Advertisement

ಮಡಂತ್ಯಾರು: ಜಂಕ್ಷನ್‌ ಅಭಿವೃದ್ಧಿಯೂ ಪೇಟೆ ಬೆಳವಣಿಗೆ ನಿರ್ಧರಿಸೀತು

10:53 AM Aug 03, 2018 | |

ಮಡಂತ್ಯಾರು : ಬೆಳ್ತಂಗಡಿ ತಾಲೂಕಿನಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಪೇಟೆ ಮಡಂತ್ಯಾರು. ಇದಕ್ಕೆ ಪೂರಕವಾಗಿರುವ ಜಂಕ್ಷನ್‌ ದಿನೇ ದಿನೆ ಆರ್ಥಿಕ ಚಟುವಟಿಕೆಯ ತಾಣವಾಗಿ ಮಾರ್ಪಡುತ್ತಿದೆ. ಧರ್ಮಸ್ಥಳ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಧ್ಯೆ ಇರುವ ಈ ಪ್ರದೇಶ ಕೆಲವೇ ವರ್ಷದಲ್ಲಿ ಸಾಕಷ್ಟು ಬದಲಾಗಿದೆ. ವಾಹನ ದಟ್ಟಣೆ ಹೆಚ್ಚಾಗಿದೆ. ಹಳೇ ಕಟ್ಟಡಗಳು ಹೊಸ ರೂಪ ತಳೆದಿವೆ. ಆದರೆ ಮೂಲ ಸೌಕರ್ಯದ ವಿಷಯದಲ್ಲಿ ಬೇಕುಗಳ ಪಟ್ಟಿ ಪೂರ್ಣಗೊಂಡಿಲ್ಲ.

Advertisement

ಜಂಕ್ಷನ್‌ ಒಂದು ಸಂಪರ್ಕ ಹಲವು
ಜಂಕ್ಷನ್‌ ಸುತ್ತಲಿನ ಹತ್ತಾರು ಗ್ರಾಮಗಳಿಗೆ ಮುಖ್ಯವಾದ ಕೇಂದ್ರವಾಗಿರುವುದರಿಂದ ಒಂದಷ್ಟು ನಿರ್ದಿಷ್ಟ ಅಭಿವೃದ್ಧಿ ಯೋಜನೆಗಳು ಜಾರಿಗೊಳ್ಳಬೇಕು. ಜತೆಗೆ ಈ ಜಂಕ್ಷನ್‌-ಪೇಟೆ ಮಡಂತ್ಯಾರು ಮತ್ತು ಮಾಲಾಡಿ ಗ್ರಾಮ ಪಂಚಾಯತ್‌ಗಳಿಗೆ ಸಂಬಂಧಪಟ್ಟಿದೆ. ಮಡಂತ್ಯಾರು ಪಂಚಾಯತ್‌ ವ್ಯಾಪ್ತಿಯ ಪಾರೆಂಕಿ ಮತ್ತು ಕುಕ್ಕಳ ರಸ್ತೆ ಗ್ರಾಮ ಒಂದು ಬದಿಯಾದರೆ ರಸ್ತೆಯ ಇನ್ನೊಂದು ಬದಿ ಮಾಲಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಸೋಣಂದೂರು ಮತ್ತು ಮಾಲಾಡಿ ಗ್ರಾಮಗಳಿವೆ. ನೋಡಲಿಕ್ಕೆ ನಾಲ್ಕು ಗ್ರಾಮಗಳಿಗೆ ಸೀಮಿತವಾದದ್ದು ಎಂದೆನಿಸಿದರೂ ಜಂಕ್ಷನ್‌ ಇನ್ನೂ ಹತ್ತು ಗ್ರಾಮಗಳಿಗೆ ಸಂಪರ್ಕದ ಕೇಂದ್ರ ಬಿಂದುವಾಗಿದೆ. ಜನರ ನಿತ್ಯದ ಅಗತ್ಯಗಳಿಗೆ ಜಂಕ್ಷನ್‌ ಒಂದು ಪರಿಹಾರವಾಗಿದೆ.

ಹೆಚ್ಚುತ್ತಿರುವ ವಾಹನ ದಟ್ಟಣೆ
ರಾಷ್ಟ್ರೀಯ ಹೆದ್ದಾರಿಯಾದ ಕಾರಣ ವಾಹನ ದಟ್ಟಣೆ ಸಾಮಾನ್ಯ. ಆದರೂ ಜಂಕ್ಷನ್‌ -ಪೇಟೆಯಲ್ಲಿ ವಾಹನ ಒತ್ತಡ ಹೆಚ್ಚುತ್ತಿದೆ. ಹಾಗಾಗಿ ಟ್ರಾಫಿಕ್‌ ಜಾಮ್‌ ಸಮಸ್ಯೆ ಇದೆ. ಇದರೊಂದಿಗೆ ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆ ಇಲ್ಲದ ಕಾರಣ, ಅಡ್ಡಾದಿಡ್ಡಿ ನಿಂತ ವಾಹನಗಳ ದೃಶ್ಯವೇ ಹೆಚ್ಚು. ಇದು ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿದೆ. ರಸ್ತೆ ಬದಿವರೆಗೂ ಅಂಗಡಿಗಳೇ ಇರುವುದರಿಂದ ಪಾರ್ಕಿಂಗ್‌ಗೆಂದು ಜಾಗವಿಲ್ಲ.

ಸವಲತ್ತು ಬೇಕಿದೆ
2011 ರ ಜನಗಣತಿ ಪ್ರಕಾರ ಪಾರೆಂಕಿ, ಕುಕ್ಕಳ ಗ್ರಾಮದ ಜನಸಂಖ್ಯೆ 6,273. ಸೋಣಂದೂರು ಮಾಲಾಡಿ ಗ್ರಾಮದ ಜನಸಂಖ್ಯೆ 6,898. ಜಂಕ್ಷನ್‌ನಲ್ಲಿ ಏನೇ ಅವಘಡ ಘಟಿಸಿದರೂ ತುರ್ತು ಚಿಕಿತ್ಸೆಗೆಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುಂಜಾಲಕಟ್ಟೆಗೆ ಹೋಗಬೇಕು ಎರಡೂ ಗ್ರಾ.ಪಂ. ವ್ಯಾಪ್ತಿಯ ಉಪ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ.

ಬಸ್ಸು ತಂಗುದಾಣ  ಸ್ಥಳಾಂತರವಾಗಲಿ
ಬೆಳಗ್ಗೆ ಮತ್ತು ಸಂಜೆ ಶಾಲಾ-ಕಾಲೇಜು ಮಕ್ಕಳ ಸಂಖ್ಯೆ ಈ ಜಂಕ್ಷನ್‌ನಲ್ಲಿ ಅತಿ ಹೆಚ್ಚಿರುತ್ತದೆ. ಪೇಟೆಯಲ್ಲಿ ಎರಡು ಕಡೆ ಬಸ್‌ ತಂಗುದಾಣವಿದ್ದು ಒಂದು ಧರ್ಮಸ್ಥಳ ಕಡೆ ಬಸ್‌ ನಿಲುಗಡೆಯಾದರೆ ಇನ್ನೊಂದು ಮಂಗಳೂರು ಬಸ್‌ ನಿಲುಗಡೆಯಾಗುತತ್ತದೆ. ಎರಡರಲ್ಲೂ ಜನಜಂಗುಳಿ. ಮಳೆ ಬಂದರೆ ನಿಲ್ಲಲು ಜಾಗವಿಲ್ಲ. ರಸ್ತೆಯೂ ಹೆಚ್ಚು ಅಗಲವಿಲ್ಲದ್ದರಿಂದ ಬಸ್‌ಗಳು ರಸ್ತೆಯಲ್ಲೇ ನಿಂತಾಗ ಟ್ರಾಫಿಕ್‌ ಜಾಮ್‌ ಕಟ್ಟಿಟ್ಟದ್ದು. ಅದಕ್ಕಾಗಿ ಪೇಟೆಯ ಮೇಲ್ಭಾಗಕ್ಕೆ ತಂಗುದಾಣ ಸ್ಥಳಾಂತರವಾದರೆ ಸಮಸ್ಯೆ ಬಗೆಹರಿಯಬಹುದು.

Advertisement

ಮಾಲಾಡಿ ಪಂಚಾಯತ್‌ ವ್ಯಾಪ್ತಿಯ ಬಸ್‌ ತಂಗುದಾಣಕ್ಕೆ ಸಂಬಂಧಿಸಿ ಶೌಚಾಲಯವೂ ಇಲ್ಲ ಇವೆಲ್ಲಕ್ಕೂ ಪರಿಹಾರ ಸಿಕ್ಕರೆ ಜಂಕ್ಷನ್‌ ಅಭಿವೃದ್ಧಿಗೆ ಮತ್ತಷ್ಟು ಅವಕಾಶ ಸೃಷ್ಟಿಯಾದೀತು. ಪಂಚಾಯತ್‌ ಅಧಿಕಾರಿಗಳೂ, ರಾಷ್ಟ್ರೀಯ ಹೆದ್ದಾರಿ ಆದ ಕಾರಣ ಸರಕಾರದ ಗಮನಕ್ಕೆ ತರುವುದಾಗಿ ತಿಳಿಸುತ್ತಾರೆ.

ಇಲ್ಲಿ ಏನೇನಿದೆ?
ಮಡಂತ್ಯಾರು ಮೆಸ್ಕಾಂ ಇಲಾಖೆ, ಗ್ರಾಮ ಪಂಚಾಯತ್‌ಗಳು, ಶಾಲಾ ಕಾಲೇಜು, ಪ್ಯಾಕ್ಟರಿಗಳು, ಜವುಳಿ ಮಳಿಗೆಗಳು, ಚರ್ಚ್‌, ಮಸೀದಿ, ದೇವಸ್ಥಾನಗಳು, ರಾಷ್ಟ್ರೀಕೃತ ಬ್ಯಾಂಕ್‌ಗಳು, ಸಹಕಾರಿ ಬ್ಯಾಂಕ್‌ಗಳು, ಸಂಘ ಸಂಸ್ಥೆಗಳು, ಮದುವೆ ಸಭಾಂಗಣಗಳು, ದ್ವಿ ಚಕ್ರ ಶೋ ರೂಂಗಳು, ಸೂಪರ್‌ ಬಜಾರ್‌ ಇವೆಲ್ಲದಕ್ಕೂ ಇದೇ ಜಂಕ್ಷನ್‌ ಮೂಲಕ ತೆರಳಬೇಕು.

ಹತ್ತು ಸಾವಿರ ಮಂದಿ
ಪೇಟೆಯಲ್ಲಿ ದಿನಕ್ಕೆ ದ್ವಿ ಚಕ್ರವಾಹನ ಸಹಿತ ಸುಮಾರು 600ಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತವೆ. ಬೆಳಗ್ಗೆ 5.30ರಿಂದ ರಾತ್ರಿ 8.30ರವರೆಗೆ ಸುಮಾರು 150ಕ್ಕೂ ಹೆಚ್ಚು ಸರಕಾರಿ ಬಸ್‌ಗಳು ಓಡಾಟ ನಡೆಸುತ್ತವೆ. ಉಪ್ಪಿನಂಗಡಿ, ಕಕ್ಯಪದವು ಖಾಸಗಿ ಬಸ್‌ಗಳೂ ಬರುತ್ತವೆ. ವ್ಯಾಪಾರ, ವ್ಯವಹಾರ, ಶಾಲಾ-ಕಾಲೇಜು ಸಹಿತ ನಿತ್ಯ 10 ಸಾವಿರಕ್ಕೂ ಹೆಚ್ಚು ಮಂದಿ ಇದನ್ನು ಬಳಸುತ್ತಾರೆ.

ನಮ್ಮಿಂದ  ಸಹಕಾರ
ಪೇಟೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವಾಹನ ದಟ್ಟಣೆ ಹೆಚ್ಚು. ಖಾಸಗಿ ಜಾಗವಾದ್ದರಿಂದ ಎಲ್ಲಿಯೂ ನೋ ಪಾರ್ಕಿಂಗ್‌ ಬೋರ್ಡ್‌ ಹಾಕುವಂತಿಲ್ಲ. ಜಂಕ್ಷನ್‌ನಲ್ಲಿ ಪೊಲೀಸ್‌ ನಿಯೋಜನೆ ಮಾಡಿ ಸಂಚಾರ ನಿಯಂತ್ರಿಸುತ್ತಿದ್ದೇವೆ. ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ತೊಂದರೆ ಉಂಟುಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. 
– ಸತೀಶ್‌ ಬಲ್ಲಾಳ್‌
ಪುಂಜಾಲಕಟ್ಟೆ ಠಾಣಾಧಿಕಾರಿ

ತಂಗುದಾಣ ಸ್ಥಳಾಂತರ
ಈಗ ಇರುವ ಬಸ್‌ ನಿಲ್ದಾಣ ಸೇವಾ ಸಹಕಾರಿ ಬ್ಯಾಂಕ್‌ ಬಳಿ ಸ್ಥಳಾಂತರಗೊಂಡರೆ ವಾಹನ ಸಂಚಾರ ನಿಯಂತ್ರಣಕ್ಕೆ ಬರಬಹುದು. ಇದು ರಾಷ್ಟ್ರೀಯ ಹೆದ್ದಾರಿ ಆದ ಕಾರಣ ಗ್ರಾಮಸಭೆ ನಿರ್ಣಯಿಸಿ ಸರಕಾರದಿಂದಲೇ ಮಂಜೂರು ಮಾಡಿಸಿ ನಿಲ್ದಾಣ ಮಾಡಲಾಗುವುದು. ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಸರಕಾರಿ ಸ್ಥಳದ ಕೊರತೆಯಿದ್ದು ಪರಿಹರಿಸಲಾಗುವುದು.
– ಬೇಬಿ ಸುವರ್ಣ
ಗ್ರಾಮ ಪಂ. ಅಧ್ಯಕ್ಷರು ಮಾಲಾಡಿ 

ಬೈಪಾಸ್‌ ಆದರೆ ಉತ್ತಮ
ಇನ್ನೂ 10 ವರ್ಷ ಹೋದರೆ ಪೇಟೆಯಲ್ಲಿ ನಡೆದಾಡುವುದೇ ಕಷ್ಟವಾಗಬಹುದು. ವಾಹನಗಳ ಸಂಖ್ಯೆ ಹೆಚ್ಚಬಹುದು. ಅದಕ್ಕಾಗಿ ಬೈಪಾಸ್‌ ರಸ್ತೆಯಾದರೆ ಅನುಕೂಲವಾಗಲಿದೆ. ಪೇಟೆಯ ಸಮಗ್ರ ಅಭಿವೃದ್ಧಿಗೆ ಎಲ್ಲ ಪ್ರಯತ್ನ ನಡೆಸಲಾಗುವುದು. ಬಸ್‌ ತಂದುದಾಣದ ಬಳಿ ಕುಡಿಯುವ ನೀರಿನ ವ್ಯವಸ್ಥೆ ಶೀಘ್ರವೇ ಕಾರ್ಯರೂಪಕ್ಕೆ ಬರಲಿದೆ.
– ಗೋಪಾಲಕೃಷ್ಣ ಕೆ.
ಅಧ್ಯಕ್ಷರು, ಗ್ರಾ.ಪಂ. ಮಡಂತ್ಯಾರು

 ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next