಗಳು ಅಧಿಕಾರಿ ವರ್ಗದಿಂದ ಸಿಗಲೇ ಇಲ್ಲ.
ಪೊಲೀಸ್ ಬಿಗಿ ಭದ್ರತೆ: ಯಾವುದೇ ಅಹಿತ ಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.