Advertisement

ಜೂ. 21ರಿಂದ ಹಾಲು ಉತ್ಪಾದಕರಿಗೆ ಪ್ರತೀ ಲೀ. ಹಾಲಿಗೆ 1 ರೂ. ಕಡಿತ

07:56 PM Jun 20, 2020 | Sriram |

ಉಡುಪಿ: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಲ್ಲಿ ಹಾಲು ಶೇಖರಣೆ ಏರಿಕೆಯಾಗಿ ದಿನಕ್ಕೆ 5 ಲಕ್ಷ ಕೆಜಿಗೂ ಅಧಿಕ ಸಂಗ್ರಹವಾಗುತ್ತಿದೆ. ಕೋವಿಡ್‌-19 ಸಮಸ್ಯೆಯಿಂದಾಗಿ ಹಾಲು-ಹಾಲಿನ ಉತ್ಪನ್ನಗಳ ಮಾರಾಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಪ್ರಸ್ತುತ ಸಮಸ್ಯೆ ಪರಿಹರಿಸುವ ನೆಲೆಯಲ್ಲಿ ಜೂ. 21ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀ. ಹಾಲಿಗೆ 1 ರೂ. ಕಡಿಮೆ ಮಾಡಲಾಗಿದೆ ಎಂದು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ತಿಳಿಸಿದ್ದಾರೆ.

Advertisement

ರಾಜ್ಯದಲ್ಲಿ ಹಾಲು-ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸುಮಾರು ಶೇ. 25ರಷ್ಟು ಕುಸಿತವಾಗಿದೆ. ಮಾರ್ಚ್‌ನಲ್ಲಿ ಪ್ರತಿ ಕೆಜಿ ಕೆನೆರಹಿತ ಹಾಲಿನ ಪುಡಿಗೆ 340 ರೂ. ಮಾರುಕಟ್ಟೆ ದರವಿದ್ದು, ಪ್ರಸ್ತುತ ದೇಶಾದ್ಯಂತ ಹಾಲಿನ ಹುಡಿ ದಾಸ್ತಾನು ಹೆಚ್ಚಳದಿಂದ ಪ್ರತಿ ಕೆಜಿಗೆ 160 ರೂ.ಗೆ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ. ಮಾರುಕಟ್ಟೆಯಲ್ಲಿ ಬೆಣ್ಣೆಯ ದರ ಇಳಿಕೆಯಾಗಿದ್ದು, ಸೆಪ್ಟಂಬರ್‌ ಅಂತ್ಯಕ್ಕೆ ಒಕ್ಕೂಟದಲ್ಲಿ 9.5 ಲಕ್ಷ ಕೆಜಿ ಹೆಚ್ಚುವರಿ ಬೆಣ್ಣೆ ದಾಸ್ತಾನು ಉಳಿಯಲಿದೆ.

ಶಾಲೆ ಆರಂಭವಾಗದೆ ಸಮಸ್ಯೆ
ಹಾಲು ಮಹಾಮಂಡಳಿಯ ದಾಸ್ತಾನು ಮಳಿಗೆಗಳಲ್ಲಿ ಪರಿವರ್ತಿತ ಹಾಲಿನ ಪುಡಿ, ಬೆಣ್ಣೆ ದಾಸ್ತಾನು ಹೆಚ್ಚಾಗಿದ್ದು, ಶೇಖರಿಸಲಾಗದೆ ಖಾಸಗಿ ದಾಸ್ತಾನು ಮಳಿಗೆಗಳಿಗೆ ದುಬಾರಿ ಬಾಡಿಗೆ ನೀಡಿ ದಾಸ್ತಾನು ಮಾಡಬೇಕಾಗಿದೆ. ಶಾಲೆಗಳ ಪ್ರಾರಂಭ ವಿಳಂಬವಾಗಿ ಕೆನೆಭರಿತ ಹಾಲಿನ ಪುಡಿ ಮಾರಾಟವೂ ಸಾಧ್ಯವಾಗುತ್ತಿಲ್ಲ.

ಶೇ. 25ರಷ್ಟು ಮಾರಾಟ ಕುಸಿತ
ಈ ಸಾಲಿನ ಪ್ರಥಮ 3 ತಿಂಗಳಲ್ಲಿ ಒಕ್ಕೂಟದ ಹಾಲು-ಹಾಲಿನ ಉತ್ಪನ್ನಗಳ ಮಾರಾಟ ಸುಮಾರು ಶೇ. 25ರಷ್ಟು ಕುಸಿತವಾಗಿ 30 ಕೋ.ರೂ. ವಹಿವಾಟು ಕಡಿಮೆಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ವಾರ್ಷಿಕ ಅಂದಾಜು 120 ಕೋ.ರೂ. ವಹಿವಾಟು ಕಡಿಮೆಯಾಗಿ ಒಕ್ಕೂಟಕ್ಕೆ ಅಂದಾಜು 20 ಕೋ. ರೂ. ನಷ್ಟವಾಗುವ ಸಾಧ್ಯತೆಯಿದೆ.

ಕೋವಿಡ್‌-19ರ ಸಮಸ್ಯೆ ನಿರ್ವಹಿಸಲು ರಾಜ್ಯದ ಹಾಲು ಒಕ್ಕೂಟಗಳಲ್ಲಿ ಪ್ರತೀ ಲೀ.ಗೆ ಕನಿಷ್ಠ 2.20 ರೂ.ಗಳಿಂದ 4.70 ರೂ. ವರೆಗೆ ಖರೀದಿ ದರ ಕಡಿಮೆ ಮಾಡಲಾಗಿದೆ. ಪ್ರಸ್ತುತ ಸಮಸ್ಯೆ ಪರಿಹರಿಸಲು ಜೂ. 21ರಿಂದ ಹಾಲು ಉತ್ಪಾದಕರಿಂದ ಖರೀದಿಸುವ ಪ್ರತೀ ಲೀ. ಹಾಲಿಗೆ 1 ರೂ. ಕಡಿತಗೊಳಿಸುವುದು ಅನಿವಾರ್ಯವಾಗಿದೆ ಎಂದು ರವಿರಾಜ ಹೆಗ್ಡೆ ತಿಳಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next