Advertisement
ಹೇಗಾಯ್ತುಕಳೆದ ವರ್ಷ ಒಂದಷ್ಟು ಮಂದಿ ಯುವಕರು ತಮ್ಮ ತಮ್ಮಲ್ಲೇ ಚರ್ಚಿಸಿ ಹೀಗೊಂದು ದಿನಾಚರಣೆ ಮಾಡುವ ಬಗೆಯನ್ನು ಮಾತನಾಡಿಕೊಂಡರು. ದಿನ ಹೋದಂತೆ ಅದು ಬೃಹದಾಕಾರವಾಯಿತು. ಪ್ರಪಂಚದ ನಾನಾ ಕಡೆಗಳಿಂದ, ಕುಂದಾಪುರದ ಬೇರಿ ನಿಂದ ಹೊರಟು ಎಲ್ಲೆಡೆ ಚದುರಿದ ಚಟು ವಟಿಕೆ ನಿರತರಿಂದ, ಸೆಲೆಬ್ರಿಟಿಗಳಿಂದ, ಸಂಘಟನೆಗಳಿಂದ ಅಭೂತಪೂರ್ವ ಬೆಂಬಲ ದೊರೆಯಿತು. ಉಡುಪಿ ಜಿಲ್ಲೆಯ ನಾನಾ ಕಡೆ ಮಾತ್ರವಲ್ಲ ದ.ಕ., ಬೆಂಗಳೂರು, ಮುಂಬಯಿ, ಪುಣೆ, ಬಹ್ರೈನ್, ದುಬಾೖ ಹೀಗೆ ವಿಶ್ವದ ನಾನಾ ಕಡೆ ವಿಶ್ವ ಕುಂದಾಪ್ರ ಕನ್ನಡ ದಿನದ ಆಚರಣೆ ನಡೆಯಿತು. ಕುಂದಾಪ್ರ ಕನ್ನಡದ ಕುರಿತು ಚರ್ಚೆಗಳು ನಡೆದವು. ಭಾಷಾ ಸೊಗಡಿನ ಗಾದೆ, ಸಾಹಿತ್ಯ, ಕಥೆ, ಕವನ, ಪ್ರೇಮಪತ್ರ, ಅಬ್ಬಿಗೊಂದು ಪತ್ರ, ಲೇಖನ, ಮಾತು, ಹಳೆಯದಾದ ಬಳಕೆಯಲ್ಲಿಲ್ಲದ ಶಬ್ದಗಳು ಚಾಲನೆಗೆ ಬಂದವು. ಅನಂತರದ ದಿನಗಳಲ್ಲಿ ಕುಂದಗನ್ನಡ ನಿಘಂಟು ಆ್ಯಪ್ ಬಂತು. ಯಾವುದೇ ಒಂದು ನಿರ್ದಿಷ್ಟ ಸಂಘಟನೆಯಿಲ್ಲದೆ, ಎಲ್ಲರೂ ಮುಕ್ತವಾಗಿ, ಸಾಮೂಹಿಕವಾಗಿ ಆಚರಿಸುವ ದಿನವಾಗಿ ಮಾರ್ಪಾಡಾಯಿತು.
ಮಳೆಗಾಲದಲ್ಲಿ ಹಬ್ಬಗಳು ಇರುವುದಿಲ್ಲ, ಜಾತ್ರೆಯಂತಹ ಆಚರಣೆ ಕೆಲವು ಕಡೆಗಷ್ಟೇ ಸೀಮಿತ. ಆಸಾಡಿ ಅಮಾವಾಸ್ಯೆ ಅಂದರೆ ಕರ್ಕಾಟಕ ಅಮಾವಾಸ್ಯೆ ಇಲ್ಲಿನ ಜನರ ಪಾಲಿಗೆ ಶ್ರೇಷ್ಠ ದಿನ. ಹಾಗಾಗಿ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಅಂದೇ ಪ್ರತಿವರ್ಷ ನಡೆಸುವುದು ಎಂದು ಆರಂಭಿಸಲಾಗಿದೆ.
ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಎಲ್ಲಿಯೂ ಸಭಾ ಕಾರ್ಯಕ್ರಮ ನಡೆಯುವುದಿಲ್ಲ. ಆದರೆ ಆನ್‌ಲೈನ್‌ನಲ್ಲಿ ಅನೇಕ ಕಾರ್ಯಕ್ರಮಗಳನ್ನು ಸಂಘಟಕರು ಹಮ್ಮಿಕೊಂಡಿದ್ದಾರೆ. ಕುಂದಾಪ್ರ ಕನ್ನಡದ ಮೇಲೆ ಅಭಿಮಾನ ಉಳ್ಳ ಯಾರು ಬೇಕಾದರೂ ಎಲ್ಲಿ ಬೇಕಾದರೂ ಅವರದ್ದೇ ಮಾದರಿಯಲ್ಲಿ ಅನುಸರಿಸಬಹುದಾದ ಕಾರ್ಯಕ್ರಮವಾಗಿದೆ. ಕುಂದಾಪ್ರ ಕನ್ನಡ ನಮ್ಮದು ಎಂಬ ಹೆಮ್ಮೆಯಿಂದ ಮೆರೆಸುವ ಕಾರ್ಯವಾಗಬೇಕು ಎಂಬ ನಿಟಿ rನಲ್ಲಿ ಈ ದಿನ ಆಚರಿಸಲು ಜನರೆಲ್ಲ ಮುಂದಾಗಿದ್ದಾರೆ. ಈ ಬಾರಿ ಏನೆಲ್ಲ ವಿಶೇಷ ?
ಕುಂದಗನ್ನಡವನ್ನು ಬರಹದ ಭಾಷೆಯಾಗಿ ಬಳಕೆ ಮಾಡಬೇಕು ಹಾಗೂ ನಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ನೆನಪಿಸಿಕೊಳ್ಳಬೇಕು ಎನ್ನುವ ಉದ್ದೇಶದಿಂದ ಅಬ್ಬಿಗೊಂದು ಪತ್ರ ಎನ್ನುವ ಲೇಖನ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ. ಕುಂದಾಪ್ರದ ಖಾದ್ಯಗಳನ್ನು ಮನೆಯಲ್ಲೇ ಮಾಡಿ ಅದನ್ನು ತಯಾರಿಸುವ ವಿಧಾನ ಹೇಗೆ ಎನ್ನುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಸ್ಪರ್ಧೆ ಹಾಗೂ ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳಾದ ಚೆನ್ನಮಣೆ, ಪೇಡಗಾ ಮುಂತಾದ ಆಟಗಳನ್ನು ಮಕ್ಕಳ ಮೂಲಕ ಆಡಿಸಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವುದು, ಕುಂದಾಪ್ರ ಭಾಷೆಯ ಡಬ್‌ಮ್ಯಾಶ್, ವೀಡಿಯೋಗಳನ್ನು ಹಂಚಿಕೊಳ್ಳುವ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.