Advertisement

ವಿಶೇಷಚೇತನ ಮಕ್ಕಳಿಂದ ಜಂಗಲ್‌ ಬುಕ್‌ ನೃತ್ಯರೂಪಕ

11:50 AM Dec 05, 2018 | |

ಬೆಂಗಳೂರು: ಪುಟಾಣಿಗಳಿಗೆ ಪ್ರಿಯವಾದ ದಿ ಜಂಗಲ್‌ ಬುಕ್‌ ಕಥೆ ನೃತ್ಯರೂಪಕ ಮೂಲಕ ಪ್ರಸ್ತುತ ಪಡಿಸುವ ಪ್ರಯತ್ನಕ್ಕೆ ವಿಶೇಷ ಚೇತನರು ಕೈ ಹಾಕಿದ್ದಾರೆ. ಬಹುತೇಕ ಮಕ್ಕಳ ನೆಚ್ಚಿನ ಕಥೆಗಳಲ್ಲಿ ಒಂದಾದ ದಿ ಜಂಗಲ್‌ಬುಕ್‌ನ ಅಭಿನಯಕ್ಕೆ ಬಣ್ಣ ಹಚ್ಚಲು ಚಿಣ್ಣರು ಸಜ್ಜಾಗಿದ್ದಾರೆ. 

Advertisement

ದಿ ಜಂಗಲ್‌ ಬುಕ್‌ನ ಮೊಗ್ಲಿ ಕಥೆ ಹೇಳಲು ಮಾತು ಬಾರದ, ಕಿವಿ ಕೇಳದ, ಬುದ್ಧಿಮಾಂದ್ಯ ಮಕ್ಕಳು ಹಾಗೂ ಡೌನ್‌ ಸಿನ್‌ಡ್ರೋಮ್‌ ಕಾಯಿಲೆ ಇರುವ ಮಕ್ಕಳು ಸೇರಿದಂತೆ ವಿವಿಧ ವೈಕಲ್ಯವುಳ್ಳ 70 ಪುಟಾಣಿಗಳು ಈ ನೃತ್ಯರೂಪಕದಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಆರ್‌.ವಿ.ಇಂಟಿಗ್ರೆಟೆಡ್‌ ಸ್ಕೂಲ್‌ ಫಾರ್‌ ದಿ ಹಿಯರಿಂಗ್‌ ಇಂಪೇರ್‌ ಶಾಲೆಯ ಮಾತು ಬಾರದ

ಮತ್ತು ಕಿವಿ ಕೇಳದ 40 ಮಕ್ಕಳು, ಜೆ.ಪಿ.ನಗರದಲ್ಲಿರುವ ಇಮೇಜಿನೇರಿಯಂ ಶಾಲೆಯ ಮಕ್ಕಳು ಹಾಗೂ ಮತ್ತಿಕೆರೆಯಲ್ಲಿರುವ ಚಿರಂತನ ಸಂಸ್ಥೆಯ ಚಿಣ್ಣರು ಜಂಗಲ್‌ ಬುಕ್‌ನ ಮೊದಲ ಭಾಗದ ಕಥೆಗೆ ಬಣ್ಣ ಹಚ್ಚಲಿದ್ದಾರೆ. ಈ ಮಕ್ಕಳಿಗೆ ಕಳೆದ 3 ತಿಂಗಳಿನಿಂದ ಚಿರಂತನ ಸ್ವಯಂಸೇವಾ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ರಚನಾ ಪ್ರಸಾದ್‌, ಸೌಮಿನಿ ಮಂಜುನಾಥ್‌ ಹಾಗೂ ದೀಪ್ತಿ ಶರ್ಮಾ ತರಬೇತಿ ನೀಡುತ್ತಿದ್ದಾರೆ.

ಮೊದಲ ನೃತ್ಯರೂಪಕ: ರುಡ್ಯಾರ್ಡ್‌ ಕಿಪ್ಲಿಂಗ್‌ 1894 ದಿ ಜಂಗಲ್‌ ಬುಕ್‌ ಕೃತಿ ರಚಿಸಿದ್ದಾರೆ. ಈ ಕೃತಿಯನ್ನಾಧಾರಿಸಿ 1967ರಲ್ಲಿ ಡಿಸ್ನಿ ಪ್ರೊಡಕ್ಷನ್‌ ಸಂಸ್ಥೆ ಚಲನಚಿತ್ರ ತಯಾರಿಸಿದೆ. ಅಲ್ಲದೆ ನಂತರದ ದಿನಗಳಲ್ಲಿ ಹಲವು ಕಲಾವಿದರು ಇದನ್ನು ರಂಗರೂಪಕ್ಕೆ ಅಳವಡಿಸಿ ಅಭಿನಯಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಜಂಗಲ್‌ ಬುಕ್‌ ನೃತ್ಯರೂಪಕವಾಗಿ ಮೂಡಿಬರುತ್ತಿದೆ. 1 ಗಂಟೆ 15 ನಿಮಿಷದ ನೃತ್ಯರೂಪಕ ಇದಾಗಿದೆ.

ದಿ ಜಂಗಲ್‌ ಬುಕ್‌ನ ಕಥೆ: ಮೊಗ್ಲಿ ಎಂಬ ಹುಡುಗ ತನ್ನ ತಂದೆ ತಾಯಿಗಳ ಜೊತೆ ಕಾಡಿಗೆ ಭೇಟಿ ನೀಡಿದಾಗ ಶೇರ್‌ಖಾನ್‌ ಹುಲಿ ಅವನ ಪೋಷಕರನ್ನು ಕೊಲ್ಲುತ್ತದೆ. ಆಗ ಒಂಟಿಯಾದ ಮೊಗ್ಲಿಯನ್ನು ತೋಳಗಳು ಸಾಕುತ್ತವೆ. ತೋಳಗಳೊಂದಿಗೆ ಮೊಗ್ಲಿ ಬೆಳೆಯುತ್ತಿದ್ದಾನೆ ಎಂದು ತಿಳಿದ ಶೇರ್‌ಖಾನ್‌ ಹುಲಿ ಅವನನ್ನು ಕೊಲ್ಲಲ್ಲು ಪ್ರಯತ್ನಿಸುತ್ತಿರುತ್ತದೆ.

Advertisement

ಇದನ್ನು ತಿಳಿದ ಮೊಗ್ಲಿ ಕಾಡಿನಿಂದ ಹೊರ ಹೊಗಲು ನಿರ್ಧರಿಸುತ್ತಾನೆ. ಆದರೆ ಕಾಡುಪ್ರಾಣಿಗಳಿಗೆ ಮೊಗ್ಲಿ ಎಂದರೆ ಅಚ್ಚುಮೆಚ್ಚು. ಆತ ಕಾಡಿನಿಂದ ಹೊರ ಹೋಗುವ ನಿರ್ಧಾರಕ್ಕೆ ಕಾಡುಪ್ರಾಣಿಗಳು ಒಪ್ಪುವುದಿಲ್ಲ. ಕಡಗೆ ಕಾಡುಪ್ರಾಣಿಗಳ ಸಹಾಯದಿಂದ ಮತ್ತು ಮೊಗ್ಲಿಯ ಬುದ್ಧಿವಂತಿಕೆಯಿಂದ ಶೇರ್‌ಖಾನ್‌ ಹುಲಿಯನ್ನು ಕೊಲ್ಲುವುದು ಜಂಗಲ್‌ ಬುಕ್‌ನ ಕಥಾವಸ್ತುವಾಗಿದೆ.

ಡಿ.17ರಂದು ಪ್ರದರ್ಶನ: ಚಿರಂತನ ಸ್ವಯಂಸೇವಾ ಸಂಸ್ಥೆಯಿಂದ ಡಿ.17ರಂದು ಹಮ್ಮಿಕೊಳ್ಳಲಾಗಿರುವ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷಚೇತನ ಮಕ್ಕಳು ಜಂಗಲ್‌ಬುಕ್‌ ನೃತ್ಯರೂಪಕ ಪ್ರದರ್ಶಿಸಲಿದ್ದಾರೆ. ಜೆಪಿ ನಗರದಲ್ಲಿರುವ ಆರ್‌.ವಿ.ಡೆಂಟಲ್‌ ಕಾಲೇಜಿನ ಸಭಾಂಗಣದಲ್ಲಿ ಸಂಜೆ 6 ರಿಂದ 8ರವರೆಗೆ ಕಾರ್ಯಕ್ರಮ ನಡೆಯಲಿದೆ. ಡಿಸಿಪಿ ಅಣ್ಣಮಲೈ, ರಾಷ್ಟ್ರೀಯ ನೂತನ ಶಿಕ್ಷಣ ನೀತಿಯ ಕರಡು ಸಮಿತಿಯ ಸದಸ್ಯ ಎಂ.ಕೆ.ಶ್ರೀಧರ್‌, ನಟ ಸಿಹಿಕಹಿ ಚಂದ್ರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಚಿರಂತನ ಸಂಸ್ಥೆ ಕಳೆದ 10 ವರ್ಷಗಳಿಂದ ವಿಶೇಷಚೇತನ ಮಕ್ಕಳಿಗೆ ರಂಗಭೂಮಿಯ ಮೂಲಕ ಶಿಕ್ಷಣ ನೀಡುತ್ತಿದೆ. ಈ ಬಾರಿ 10ನೇ ವಾರ್ಷಿಕೋತ್ಸವಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಬೇಕೆಂದು ಆಲೋಚಿಸಿದಾಗ ಮೂಡಿದ ಯೋಜನೆ ಇದಾಗಿದೆ. ಪ್ರೇಕ್ಷಕರು ಮಕ್ಕಳ ಈ ಕಲಾ ಪ್ರದರ್ಶನವನ್ನು ವಿಮರ್ಶೆಗೊಳಪಡಿಸದೆ ನೋಡಿ ಆನಂದಿಸಬೇಕು.
-ರಚನಾ ಪ್ರಸಾದ್‌, ಚಿರಂತನ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ

* ಶ್ರುತಿ ಮಲೆನಾಡತಿ

Advertisement

Udayavani is now on Telegram. Click here to join our channel and stay updated with the latest news.

Next