ಪಡುಬಿದ್ರಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ ಪ್ರತಿಯೊಂದು ಕಂಬಳಕ್ಕೆ ಸರಕಾರವು ತಲಾ 5 ಲಕ್ಷ ರೂ. ಅನುದಾನವನ್ನು ಹಿಂದೆ ನೀಡುತ್ತಿದ್ದು, ಈ ವರ್ಷ ಬಿಡುಗಡೆ ಯಾಗಿಲ್ಲ. ಕೂಡಲೇ ಅನುದಾನ ಬಿಡುಗಡೆ ಆಗ್ರಹಿಸಿ ಜೂ. 27ರಂದು ಜಿಲ್ಲಾ ಕಂಬಳ ಸಮಿತಿಯಿಂದ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡುವ ಕುರಿತು ತೀರ್ಮಾನಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ತಿಳಿಸಿದ್ದಾರೆ.
ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಜೂ. 16ರಂದು ಜರಗಿದ ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ಸರಕಾರದ ಅನುದಾನ ಬಿಡುಗಡೆ ಕುರಿತು ಸಮಿತಿಯ ಪದಾಧಿಕಾರಿಗಳು, ಕಂಬಳಗಳ ವ್ಯವಸ್ಥಾಪಕರ ಜತೆ ನಡೆದ ಸಮಾಲೋಚನೆ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕಂಬಳವನ್ನು ಬೆಳೆಸಿ, ಉಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಪ್ರೋತ್ಸಾಹಿಸಬೇಕು. 24 ಕಂಬಳಗಳಿಗೆ ಅನುದಾನ ತಲಾ 5 ಲಕ್ಷ ರೂ. ಮಂಜೂರಾಗಿದ್ದರೂ ಬಿಡುಗಡೆ ಯಾಗಿಲ್ಲ. ಸ್ಪೀಕರ್ ಯು. ಟಿ. ಖಾದರ್ ನೇತೃತ್ವದಲ್ಲಿ ಜೂ. 27ರಂದು ಕಂಬಳ ಸಮಿತಿಯ ಪ್ರಮುಖರು, ಕಂಬಳ ವ್ಯವಸ್ಥಾ ಪಕರು ಬೆಂಗಳೂರಿನಲ್ಲಿ ಮುಖ್ಯಮಂತ್ರಿ, ಕ್ರೀಡಾ ಸಚಿವರು, ಪ್ರವಾಸೋದ್ಯಮ ಸಚಿವರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರನ್ನು ಭೇಟಿಯಾಗಿ ಶೀಘ್ರ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತೇವೆ. ಕಂಬಳದ ಮಹತ್ವದ ಕುರಿತು ಮನವರಿಕೆ ಮಾಡುತ್ತೇವೆ. ಸದಾನಂದ ಗೌಡರು ಸಿಎಂ ಆಗಿದ್ದಾಗ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದರೂ ತಾಂತ್ರಿಕ ಕಾರಣಗಳಿಂದ 35 ಲಕ್ಷ ರೂ. ಮಾತ್ರ ಕಂಬಳಕ್ಕೆ ವಿನಿಯೋಗಿಸಲು ಸಾಧ್ಯವಾಗಿದೆ. ಉಳಿದ ಮೊತ್ತ ಸರಕಾರಕ್ಕೆ ಹಿಂದೆ ಹೋಗಿದೆ ಎಂದು ಡಾ| ಶೆಟ್ಟಿ ಹೇಳಿದರು.
ಮಂಗಳೂರು ಕಂಬಳದ ವ್ಯವಸ್ಥಾಪಕ, ನೂತನ ಸಂಸದರಾಗಿರುವ ಕ್ಯಾ| ಬ್ರಿಜೇಶ್ ಚೌಟ ಅವರ ಅನುಪಸ್ಥಿತಿಯಲ್ಲಿ ಅಭಿನಂದಿಸಲಾಯಿತು.
ಕಟ್ಟುನಿಟ್ಟಿನ ನಿಯಮ ಜಾರಿ
ಕಂಬಳದ ಓಟಗಾರರು ಒಂದು ಕೂಟದಲ್ಲಿ ಗರಿಷ್ಠ 3 ಜತೆ ಕೋಣಗಳನ್ನು ಮಾತ್ರ ಓಡಿಸಬೇಕು ಎಂಬ ನಿಯಮವನ್ನು ಮುಂದಿನ ಕಂಬಳಗಳಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಕಂಬಳ ಶಿಸ್ತು ಸಮಿತಿ ಅಧ್ಯಕ್ಷ ಭಾಸ್ಕರ್ ಎಸ್. ಕೋಟ್ಯಾನ್ ಹೇಳಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಚ್ಚಾರು ಕಲ್ಕುಡೆ ಲೋಕೇಶ್ ಶೆಟ್ಟಿ, ಗೌರವಾಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ, ತೀರ್ಪುಗಾರರ ಸಂಚಾಲಕ ವಿಜಯ ಕುಮಾರ್ ಕಂಗಿನಮನೆ, ಉಪಾಧ್ಯಕ್ಷರಾದ ನವೀನ್‌ಚಂದ್ರ ಆಳ್ವ ತಿರುವೈಲುಗುತ್ತು, ಶ್ರೀಕಾಂತ್ ಭಟ್ ನಂದಳಿಕೆ, ರಶ್ಮಿತ್ ಶೆಟ್ಟಿ ಹೊಕ್ಕಾಡಿಗೋಳಿ, ಸತೀಶ್ಚಂದ್ರ ಸಾಲ್ಯಾನ್, ಸಮಿತಿಯ ಮಾಜಿ ಅಧ್ಯಕ್ಷ ಪಿ. ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.