ಬೆಂಗಳೂರು: ರಾಂಚಿಯಲ್ಲಿ ನಡೆದ ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಕರ್ನಾಟಕದ ಪಾವನಾ ನಾಗರಾಜ್ ಹಾಗೂ ಉನ್ನತಿ ಅಯ್ಯಪ್ಪ ಕ್ರಮವಾಗಿ ಬಂಗಾರದ ಪದಕ ಗೆದ್ದಿದ್ದಾರೆ. ತಾವು ಪಾಲ್ಗೊಂಡಿದ್ದ ಮೊದಲ ರಾಷ್ಟ್ರೀಯ ಕೂಟದಲ್ಲಿ ಚಿನ್ನದ ನಗು ಬೀರಿರುವುದು ವಿಶೇಷ.
ಪಾವನಾಗೆ ದಾಖಲೆ ಚಿನ್ನ: ಶನಿವಾರ ನೆಡೆದ ಕೂಟದ ಎರಡನೇ ದಿನದ ಸ್ಪರ್ಧೆಯಲ್ಲಿ ಖ್ಯಾತ ಹೈಜಂಪ್ ತಾರೆ, ಒಲಿಂಪಿಯನ್ ಸಹನಾ ಕುಮಾರಿ – ಬಿ.ಜಿ.ನಾಗರಾಜ್ ದಂಪತಿಗಳ ಪುತ್ರಿ ಪಾವನಾ 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಹೈಜಂಪ್‌ನಲ್ಲಿ ರಾಷ್ಟ್ರೀಯ ದಾಖಲೆ ಬರೆದರು.
ಒಟ್ಟಾರೆ 1.63 ಮೀ. ಎತ್ತರಕ್ಕೆ ಜಿಗಿದ ಪಾವನಾ ಉತ್ತರ ಪ್ರದೇಶದ ಖ್ಯಾತಿ ಮಾಥುರ್ ಹೆಸರಲ್ಲಿದ್ದ 1.62 ಮೀ. ದಾಖಲೆಯನ್ನು ಅಳಿಸಿ ಹಾಕಿದರು. ಮಾತ್ರವಲ್ಲ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದರು. ಈ ಹಿಂದೆ ಖ್ಯಾತಿ ಕೊಯ ಮತ್ತೂರಿನಲ್ಲಿ ನಡೆದಿದ್ದ ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟದಲ್ಲಿ ಈ ದಾಖಲೆ ನಿರ್ಮಿಸಿದ್ದರು. ಪಾವನಾ ಇತ್ತೀಚೆಗೆ ದಕ್ಷಿಣ ವಲಯ ಅಥ್ಲೆಟಿಕ್ಸ್ ಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದನ್ನು ಸ್ಮರಿಸಬಹುದು.
ಕೊನೆ ಜಂಪ್‌ನಲ್ಲಿ ಉನ್ನತಿಗೆ ಚಿನ್ನ: 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಖ್ಯಾತ ಅಥ್ಲೀಟ್ ಪ್ರಮೀಳಾ ಅಯ್ಯಪ್ಪ- ಬಿ.ಪಿ.ಅಯ್ಯಪ್ಪ ದಂಪತಿಗಳ ಪುತ್ರಿ ಉನ್ನತಿ ಚಿನ್ನದ ಪದಕ ಕೊರಳಿಗೇರಿಸಿಕೊಂಡಿದ್ದಾರೆ.
ಒಟ್ಟಾರೆ 6 ಜಂಪ್‌ಗ್ಳ ಅವಕಾಶದಲ್ಲಿ ಮೊದಲ 5 ಸುತ್ತು ಮುಗಿದಾಗ ಉನ್ನತಿ ಅಯ್ಯಪ್ಪ 5ನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಉನ್ನತಿ ಒಟ್ಟು 5.40 ಮೀ. ದೂರಕ್ಕೆ ಜಿಗಿದರು. ನೇರವಾಗಿ ಪ್ರಥಮ ಸ್ಥಾನ ಪಡೆದು ಚಿನ್ನದ ಮಂದಹಾಸ ಬೀರಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯೂ ಹೌದು.