Advertisement

ಕಾನೂನು ವಿವಿ ಆಯ್ದ ಸೇವೆ ಸೇವಾಸಿಂಧು ವ್ಯಾಪ್ತಿಗೆ

11:19 PM Jan 10, 2020 | Lakshmi GovindaRaj |

ಬೆಂಗಳೂರು: ಇದೇ ಮೊದಲ ಬಾರಿಗೆ ಕಾನೂನು ಇಲಾಖೆ ವ್ಯಾಪ್ತಿಯ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಆಯ್ದ ಸೇವೆಗಳನ್ನು ಸೇವಾಸಿಂಧು ಯೋಜನೆ ವ್ಯಾಪ್ತಿಗೆ ತರಲಾಗಿದ್ದು, ವಿದ್ಯಾರ್ಥಿಗಳು ಆಯ್ದ ಸೇವೆಗಳನ್ನು ಬೆರಳ ತುದಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

Advertisement

ವಿಧಾನಸೌಧದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಜ್ಯದಲ್ಲಿ 106 ಕಾನೂನು ಕಾಲೇಜುಗಳಿದ್ದು, ಕಾನೂನು ವಿವಿಗಳ ಆಯ್ದ ಸೇವೆಗಳನ್ನು ಸೇವಾಸಿಂಧು ಸೇವೆಯಡಿ ಅಳವಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳ ಅನಗತ್ಯ ಓಡಾಟ, ವಿಳಂಬವನ್ನು ತಪ್ಪಿಸಲು ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿವೆ. ವಿದ್ಯಾರ್ಥಿ ಗಳು ಬಯಸಿದ ಸೇವೆ, ದಾಖಲೆಗಳಿಗೆ ಬೆರಳ ತುದಿಯಲ್ಲಿ ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಆಯ್ದ ಸೇವೆ ಪಡೆಯಲು ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಲು ಇದರಿಂದ ಅನುಕೂಲ ವಾಗಲಿದೆ. ದಾಖಲೆಗಳನ್ನು ಪಡೆಯುವ ಪ್ರಕ್ರಿಯೆಯನ್ನು ಸಾಕಷ್ಟು ಸರಳಗೊಳಿಸಲಾಗಿದೆ ಎಂದರು. ಹಾಗೆಯೇ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಂತರ್ಜಲ ನಿರ್ದೇಶನಾಲಯದ ಮೂರು ಸೇವೆಗಳನ್ನು ಸೇವಾ ಸಿಂಧು ಯೋಜನೆ ವ್ಯಾಪ್ತಿಗೆ ತರಲಾಗಿದೆ.

ಬಾವಿ ಅಥವಾ ಕೊಳವೆ ಸ್ಥಳ ಆಯ್ಕೆಗೆ ಭೂಭೌತಿಕ ವಿಧಾನಕ್ಕೆ 1000 ರೂ. ಹಾಗೂ ಭೂವೈಜ್ಞಾನಿಕ ವಿಧಾನಕ್ಕೆ 2,000 ರೂ. ಶುಲ್ಕ ಪಾವತಿಸಿ ಪಡೆಯಬಹುದು. ನಾಗರಿಕ ಸೇವಾ ಕೇಂದ್ರ ಸೇರಿ ಇತರೆ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ಆನ್‌ಲೈನ್‌ನಲ್ಲಿ ಶುಲ್ಕ ಪಾವತಿಸಬಹುದು. ಬಳಿಕ ನಿಗದಿತ ದಿನಾಂಕ ನೀಡಿ ಸಮೀಕ್ಷೆ ನಡೆಸಿ ಸೇವೆ ಒದಗಿಸಲಾಗುತ್ತದೆ ಎಂದು ಹೇಳಿದರು.

“ಸಕಾಲ’ ಯೋಜನೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್‌ ಚಾವ್ಲಾ, ಸೇವಾ ಸಿಂಧು ಯೋಜನೆಯು ಡಿಜಿ ಲಾಕರ್‌ ಜತೆಗೆ ಜೋಡಣೆಯಾಗಿದೆ. ಸೇವಾ ಸಿಂಧು ಯೋಜನೆ ಯಡಿ 354 ಸೇವೆ ಪಡೆಯ ಬಹುದಾಗಿದೆ. ಸಾಕಷ್ಟು ಮಂದಿ ಡಿಜಿ ಲಾಕರ್‌ ಸೇವೆ ಬಳಸುತ್ತಿಲ್ಲ. ಹಾಗಾಗಿ ಅರ್ಜಿ ಸಲ್ಲಿಸಿದಾಗ ಸ್ವಯಂ ಪ್ರೇರಿತವಾಗಿ ಡಿಜಿ ಲಾಕರ್‌ ತೆರೆಯಲಾಗುತ್ತದೆ.

Advertisement

ಬಳಿಕ ಅರ್ಜಿ ಸಲ್ಲಿಸಿದರೆ ನಿರ್ದಿಷ್ಟ ಸೇವೆಯು ಡಿಜಿ ಲಾಕರ್‌ಗೆ ವರ್ಗಾವಣೆಯಾಗಿ ಅರ್ಜಿ ದಾರರಿಗೆ ಲಭ್ಯವಾಗಲಿದೆ. ಆಯ್ದ ಇಲಾಖೆಗಳ ಹಾಲಿ ದಾಖಲೆಗಳು ಡಿಜಿ ಲಾಕರ್‌ನಲ್ಲಿ ದಾಖಲಾಗಿರದ ಕಾರಣ ಸೇವೆಯಲ್ಲಿ ವ್ಯತ್ಯಯವಾಗಿರಬಹುದು. ಆದರೆ ಈಗ ಸೇರ್ಪಡೆ ಮಾಡಿರುವ ಸೇವೆಗಳ ಎಲ್ಲ ದಾಖಲೆಯೂ ಲಭ್ಯವಿರಲಿದೆ ಎಂದು ಹೇಳಿದರು.

ಸೇವಾ ಸಿಂಧುವಿನಲ್ಲಿ ಲಭ್ಯವಿರುವ ಸೇವೆ
ರಾಜ್ಯ ಕಾನೂನು ವಿವಿ (ಕಾನೂನು ಇಲಾಖೆ): ಅರ್ಹತಾ ಪ್ರಮಾಣ ಪತ್ರ, ವಲಸೆ ಪ್ರಮಾಣ ಪತ್ರ, ಕಾಲೇಜು ಬದಲಾವಣೆ, ಪದವಿ ಪ್ರಮಾಣ ಪತ್ರ, ಎಸ್‌ಎಸ್‌ಎಲ್‌ಸಿ/ ಪಿಯುಸಿ ಅನ್ವಯ ಅಂಕಪಟ್ಟಿ ತಿದ್ದುಪಡಿ, ವಿದ್ಯಾರ್ಥಿ ದಾಖಲೆಗಳ ಅಧಿಕೃತ ಪ್ರತಿಲೇಖನಕ್ಕಾಗಿ ಅರ್ಜಿ, ಪ್ರಮಾಣಪತ್ರಗಳ ಸಾಚಾತನ ಪರಿಶೀಲನೆಗಾಗಿ ಅರ್ಜಿ, ತಾತ್ಕಾಲಿಕ ಪದವಿ ಪ್ರಮಾಣ ಪತ್ರ (ಪಿಡಿಸಿ), ನಕಲು ತಾತ್ಕಾಲಿಕ ಪದವಿ ಪ್ರಮಾಣ ಪತ್ರ (ಪಿಡಿಸಿ), ಪದವಿ ಪ್ರಮಾಣ ಪತ್ರದ ನಕಲು ಪ್ರತಿ, ಅಂಕ ಪಟ್ಟಿಗಳ ನಕಲು ಪ್ರತಿ, ಉತ್ತೀರ್ಣ ಪ್ರಮಾಣ ಪತ್ರ, ಉತ್ತೀರ್ಣ ಪ್ರಮಾಣ ಪತ್ರದ ನಕಲು ಪ್ರತಿ, ಎಸ್‌ಎಸ್‌ಎಲ್‌ಸಿ- ಪಿಯುಸಿ ಅಂಕಪಟ್ಟಿ ಆಧರಿಸಿ ಜಾತಿ ಪ್ರಮಾಣಪತ್ರ- ಜನ್ಮದಿನಾಂಕ ತಿದ್ದುಪಡಿ ಅರ್ಜಿ.

ಅಂತರ್ಜಲ ನಿರ್ದೇಶನಾಲಯ (ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ): ಅಂತರ್ಜಲ ರಾಸಾಯನಿಕ ವಿಶ್ಲೇಷಣೆ, ಭೂಭೌತಿಕ ವಿಧಾನದಿಂದ ಬಾವಿ ಅಥವಾ ಕೊಳವೆ ಬಾವಿ ಸ್ಥಳ ಆಯ್ಕೆಗೆ ತಾಂತ್ರಿಕ ಸಲಹೆ, ಭೂವೈಜ್ಞಾನಿಕ ವಿಧಾನದಿಂದ ಬಾವಿ ಅಥವಾ ಕೊಳವೆ ಬಾವಿ ಸ್ಥಳ ಆಯ್ಕೆಗೆ ತಾಂತ್ರಿಕ ಸಲಹೆ.

Advertisement

Udayavani is now on Telegram. Click here to join our channel and stay updated with the latest news.

Next