ಅದು ಹೊಸ ವರ್ಷದ ದಿನ. ಅಲ್ಲೊಂದು ರೆಸಾರ್ಟ್‌ನಲ್ಲಿ ಒಂದು ಕೊಲೆಯಾಗುತ್ತೆ. ಆಮೇಲೇನಾಗುತ್ತೆ ಅನ್ನೊದೇ ಸಸ್ಪೆನ್ಸ್. ಕೇವಲ ಹತ್ತು ನಿಮಿಷದಲ್ಲಿ ನಡೆಯುವ ಘಟನೆಯನ್ನಿಟ್ಟುಕೊಂಡು ಒಂದು ಥ್ರಿಲ್ಲರ್ ಸಿನಿಮಾ ಮಾಡಲಾಗಿದೆ. ಅಷ್ಟೇ ಆಗಿದ್ದರೆ, ಇಷ್ಟೊಂದು ಹೇಳುವ ಅಗತ್ಯವಿರುತ್ತಿರಲಿಲ್ಲ. ಸಿನಿಮಾ ಅಂದಮೇಲೆ ಮಾತುಕತೆ ಸಹಜ. ಆದರೆ, ಇಲ್ಲಿ ಕೇಳಿಬರುವ ಸಂಭಾಷಣೆ ಕೇವಲ ಇಪ್ಪತ್ತು ನಿಮಿಷಗಳದ್ದಷ್ಟೇ!
ಹೌದು, ಇಂಥದ್ದೊಂದು ಹೊಸ ಪ್ರಯತ್ನ “ಉದ್ಘರ್ಷ’ ಚಿತ್ರದಲ್ಲಾಗಿದೆ. ಇದು ಸುನೀಲ್‌ಕುಮಾರ್ ದೇಸಾಯಿ ಅವರ ನಿರ್ದೇಶನದ ಚಿತ್ರ. ಎರಡು ವರ್ಷದ ನಂತರ ನಿರ್ದೇಶನಕ್ಕಿಳಿದಿರುವ ಸುನೀಲ್ ಕುಮಾರ್ ದೇಸಾಯಿ, ಈ ಬಾರಿ ಹೊಸತನದ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾಗಳನ್ನು ಮಾಡುವಲ್ಲಿ ದೇಸಾಯಿ ಎತ್ತಿದ ಕೈ.
ಆ ಸಾಲಿಗೆ “ಉದ್ಘರ್ಷ’ ಹೊಸ ಸೇರ್ಪಡೆ ಎನ್ನಬಹುದು. ಕೇವಲ ಇಪ್ಪತ್ತು ನಿಮಿಷಗಳಷ್ಟೇ ಚಿತ್ರದಲ್ಲಿ ಸಂಭಾಷಣೆ ಇಟ್ಟುಕೊಂಡು ಎರಡು ತಾಸಿನವರೆಗೆ ಪ್ರೇಕ್ಷಕರನ್ನು ಕೂರಿಸುವ ಸಾಹಸ ಮಾಡಲು ಹೊರಟಿರುವ ದೇಸಾಯಿ ಅವರಿಗೆ “ಉದ್ಘರ್ಷ’ ಚಿತ್ರದ ಮೇಲೆ ಎಲ್ಲಿಲ್ಲದ ನಂಬಿಕೆ. ಈಗಾಗಲೇ ಬಿಡುಗಡೆಯಾದ ಚಿತ್ರದ ಪೋಸ್ಟರ್ ಜೋರು ಸದ್ದು ಮಾಡಿತ್ತು.
ರಕ್ತ ಅಂಟಿಕೊಂಡ ಹುಡುಗಿಯೊಬ್ಬಳ ಕಾಲನ್ನಷ್ಟೇ ಪೋಸ್ಟರ್‌ನಲ್ಲಿ ಹಾಕಿ ಹರಿಬಿಟ್ಟಿದ್ದ ದೇಸಾಯಿ, ಒಂದಷ್ಟು ಕುತೂಹಲ ಮೂಡಿಸಿದ್ದರು. ಈಗ ಹೊಸದೊಂದು ಪೋಸ್ಟರ್ ಬಿಡುಗಡೆ ಮಾಡಿ, ಮತ್ತಷ್ಟು ಕುತೂಹಲಕ್ಕೆ ಕಾರಣರಾಗಿದ್ದಾರೆ. ಮೊದಲ ಪೋಸ್ಟರ್‌ನಲ್ಲಿ ರಕ್ತ ಕಲೆಯುಳ್ಳ ಹುಡುಗಿ ಕಾಲಿದ್ದರೆ, ಎರಡನೇ ಪೋಸ್ಟರ್‌ನಲ್ಲಿ ಬಟ್ಟೆಯಿಂದ ಕಟ್ಟಿದ ಹುಡುಗನೊಬ್ಬನ ಕೈ ಕಾಣುವ ಭಾವಚಿತ್ರವಿದೆ.
ಜೊತೆಗೆ ಹುಡುಗಿಯೊಬ್ಬಳ ಕೈಯಲ್ಲಿ ಚಾಕು ಹಿಡಿದಿರುವ ಭಾವಚಿತ್ರವೂ ಇದೆ. ಈ ಮೂಲಕ ದೇಸಾಯಿ ಚಿತ್ರದ ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಹಾಗಾದರೆ, ದೇಸಾಯಿ ಚಿತ್ರದ ಪಾತ್ರಧಾರಿಗಳ ಭಾವಚಿತ್ರ ತೋರಿಸುವುದಿಲ್ಲವೇ? ಪ್ರಶ್ನೆ ಎದುರಾಗಬಹುದು. ಮುಂದಿನ ದಿನಗಳಲ್ಲಿ ಬರುವ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್‌ಗಳಲ್ಲಿ ಕೇವಲ ಪಾತ್ರಧಾರಿಗಳ ಕೈ, ಕಾಲು, ಮುಖದ ಛಾಯೆ ಮತ್ತು ಭಯ ಹುಟ್ಟಿಸುವ ಕಣ್ಣುಗಳನ್ನಷ್ಟೇ ಪ್ರಕಟಿಸಿ ನೋಡುಗರ ಕುತೂಹಲ ಹೆಚ್ಚಿಸುವ ಪ್ರಯತ್ನ ಮಾಡಲಿದ್ದಾರೆ.
ಸಿನಿಮಾದಲ್ಲಿ ಯಾರ್ಯಾರಿದ್ದಾರೆ ಅನ್ನುವುದಕ್ಕೆ ಚಿತ್ರದಲ್ಲೇ ಕಾಣಬೇಕೆಂಬ ಬಯಕೆ ನಿರ್ದೇಶಕರದ್ದು. ದೇಸಾಯಿ ಈ ಸಲ ಬಿಡುಗಡೆ ಮುನ್ನವೇ ತಮ್ಮ ಚಿತ್ರ ಒಂದಷ್ಟು ಸುದ್ದಿಯಾಗಬೇಕು ಅಂತ ನಿರ್ಧರಿಸಿದ್ದಾರೆ. ಆ ಕಾರಣಕ್ಕೆ ಅವರು ವಿಭಿನ್ನವಾದಂತಹ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಕಥೆ ಮತ್ತು ಪಾತ್ರಗಳ ಬಗ್ಗೆ ಕುತೂಹಲ ಕೆರಳಿಸುವ ಕೆಲಸ ಮಾಡಿದ್ದಾರೆ.
ಅಂದಹಾಗೆ, “ಉದ್ಘರ್ಷ’ ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ಠಾಕೂರ್ ಅನೂಪ್ ಸಿಂಗ್, ಧನ್ಸಿಕಾ, ತಾನ್ಯಾ ಹೋಪ್, ಕಬೀರ್‌ಸಿಂಗ್ ದುಹಾನ್, ಪ್ರಭಾಕರ್, ಶ್ರದ್ಧಾ ದಾಸ್, ಹರ್ಷಿಕಾ ಪೂಣಚ್ಚ ಸೇರಿದಂತೆ ಇತರರು ನಟಿಸಿದ್ದಾರೆ. ಹೈದರಾಬಾದ್, ಕೇರಳ, ಮಡಿಕೇರಿ, ಬೆಂಗಳೂರಿನಲ್ಲಿ ಚಿತ್ರೀಕರಣವಾಗಿದೆ. ಈ ಚಿತ್ರ ಕನ್ನಡ, ತೆಲುಗು, ತಮಿಳಿನಲ್ಲೂ ತಯಾರಾಗಿದ್ದು, ಏಕಕಾಲದಲ್ಲಿ ಬಿಡುಗಡೆಯಾಗಲಿದೆ.