ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಸಿನಿ ಲೈಫಿನಲ್ಲಿ ಜುಲೈ 6 ಎಂದೂ ಮರೆಯದ ದಿನ. ಅದಕ್ಕೆ ಕಾರಣ ಈ ದಿನದಂದು ತೆರೆ ಕಂಡ ಎರಡು ಸಿನಿಮಾಗಳು. ಸ್ಯಾಂಡಲ್ವುಡ್ ನಲ್ಲಿ ಕಿಚ್ಚನಿಗೆ ಒಂದು ದೊಡ್ಡ ಇಮೇಜ್ ತಂದು ಕೊಟ್ಟ ಹಾಗೂ ಪರಭಾಷೆಗಳಲ್ಲಿ ಸುದೀಪ್ ತಮ್ಮ ಛಾಪು ಮೂಡಿಸಲು ಕಾರಣವಾದ ಚಿತ್ರ ಜುಲೈ 6 ರಂದೇ ತೆರೆ ಕಂಡಿದ್ದವು ಎನ್ನುವುದು ವಿಶೇಷ. ಅಷ್ಟಕ್ಕೂ ಆ ಸಿನಿಮಾಗಳು ಯಾವವು ?
ಕಿಚ್ಚನಿಗೆ ಕನ್ನಡ ಚಿತ್ರರಂಗದಲ್ಲಿ ಒಂದು ಗಟ್ಟಿ ನೆಲೆ ಒದಗಿಸಿಕೊಟ್ಟ ಸಿನಿಮಾಗಳಲ್ಲಿ ಹುಚ್ಚ ಕೂಡ ಒಂದು. ಓಂ ಪ್ರಕಾಶ್ ನಿರ್ದೇಶನದ ಈ ಸಿನಿಮಾ ಸುದೀಪ್ ಅವರಿಗೆ ಸ್ಯಾಂಡಲ್ವುಡ್ ನಲ್ಲಿ ಹೀರೋ ಪಟ್ಟ ತಂದು ಕೊಟ್ಟಿತು. ಈ ಸಿನಿಮಾ ಇಂದಿಗೆ ತೆರೆ ಕಂಡು 20 ವರ್ಷಗಳು ತುಂಬಿವೆ. ಜುಲೈ 6, 2001 ರಂದು ಬಿಡುಗಡೆಯಾದ ‘ಹುಚ್ಚ’ ಸಿನಿಮಾ ಸುದೀಪ್ ಸಿನಿ ಜೀವನವನ್ನೇ ಬದಲಾಯಿಸಿತು. ಈ ದಿನದಿಂದ ಇಂಡಸ್ಟ್ರಿಯಲ್ಲಿ ಹೊಸ ಹೆಜ್ಜೆ ಇಟ್ಟರು. ಇಲ್ಲಿಂದ ಸುದೀಪ್ ಮತ್ತೆ ತಿರುಗಿ ನೋಡಲೇ ಇಲ್ಲ.
ಕನ್ನಡದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದ ಸುದೀಪ್ ಅವರಿಗೆ ಟಾಲಿವುಡ್ ನಲ್ಲೂ ಹೆಸರು ತಂದು ಕೊಟ್ಟ ಚಿತ್ರವೆಂದರೆ ಅದು ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಈ’ಗ. ಈ ಸಿನಿಮಾ ಕೂಡ 2012 ಜುಲೈ 6 ರಂದೇ ತೆರೆಕಂಡಿತ್ತು. ಈ ಚಿತ್ರದ ಮೂಲಕ ಸುದೀಪ್ ಟಾಲಿವುಡ್ ನಲ್ಲಿಯ ಸ್ಟಾರ್ ನಟರಾಗಿ ಗುರುತಿಸಿಕೊಂಡರು.
ಈ ಸವಿ ನೆನಪಿನ ಕ್ಷಣಗಳನ್ನು ತಮ್ಮ ಟ್ವಿಟರಿನಲ್ಲಿ ಹಂಚಿಕೊಂಡಿರುವ ಸುದೀಪ್, ಈ ಎಂದೂ ಮರೆಯಲಾಗದ ಈ ಎರಡು ಸಿನಿಮಾಗಳು ಬಿಡುಗಡೆಯಾಗಿದ್ದು ಜುಲೈ 6 ರಂದು ಎಂದಿದ್ದಾರೆ. ಹಾಗೂ ಈ ಎರಡು ಸಿನಿಮಾಗಳ ನಿರ್ದೇಶಕರಿಗೆ ಧನ್ಯವಾದ ತಿಳಿಸಿದ್ದಾರೆ ಸುದೀಪ್.