ಬೆಂಗಳೂರು: ಕನ್ನಡಿಗರ ʼರಾಜಕುಮಾರʼ ಡಾ.ಪುನೀತ್ ರಾಜ್ ಕುಮಾರ್ (Dr. Puneeth Rajkumar) ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲ. ಆದರೆ ಅವರನ್ನು ಪ್ರತಿದಿನವೂ ಅವರ ಅಭಿಮಾನಿಗಳು ನೆನೆಯುತ್ತಲೇ ಇದ್ದಾರೆ. ʼಅಪ್ಪುʼ ಅಮರವೆಂದು ಹೇಳುತ್ತಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಜೊತೆ ಈ ಲೋಕದಲ್ಲಿ ಇಲ್ಲದಿದ್ರೂ ಅವರು ಕಲಿಸಿಕೊಟ್ಟ ಜೀವನ ಪಾಠ, ನೀತಿ ನಿಯಮಗಳು ಇಂದಿಗೂ ಅನೇಕರಿಗೆ ಸ್ಪೂರ್ತಿಯಾಗಿದೆ. ʼಅಪ್ಪುʼ ಇಲ್ಲದಿದ್ರೂ ಅಭಿಮಾನಿಗಳು ಅವರನ್ನು ದೇವರಂತೆ ಪೂಜಿಸುತ್ತಿರುವುದನ್ನು ಮಾತ್ರ ಕಡಿಮೆ ಮಾಡಿಲ್ಲ.
ಪುನೀತ್ ರಾಜ್ ಕುಮಾರ್ ಅವರ ಸಿನಿಮಾಗಳ ರೀ – ರಿಲೀಸ್ ಆದರೆ ಇಂದಿಗೂ ಸಾಲುಗಟ್ಟಿ ಥಿಯೇಟರ್ ನಲ್ಲಿ ನಿಂತು ಟಿಕೆಟ್ ಖರೀದಿಸುವ ಬೃಹತ್ ಅಭಿಮಾನಿಗಳು ಅವರಿಗಿದ್ದಾರೆ.
ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯನ್ನು ಹೋಲುವ 7 ಮಂದಿ ಇರುತ್ತಾರಂತೆ. ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವಂತೆ ಕಲಾವಿದನೊಬ್ಬನ ಅಭಿನಯ ಮೂಡಿಬಂದಿದ್ದು, ʼಅಪ್ಪುʼ ಅವರನ್ನು ಮತ್ತೆ ಭೂಲೋಕಕ್ಕೆ ಕರೆತಂದಂತೆ ಕಂಡಿದೆ.
ʼಜೀ ಕನ್ನಡʼ ವಾಹಿನಿಯಲ್ಲಿ ಪ್ರಸಾರ ಕಾಣುವ ʼಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್ʼ ಕಾರ್ಯಕ್ರಮದಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರನ್ನು ಹೋಲುವ ಕಲಾವಿದ ಪ್ರೇಕ್ಷಕರನ್ನು ʼಅಪ್ಪುʼ ಅವರಂತೆ ರಂಜಿಸಿ ತೀರ್ಪುಗಾರರ ಕಣ್ಣಂಚಲಿ ನೀರು ತರಿಸಿದ್ದಾನೆ.
ʼಅಪ್ಪುʼ ಅವರನ್ನೇ ಹೋಲುವ ಧ್ವನಿ, ಡ್ಯಾನ್ಸ್, ಮುಖ, ಅಭಿನಯ; ಯಾರೀತ?: ಕಾಮಿಡಿ ಕಿಲಾಡಿಗಳು ಪ್ರಿಮಿಯರ್ ಲೀಗ್ ಕಾರ್ಯಕ್ರಮದ ಸ್ಕಿಟ್ ವೊಂದರಲ್ಲಿ ಡಾ.ಪುನೀತ್ ರಾಜ್ ಕುಮಾರ್ ಟೈಮ್ ಟ್ರಾವೆಲ್ ಮಾಡಿ ಬಂದರೆ ಹೇಗಿರುತ್ತೆ ಎನ್ನುವ ಕಾನ್ಸೆಪ್ಟ್ ನ್ನು ತೋರಿಸಲಾಗಿದೆ. ಟೈಮ್ ಟ್ರಾವೆಲ್ ನಿಂದ ಡಾ. ಪುನೀತ್ ರಾಜ್ ಕುಮಾರ್ ಮತ್ತೆ ಭೂಲೋಕಕ್ಕೆ ಬರುವುದನ್ನು ತೋರಿಸಲಾಗಿದೆ. ಜೂ. ಅಪ್ಪು ಅವರನ್ನು ನೋಡಿ ಥೇಟ್ ನಿಜವಾದ ಅಪ್ಪು ಮತ್ತೆ ಹುಟ್ಟಿ ಬಂದವರಂತೆ ಕಂಡಿದ್ದು, ಇದನ್ನು ನೋಡಿದ ತೀರ್ಪುಗಾರರು ಹಾಗೂ ವೇದಿಕೆಯಲ್ಲಿದ್ದ ಸ್ಪರ್ಧಿಗಳು ಭಾವುಕರಾಗಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರಂತೆ ಮೂನ್ ವಾಕ್ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಇದಾದ ಬಳಿಕ ಅಪ್ಪು ಅವರ ಸಿನಿಮಾದ ಡೈಲಾಗ್ಸ್ ನ್ನು ಹೇಳಿದ್ದಾರೆ.
ಅಪ್ಪುವನ್ನು ಹೋಲುವ ಹಾವಭಾವದಿಂದ ಪ್ರೇಕ್ಷಕರ ಮನಗೆದ್ದಿರುವ ಈ ಕಲಾವಿದನ ಹೆಸರು ರಾಘವೇಂದ್ರ ಬಸ್ತಿ. ಹಾವೇರಿಯವರಾದ ಇವರು ಡಾ.ರಾಜ್ ಕುಮಾರ್ ಅವರನ್ನೇ ಹೋಲುವ, ಅವರ ಅನುಕರಣೆ ಮಾಡಿ, “ನಮ್ಮೂರ ರಾಜಕುಮಾರ”ಎನ್ನುವ ಖ್ಯಾತಿಯನ್ನು ಗಳಿಸಿರುವ ಕಲಾವಿದ ಅಶೋಕ ಬಸ್ತಿ ಅವರ ಪುತ್ರವೆನ್ನುವುದು ವಿಶೇಷ. ಇವರ ತಂದೆ ಡಾ.ರಾಜ್ ಕುಮಾರ್ ಅವರನ್ನು ಅನುಕರಣೆ ಮಾಡುತ್ತಾರೆ.
ಅಶೋಕ ಬಸ್ತಿ ಅಣ್ಣಾವ್ರ ತದ್ರೂಪ ಆಗಿದ್ದು, ಮಗ ರಾಘವೇಂದ್ರ ಬಸ್ತಿ ಪುನೀತ್ ತದ್ರೂಪವಾಗಿದ್ದಾರೆ.
ವೇದಿಕೆಯಲ್ಲಿ ಅಪ್ಪು ಅವರ ಪಾತ್ರವನ್ನು ಮಾಡಿದ ರಾಘವೇಂದ್ರ ಅವರನ್ನು ಊರಿನಲ್ಲಿ ಜೂ. ಅಪ್ಪುವೆಂದೇ ಕರೆಯುತ್ತಾರೆ. ನಾನಾ ಕಾರ್ಯಕ್ರಮಗಳಲ್ಲಿ ಅವರು ಅಪ್ಪು ಅವರನ್ನು ಅನುಕರಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡುವ ಅವರು, “ನಾನು ಅಶೋಕ್ ಬಸ್ತಿ ಅವರ ಮಗ ಅಂತ ಹೇಳಿದ್ರು. ಕನ್ನಡಕ್ಕೆ ಒಬ್ಬರೇ ಪುನೀತ್ ರಾಜಕುಮಾರ್ ಇದ್ದಾರೆ. ಇವರಿಂದಲೇ ನಾವು ಎರಡು ಹೊತ್ತು ಊಟ ಮಾಡುತ್ತಿದ್ದೇವೆ” ಎಂದು ಹೇಳಿದ್ದಾರೆ.